ಕೋಡಿಬೆಂಗ್ರೆ| ಪ್ರವಾಸಿ ದೋಣಿ ದುರಂತದಲ್ಲಿ ಮತ್ತೋರ್ವ ಯುವತಿ ಮೃತ್ಯು; ಮೃತರ ಸಂಖ್ಯೆ ಮೂರಕ್ಕೇರಿಕೆ

ದಿಶಾ
ಮಲ್ಪೆ, ಜ.27: ಕೋಡಿ ಕನ್ಯಾನ ಗ್ರಾಮದ ಕೋಡಿಬೇಂಗ್ರೆ ಅಳಿವೆಬಾಗಿಲು ಎಂಬಲ್ಲಿ ಸೋಮವಾರ ಸಂಭವಿಸಿದ ಪ್ರವಾಸಿ ದೋಣಿ ದುರಂತದಲ್ಲಿ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಮತ್ತೋರ್ವ ಯುವತಿ ಮಂಗಳವಾರ ಸಂಜೆ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಮೂಲಕ ಈ ದುರಂತದಲ್ಲಿ ಮೃತರ ಸಂಖ್ಯೆ ಮೂರಕ್ಕೇರಿದೆ.
ಮೃತರನ್ನು ಮೈಸೂರಿನ ದಿಶಾ (26) ಎಂದು ಗುರುತಿಸಲಾಗಿದೆ. ಈ ದುರಂತದಲ್ಲಿ ಚಾಮರಾಜನಗರದ ಜಿಲ್ಲೆಯ ಹರವೆ ಗ್ರಾಮದ ಶಂಕರಪ್ಪ(27) ಹಾಗೂ ಚಾಮರಾಜನಗರ ಜಿಲ್ಲೆಯ ನರಸೀಪುರ ತಾಲೂಕಿನ ಮೂಗೂರು ನಿವಾಸಿ ಸಿಂಧು (25) ಸೋಮವಾರ ಮೃತಪಟ್ಟಿದ್ದರು.
ತೀವ್ರವಾಗಿ ಅಸ್ವಸ್ಥಗೊಂಡು ಮಣಿಪಾಲ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಧರ್ಮರಾಜ (26) ಚಿಕಿತ್ಸೆ ಸ್ಪಂದಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಇವರೆಲ್ಲ ಮೈಸೂರು ಗೋಲ್ ಕ್ರಿಸ್ಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಖಾಸಗಿ ಕಂಪೆನಿಯ ಉದ್ಯೋಗಿಯಾಗಿದ್ದಾರೆ.
ಮೈಸೂರಿನಿಂದ ಎರಡು ದಿನಗಳ ಪ್ರವಾಸಕ್ಕೆ ಬಸ್ಸಿನಲ್ಲಿ ಬಂದಿದ್ದ ಒಟ್ಟು 28 ಮಂದಿಯ ತಂಡ ಮಲ್ಪೆ ಕದಿಕೆಯ ಹೋಮ್ ಸ್ಟೇನಲ್ಲಿ ಉಳಿದು ಕೊಂಡಿತ್ತು. ಸೋಮವಾರ ದೋಣಿಯಲ್ಲಿ ವಿಹಾರಕ್ಕೆ ತೆರಳಿದ್ದ ವೇಳೆ ಅಕಸ್ಮಿಕವಾಗಿ ದೋಣಿ ನೀರಿನಲ್ಲಿ ಪಲ್ಟಿಯಾಗಿ ಈ ದುರಂತ ಸಂಭವಿಸಿತ್ತು.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







