ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ಮಹತ್ವಾಕಾಂಕ್ಷಿ ಅಭಿಯಾನ ‘ಸ್ವಚ್ಛ ಕಡಲತೀರ ಹಸಿರು ಕೋಡಿ’ ಅಭಿಯಾನಕ್ಕೆ 50ರ ಸಂಭ್ರಮ

ಕುಂದಾಪುರ, ಅ.29: ಸ್ವಚ್ಛ ಪರಿಸರ ನಿರ್ಮಾಣ, ಕಡಲತೀರದ ಸ್ವಚ್ಛತೆ ಹಾಗೂ ಪರಿಸರ ಸಂರಕ್ಷಣೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಸ್ವಚ್ಛತಾ ಕೈಂಕರ್ಯ ‘ಸ್ವಚ್ಛ ಕಡಲತೀರ ಹಸಿರು ಕೋಡಿ’ ಅಭಿಯಾನವು 50ನೇ ಮೈಲಿಗಲ್ಲು ತಲುಪಿದೆ.
ಪ್ರತೀ ತಿಂಗಳ ನಾಲ್ಕನೇ ಶನಿವಾರ ನಡೆಯುವ ಈ ಅಭಿಯಾನವು ವಿವಿಧ ಇಲಾಖೆಗಳು, ಸಾಮಾಜಿಕ ಸಂಘ-ಸಂಸ್ಥೆಗಳು, ಎನ್‌ಜಿಒಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಸಮಾಜಮುಖಿ ಕಾರ್ಯವಾಗಿ ಗಮನ ಸೆಳೆಯುತ್ತಿದೆ.
ಈ ಸ್ವಚ್ಛತಾ ಅಭಿಯಾನದಲ್ಲಿ ಕರಾವಳಿ ಕಾವಲು ಪಡೆ ಪೊಲೀಸರು, ಅರಣ್ಯ ಇಲಾಖೆ, ಪುರಸಭೆ, ಸ್ಥಳೀಯಾಡಳಿತ, ಕಂದಾಯ ಇಲಾಖೆ ಹಾಗೂ ಸಾರ್ವಜನಿಕ ಸೇವಾ ಘಟಕಗಳ ಸಹಭಾಗಿತ್ವ ಮಹತ್ವ ಪಡೆದಿದೆ. ಇದರೊಂದಿಗೆ ಸಾಮಾಜಿಕ ಸಂಘ-ಸಂಸ್ಥೆಗಳು, ಸ್ವಯಂಸೇವಾ ಸಂಸ್ಥೆಗಳು, ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಕೈಜೋಡಿಸುವ ಮೂಲಕ ಸ್ವಚ್ಛತೆಯ ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸುತ್ತಿದ್ದು, ಆ ಮೂಲಕ ಪರಿಸರ ಸಂರಕ್ಷಣೆ ಒಂದು ಇಲಾಖೆಯ ಅಥವಾ ಸಂಸ್ಥೆಯ ಜವಾಬ್ದಾರಿ ಮಾತ್ರವಲ್ಲ, ಅದು ಇಡೀ ಸಮಾಜದ ಸಾಮೂಹಿಕ ಹೊಣೆಗಾರಿಕೆ ಎಂಬುದನ್ನು ಸಾರುತ್ತಿದೆ.
ಅ.31ರಂದು ನಡೆಯುವ 50ರ ಅಭಿಯಾನದಲ್ಲಿ ಹಲವು ಸಂಘಟನೆಗಳು ಕೈಜೋಡಿಸಲಿದ್ದು, ಇಕೋ ಕ್ಲಬ್, ಎನ್ಸಿಸಿ, ಎನ್ನೆಸ್ಸೆಸ್, ಸ್ಕೌಟ್-ಗೈಡ್ಸ್, ರೇಂಜರ್ಸ್ -ರೋವರ್ಸ್ ಹಾಗೂ ಬ್ಯಾರೀಸ್ ಸಂಸ್ಥೆಯ ವಿದ್ಯಾರ್ಥಿ ಗಳು, ಎಸ್‌ಡಿಎಂಸಿ, ಊರಿನವರು ಭಾಗವಹಿಸಲಿದ್ದಾರೆ.
2021ರಿಂದ 2026ರವರೆಗೆ 50 ತಿಂಗಳುಗಳ ಅಭಿಯಾನ!
