ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆ: 45ನೇ 'ಸ್ವಚ್ಛ ಕಡಲ ತೀರ-ಹಸಿರು ಕೋಡಿ ಅಭಿಯಾನ'

ಕುಂದಾಪುರ: ಸತತ ಪರಿಶ್ರಮ, ವೈಯಕ್ತಿಕ ಬದ್ಧತೆ, ಸಂಘಟಿತ ಪ್ರಯತ್ನಗಳು ಒಬ್ಬ ವ್ಯಕ್ತಿಯಲ್ಲಿ ನಾಯಕತ್ವದ ಗುಣವನ್ನು ಹುಟ್ಟುಹಾಕುತ್ತದೆ. ಸುಂದರವಾದ ಜಗತ್ತು ಪ್ರಾಕೃತಿಕ ಸೃಷ್ಟಿಯಾಗಿದ್ದು ಪ್ರಕೃತಿಯ ರಕ್ಷಣೆ ಹಾಗೂ ಸ್ವಚ್ಚತೆಯ ಅರಿವು ಹಾಗೂ ಜವಬ್ದಾರಿ ಪ್ರತಿಯೊಬ್ಬರಲ್ಲೂ ಇರಬೇಕು. ಭವಿಷ್ಯದ ನಾಯಕರಾದ ವಿದ್ಯಾರ್ಥಿಗಳಿಂದಲೇ ಸ್ವಚ್ಛತೆಯ ಬಗೆಗಿನ ಕಾಳಜಿ ಮೂಡಿಸುವ ನಿಟ್ಟಿನಲ್ಲಿ ಬ್ಯಾರೀಸ್ ಸಂಸ್ಥೆ ಈ ಕಾರ್ಯಕ್ರಮ ಆಯೋಜಿಸುತ್ತಿದೆ ಎಂದು ಹಾಜಿ ಕೆ.ಮೊಯ್ದಿನ್ ಬ್ಯಾರಿ ಎಜ್ಯುಕೇಶನ್ ಟ್ರಸ್ಟ್ನ ಸಂಚಾಲಕ ಸಯ್ಯದ್ ಮುಹಮ್ಮದ್ ಬ್ಯಾರಿ ಹೇಳಿದ್ದಾರೆ.
ತಾಲೂಕಿನ ಕೋಡಿಯ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಆಯೋಜನೆಯಲ್ಲಿ ರವಿವಾರ ಹಮ್ಮಿಕೊಂಡಿದ್ದ 45ನೇ 'ಸ್ವಚ್ಛ ಕಡಲ ತೀರ-ಹಸಿರು ಕೋಡಿ ಅಭಿಯಾನ' ಉದ್ದೇಶಿಸಿ ಅವರು ಮಾತನಾಡಿದರು.
ರೆಡ್ ಕ್ರಾಸ್ ಸಂಸ್ಥೆಯ ಜಯಕರ್ ಶೆಟ್ಟಿ ಮಾತನಾಡಿ, ನಿತ್ಯ ಜೀವನದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಆದಷ್ಟು ಕಡಿಮೆಗೊಳಿಸಿ ಭೂಮಿಯ ರಕ್ಷಣೆಯನ್ನು ಮಾಡಬೇಕು. ಶಿಕ್ಷಣದೊಂದಿಗೆ ಪರಿಸರ ಕಾಳಜಿ ವಿದ್ಯಾರ್ಥಿಗಳಲ್ಲಿ ಮೂಡಬೇಕು. ಬ್ಯಾರೀಸ್ ಸಂಸ್ಥೆ ನಡೆಸುತ್ತಿರುವ ಸ್ವಚ್ಛತಾ ಅಭಿಯಾನವು ನಿರಂತರವಾಗಿ ಮುಂದುವರಿಯಲಿ ಎಂದರು.
ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಹಾಜಿ ಕೆ.ಎಂ ಅಬ್ದುಲ್ ರಹ್ಮಾನ್ ಬ್ಯಾರಿ ಮಾತನಾಡಿದರು.
ಬ್ಯಾರೀಸ್ ಗ್ರೂಪ್ ಆಫ್ ಇನ್ ಸ್ಟಿಟ್ಯೂಟ್ ನ ಟ್ರಸ್ಟಿಗಳಾದ ಅಶ್ರಫ್ ಬ್ಯಾರಿ, ಸಿದ್ದೀಕ್ ಬ್ಯಾರಿ, ಡಾ.ಆಸಿಫ್ ಬ್ಯಾರಿ, ನಿರ್ದೇಶಕಿ ಹಾಗೂ ಬ್ಯಾರೀಸ್ ಪಿಯು ಕಾಲೇಜಿನ ಪ್ರಾಂಶುಪಾಲೆ ಅಶ್ವಿನಿ ಶೆಟ್ಟಿ, ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಶಬೀನಾ ಎಚ್., ಬ್ಯಾರೀಸ್ ಡಿಎಡ್, ಬಿಎಡ್ ಕಾಲೇಜಿನ ಪ್ರಾಂಶುಪಾಲೆ ಡಾ.ಫಿರ್ದೌಸ್, ಬ್ಯಾರೀಸ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಡಾ. ಜಯಶೀಲ ಶೆಟ್ಟಿ, ಬ್ಯಾರೀಸ್ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಜಟ್ಟಪ್ಪ ಮತ್ತಿತರರು ಉಪಸ್ಥಿತರಿದ್ದರು.
ಉಪನ್ಯಾಸಕರಾದ ಲಮೀಸ್ ಹಾಗೂ ಐಶ್ವರ್ಯಾ ಕಾರ್ಯಕ್ರಮ ನಿರೂಪಿಸಿದರು.
ಕೋಟೇಶ್ವರದ ಹಳೆಅಳಿವೆಯಿಂದ ಕೋಡಿ ಸಮುದ್ರ ಕಿನಾರೆಯವರೆಗೆ ಸ್ವಚ್ಛತಾ ಕಾರ್ಯ ನಡೆಯಿತು. ಅರಣ್ಯ ಇಲಾಖೆ ಅಧಿಕಾರಿ-ಸಿಬ್ಬಂದಿ, ಕರಾವಳಿ ಕಾವಲು ಪಡೆ ಪೊಲೀಸರು, ಕುಂದಾಪುರ ಪುರಸಭೆಯ ಮಾಜಿ ಸದಸ್ಯರು, ರೆಡ್ಕ್ರಾಸ್ ಸಂಸ್ಥೆ, ರೋಟರಿ ಕ್ಲಬ್, ಲಯನ್ಸ್ ಕ್ಲಬ್, ರಿಫ್ ವಾಚ್, ಎಫ್.ಎಸ್.ಎಲ್., ಸ್ವಯಂ ಸೇವಾ ಸಂಸ್ಥೆಗಳು, ಬ್ಯಾರೀಸ್ ಶಿಕ್ಷಣ ಸಂಸ್ಥೆಯ ಸಲಹಾ ಮಂಡಳಿ ಮತ್ತು ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು, ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ ಬೋಧಕೇತರ ಸಿಬ್ಬಂದಿ, ಪೋಷಕರು, ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.






