ಕೊಂಕಣ ರೈಲ್ವೆ | ಟಿಕೇಟ್ ರಹಿತ ಪ್ರಯಾಣಿಕರಿಂದ 6 ತಿಂಗಳಲ್ಲಿ 12.81 ಕೋಟಿ ರೂ. ದಂಡ ವಸೂಲಿ

ಸಾಂದರ್ಭಿಕ ಚಿತ್ರ
ಉಡುಪಿ, ನ.11: ಟಿಕೆಟ್ ರಹಿತ ಪ್ರಯಾಣಿಕರ ಪತ್ತೆಗೆ ಕೊಂಕಣ ರೈಲು ಮಾರ್ಗದಲ್ಲಿ ವಿಶೇಷ ಅಭಿಯಾನವನ್ನು ಕೈಗೊಂಡಿರುವ ಕೊಂಕಣ ರೈಲ್ವೆ ಕಳೆದ ಎಪ್ರಿಲ್ ತಿಂಗಳಿನಿಂದ ಸೆಪ್ಟಂಬರ್ ತಿಂಗಳವರೆಗೆ ಆರು ತಿಂಗಳ ಅವಧಿಯಲ್ಲಿ ಒಟ್ಟು 12.81 ಕೋಟಿ ರೂ.ಗಳನ್ನು ದಂಡ ರೂಪದಲ್ಲಿ ಸಂಗ್ರಹಿಸಿದೆ.
2025ರ ಎಪ್ರಿಲ್ ನಿಂದ ಸೆಪ್ಟಂಬರ್ ತಿಂಗಳ ನಡುವಿನ ಆರು ತಿಂಗಳ ಅವಧಿಯಲ್ಲಿ ಕೊಂಕಣ ರೈಲ್ವೆ ಮಾರ್ಗದಲ್ಲಿ ಒಟ್ಟು 5,493 ವಿಶೇಷ ಟಿಕೇಟ್ ತಪಾಸಣಾ ಅಭಿಯಾನ ಕೈಗೊಂಡಿದ್ದು, ಈ ಸಂದರ್ಭದಲ್ಲಿ 1,82,781 ಮಂದಿ ಟಿಕೆಟ್ ರಹಿತ ಹಾಗೂ ಅನಧಿಕೃತವಾಗಿ ಸಂಚರಿಸುವವರನ್ನು ಪತ್ತೆ ಹಚ್ಚಿರುವ ಸಿಬ್ಬಂದಿಗಳು ಅವರಿಂದ ಟಿಕೇಟ್ ಮೌಲ್ಯ ಹಾಗೂ ದಂಡದ ರೂಪದಲ್ಲಿ 12.81 ಕೋಟಿ ರೂ. ಗಳನ್ನು ಸಂಗ್ರಹಿಸಿದ್ದಾರೆ ಎಂದು ಕೊಂಕಣ ರೈಲ್ವೆಯ ಪ್ರಕಟಣೆ ತಿಳಿಸಿದೆ.
ಅಕ್ಟೋಬರ್ ತಿಂಗಳಿನಲ್ಲಿಯೂ ಇದೇ ಅಭಿಯಾನವನ್ನು ಮುಂದುವರಿಸಿ, 920 ವಿಶೇಷ ಅಭಿಯಾನ ಸಂದರ್ಭದಲ್ಲಿ 42,645 ಮಂದಿ ಟಿಕೇಟ್ ರಹಿತ ಹಾಗೂ ಅನಧಿಕೃತವಾಗಿ ಸಂಚರಿಸುವವರನ್ನು ಪತ್ತೆ ಹಚ್ಚಿ ಅವರಿಂದ 2.40 ಕೋಟಿ ರೂ. ಟಿಕೇಟ್ ಮೌಲ್ಯ ಹಾಗೂ ದಂಡವಾಗಿ ವಸೂಲಿ ಮಾಡಲಾಗಿದೆ ಎಂದೂ ಪ್ರಕಟಣೆ ತಿಳಿಸಿದೆ.
ಕೊಂಕಣ ರೈಲ್ವೆ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ಪ್ರಯಾಣಿಕರು ಅಧಿಕೃತವಾದ ಟಿಕೆಟ್ ಖರೀದಿಸಿ ಪ್ರಯಾಣಿಸುವಂತೆ ವಿನಂತಿಸಿರುವ ರೈಲ್ವೆ ಅಧಿಕಾರಿಗಳು ಈ ಮೂಲಕ ಕೆಆರ್ಸಿ ರೈಲಿನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಆಗುವ ಯಾವುದೇ ರೀತಿಯ ತೊಂದರೆಯನ್ನು ತಪ್ಪಿಸುವಂತೆ ವಿನಂತಿಸಿದೆ. ಇನ್ನು ಮುಂದೆಯೂ ಕೊಂಕಣ ರೈಲ್ವೆಯ ಎಲ್ಲಾ ಮಾರ್ಗಗಳಲ್ಲೂ ಟಿಕೆಟ್ ಚಕ್ಕಿಂಗ್ ನ ಇನ್ನಷ್ಟು ತೀವ್ರವಾಗಿ ನಡೆಸಲಾಗುತ್ತದೆ ಎಂದು ಕೊಂಕಣ ರೈಲ್ವೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುನಿಲ್ ಬಿ.ನಾರ್ಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