"ಸುಂದರ ಜಗತ್ತು ಪ್ರಾಕೃತಿಕ ಸೃಷ್ಟಿಯಾಗಿದ್ದು, ಪ್ರಕೃತಿಯ ರಕ್ಷಣೆ ಹಾಗೂ ಸ್ವಚ್ಛತೆಯ ಅರಿವು ಹಾಗೂ ಜವಾಬ್ದಾರಿ ಪ್ರತಿಯೊಬ್ಬರಲ್ಲೂ ಇರಬೇಕು. ಭವಿಷ್ಯದ ನಾಯಕರಾದ ವಿದ್ಯಾರ್ಥಿಗಳಿಂದಲೇ ಸ್ವಚ್ಛತೆಯ ಬಗೆಗಿನ ಕಾಳಜಿ ಹುಟ್ಟು ಹಾಕುವ ನಿಟ್ಟಿನಲ್ಲಿ ಬ್ಯಾರೀಸ್ ಸಂಸ್ಥೆಯು 2021ರ ಸೆ.29ರಂದು ‘ವಿಶ್ವ ಹಸಿರು ಕಟ್ಟಡಗಳ ಸಪ್ತಾಹ’ದ ಅಂಗವಾಗಿ ‘ಸ್ವಚ್ಛ ಕಡಲ ತೀರ- ಹಸಿರು ಕೋಡಿ’ ಹೆಸರಿನಲ್ಲಿ ಈ ಕಾರ್ಯಕ್ರಮ ಆಯೋಜಿಸಿ 50 ತಿಂಗಳುಗಳು ಕಳೆದಿದೆ. ಈ ಕೆಲಸ ನಿರಂತರವಾಗಿ ಮುಂದೆಯೂ ನಡೆಯಲಿದೆ. ವರ್ಲ್ಡ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್ ಕೂಡ ನಮ್ಮ ಕಾರ್ಯವನ್ನು ಶ್ಲಾಘಿಸಿದೆ".
-ಸಯ್ಯದ್ ಮುಹಮ್ಮದ್ ಬ್ಯಾರಿ, ಸಂಚಾಲಕರು, ಹಾಜಿ ಕೆ.ಮೊಯ್ದಿನ್ ಬ್ಯಾರಿ ಎಜ್ಯುಕೇಶನ್ ಟ್ರಸ್ಟ್
ಸ್ವಚ್ಛತೆ ಎಲ್ಲರ ಹೊಣೆಗಾರಿಕೆಯಾಗಲಿ
ಪರಿಸರವನ್ನು ಸ್ವಚ್ಛವಾಗಿಡುವುದು ಕೇವಲ ಸ್ವಚ್ಛತಾ ಅಭಿಯಾನ ಕೈಗೊಳ್ಳುವ ದಿನಕ್ಕೆ ಸೀಮಿತವಾಗಬಾರದು. ಕಸವನ್ನು ಎಲ್ಲೆಂದರಲ್ಲಿ ಎಸೆಯದಿರುವುದು, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದು, ತ್ಯಾಜ್ಯವನ್ನು ಸೂಕ್ತವಾಗಿ ವಿಲೇವಾರಿ ಮಾಡುವುದು ಹಾಗೂ ಸಾರ್ವಜನಿಕ ಸ್ಥಳಗಳ ಸ್ವಚ್ಛತೆಯನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ.
ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ನಿರಂತರ ಪ್ರಯತ್ನವು ವಿವಿಧ ಇಲಾಖೆಗಳು, ಸಂಘ-ಸಂಸ್ಥೆಗಳು ಮತ್ತು ಸಾರ್ವಜನಿಕರ ಸಹ ಭಾಗಿತ್ವದಲ್ಲಿ ನಡೆಯುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಈ ಬಗ್ಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
ನಿರಂತರ ಸ್ವಚ್ಛತಾ ಕಾರ್ಯದ ಮೂಲಕ ಕಡಲತೀರ ಹಾಗೂ ಸಾರ್ವಜನಿಕ ಸ್ಥಳಗಳ ಸ್ವಚ್ಛತೆ, ಪ್ಲಾಸ್ಟಿಕ್ ಮಾಲಿನ್ಯ ನಿಯಂತ್ರಣ ಮತ್ತು ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರಲಾಗುತ್ತಿದೆ. ಸ್ವಚ್ಛ ಪರಿಸರ ನಿರ್ಮಾಣ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಸಾರ್ವಜನಿಕರು ಅಭಿಯಾನದಲ್ಲಿ ಕೈಜೋಡಿಸುವ ಮೂಲಕ ಸ್ವಚ್ಛ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು ಎಂಬ ಸಂದೇಶವನ್ನು ಸಾರುತ್ತಿದೆ.
"5 ವರ್ಷಗಳ ಹಿಂದೆ ಸ್ವಚ್ಛತಾ ಅಭಿಯಾನ ಆರಂಭಿಸುವಾಗ ನಿರೀಕ್ಷಿತ ಮಟ್ಟದಲ್ಲಿ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಆದರೆ ಹಂತಹಂತವಾಗಿ ಜನರು, ವಿವಿಧ ಇಲಾಖೆ, ಸಂಘ ಸಂಸ್ಥೆಗಳಿಂದ ಉತ್ತಮ ಸ್ಪಂದನ ಸಿಕ್ಕಿತು. ಪ್ರಕೃತಿ ಮಹತ್ವ, ಕಡಲಾಮೆ ಗಳ ಸಂರಕ್ಷಣೆಯ ಉದ್ದೇಶ ಈ ಅಭಿಯಾನದ ಹಿಂದಿದೆ. ಶಿಕ್ಷಣದ ಜೊತೆಗೆ ಮಕ್ಕಳಿಗೆ ಪರಿಸರ ಕಾಳಜಿ ಸಿಗಬೇಕು ಎಂಬುದು ಸಂಸ್ಥೆಯ ಅಧ್ಯಕ್ಷ ಸಯ್ಯದ್ ಬ್ಯಾರಿಯವರ ಕನಸ್ಸಾಗಿದ್ದು, ಇದೊಂದು ಸಮಾಜ ಸೇವೆಯ ಗುರಿ. ಎಲ್ಲಾ ಶಾಲಾ-ಕಾಲೇಜುಗಳು, ಜನರು ಸ್ವಚ್ಛತೆ ಕಾಳಜಿ ವಹಿಸಿದರೆ ನಿಜವಾದ ಸ್ವಚ್ಛ ಭಾರತ ಸಾಧ್ಯ".
-ಅಬ್ದುಲ್ ರಹ್ಮಾನ್ ಬ್ಯಾರಿ, ಅಧ್ಯಕ್ಷರು, ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆ
"ಜೆನ್-ಝಿ ಯುವಸಮುದಾಯದ ಪಾಲ್ಗೊಳ್ಳುವಿಕೆ ಪರಿಸರ ಜಾಗೃತಿಯ ದೃಷ್ಟಿಯಿಂದ ವಿಶೇಷ ಮಹತ್ವ ಹೊಂದಿದೆ. ಪಠ್ಯಪುಸ್ತಕದ ಜ್ಞಾನದೊಂದಿಗೆ ಪ್ರಾಯೋಗಿಕ ಅನುಭವ ದೊರೆತಾಗ ವಿದ್ಯಾರ್ಥಿಗಳಲ್ಲಿ ಪರಿಸರ ಪ್ರೀತಿ, ಸಾಮಾಜಿಕ ಹೊಣೆಗಾರಿಕೆ, ಸ್ವಯಂಸೇವಾ ಮನೋಭಾವ ಹಾಗೂ ಸಾರ್ವಜನಿಕ ಸ್ಥಳಗಳ ಸ್ವಚ್ಛತೆಯ ಬಗ್ಗೆ ಕಾಳಜಿ ಬೆಳೆಯು ತ್ತದೆ. ವಿದ್ಯಾರ್ಥಿಗಳು ಮತ್ತು ಯುವಜನರು ಇಂತಹ ಸಮಾಜಮುಖಿ ಚಟುವಟಿಕೆಗಳಲ್ಲಿ ಭಾಗವಹಿಸಬೇಕಿದೆ.
- ಸಿದ್ದೀಕ್ ಬ್ಯಾರಿ, ಟ್ರಸ್ಟಿ, ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆ
"ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಸಾಮೂಹಿಕ ಜವಾಬ್ದಾರಿ ಮತ್ತು ನಿರಂತರ ಸೇವೆಯ ಮಹತ್ವವನ್ನು ಸಾರುವ ಹೆಜ್ಜೆಯಾಗಿದೆ. ಸ್ವಚ್ಛ ಕಡಲತೀರ, ಸ್ವಚ್ಛ ಪರಿಸರ ಹಾಗೂ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂಬ ಸಂದೇಶವನ್ನು ಈ ಅಭಿಯಾನ ಸಾರುತ್ತಿದ್ದು ಇದೊಂದು ಚಳವಳಿಯಾಗಬೇಕು".
- ಡಾ.ಆಸಿಫ್ ಬ್ಯಾರಿ, ಟ್ರಸ್ಟಿ, ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆ
"ಕೋಟೇಶ್ವರ ಗ್ರಾಪಂ ವ್ಯಾಪ್ತಿಯ ಹಳೆ ಅಳಿವೆಯಿಂದ ಕೋಡಿಯ ಸೀವಾಕ್ ತನಕ ಏಕಕಾಲದಲ್ಲಿ ಒಂದೂವರೆ ಸಾವಿರಕ್ಕೂ ಅಧಿಕ ಮಂದಿಯಿಂದ ಸಮುದ್ರ ತೀರ ಹಾಗೂ ಬೀಚ್ ರಸ್ತೆ ಸಮೀಪದ ಸ್ವಚ್ಛತಾ ಕಾರ್ಯ ನಡೆಯಲಿದ್ದು, ಇದೊಂದು ಇತಿಹಾಸ ಸೃಷ್ಟಿಸುವ ಕಾರ್ಯವಾಗಲಿದೆ.
-ಅಶ್ವಿನಿ ಶೆಟ್ಟಿ, ನಿರ್ದೇಶಕಿ, ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆ






