ಕೊಂಕಣ ರೈಲ್ವೆ : ಟಿಕೆಟ್ ರಹಿತ ಪ್ರಯಾಣಿಕರಿಂದ ಅಕ್ಟೋಬರ್ ತಿಂಗಳಲ್ಲಿ 2.15 ಕೋಟಿ ರೂ. ದಂಡ ವಸೂಲಿ

ಉಡುಪಿ, ನ.23: ಕೊಂಕಣ ರೈಲು ಮಾರ್ಗದಲ್ಲಿ ಟಿಕೆಟ್ ರಹಿತ ಪ್ರಯಾಣಿಕರ ಪತ್ತೆಗೆ ವಿಶೇಷ ಅಭಿಯಾನ ನಡೆಸುತ್ತಿರುವ ಕೊಂಕಣ ರೈಲ್ವೆ ನಿಗಮ, ಕಳೆದ ಅಕ್ಟೋಬರ್ ತಿಂಗಳಲ್ಲಿ 2.15 ಕೋಟಿ ರೂ.ಗಳನ್ನು ದಂಡ ರೂಪದಲ್ಲಿ ಸಂಗ್ರಹಿಸಿದೆ.
ಕಳೆದ ತಿಂಗಳಿಡೀ ಕೊಂಂಕಣ ರೈಲು ಮಾರ್ಗದಲ್ಲಿ ನಡೆಸಿದ 890 ವಿಶೇಷ ಟಿಕೆಟ್ ತಪಾಸಣಾ ಕಾರ್ಯಾಚರಣೆ ಯಲ್ಲಿ ಒಟ್ಟು 29,536 ಮಂದಿ ಟಿಕೆಟ್ ರಹಿತ ಹಾಗೂ ಅನಧಿಕೃತವಾಗಿ ಪ್ರಯಾಣಿಸುವವರನ್ನು ಪತ್ತೆ ಹಚ್ಚಿರುವ ರೈಲ್ವೆ ಸಿಬ್ಬಂದಿಗಳು ಅವರಿಂದ 2.15 ಕೋಟಿ ರೂ.ಗಳನ್ನು ದಂಡ ಹಾಗೂ ಟಿಕೇಟ್ ಹಣದ ರೂಪದಲ್ಲಿ ಸಂಗ್ರಹಿಸಿದ್ದಾರೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
2026ನೇ ಸಾಲಿನ ಎಪ್ರಿಲ್ 1ರಿಂದ ಅಕ್ಟೋಬರ್ 31ರವರೆಗೆ ಕೊಂಕಣ ರೈಲ್ವೆ ಅಧಿಕಾರಿಗಳು ಒಟ್ಟು 6,316 ವಿಶೇಷ ಟಿಕೆಟ್ ತಪಾಸಣಾ ಕಾರ್ಯಾ ಚರಣೆಯನ್ನು ನಡೆಸಿದ್ದು, 2,62,937 ಮಂದಿ ಟಿಕೆಟ್ ರಹಿತ ಪ್ರಯಾಣಿಕರನ್ನು ಹಾಗೂ ಅನಧಿಕೃತವಾಗಿ ಸಂಚರಿಸುವವರನ್ನು ಪತ್ತೆ ಹಚ್ಚಿ ಅವರಿಂದ ಟಿಕೆಟ್ ಹಣ ಹಾಗೂ ದಂಡದ ರೂಪದಲ್ಲಿ ಒಟ್ಟು 17.31 ಕೋಟಿ ರೂ.ಗಳನ್ನು ಸಂಗ್ರಹಿಸಲಾಗಿದೆ ಎಂದೂ ಪ್ರಕಟಣೆ ತಿಳಿಸಿದೆ.
ಕೊಂಕಣ ರೈಲು ಮಾರ್ಗದಲ್ಲಿ ಈ ವಿಶೇಷ ಕಾರ್ಯಾಚರಣೆಯನ್ನು ರೈಲ್ವೆ ಅಧಿಕಾರಿಗಳು ರೈಲ್ವೆ ರಕ್ಷಣಾ ಪಡೆ (ಆರ್ಪಿಎಫ್)ಯ ನೆರವಿನಿಂದ ರೈಲುಗಳಲ್ಲಿ ಹಾಗೂ ರೈಲು ನಿಲ್ದಾಣಗಳಲ್ಲಿ ನಡೆಸಲಾಗುತ್ತಿದೆ. ಹೀಗಾಗಿ ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರು ಅಧಿಕೃತವಾದ ಟಿಕೇಟ್ ಖರೀದಿಸಿ ಪ್ರಯಾಣಿಸುವಂತೆ ಹೇಳಿಕೆಯಲ್ಲಿ ವಿನಂತಿಸಲಾಗಿದೆ.
ಈ ಮೂಲಕ ಕೆಆರ್ಸಿಎಲ್ನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಆಗುವ ಯಾವುದೇ ರೀತಿಯ ತೊಂದರೆಯನ್ನು ತಪ್ಪಿಸುವಂತೆ ವಿನಂತಿಸಲಾಗಿದ್ದು, ಇನ್ನು ಮುಂದೆಯೂ ಕೊಂಕಣ ರೈಲ್ವೆಯ ಎಲ್ಲಾ ಮಾರ್ಗಗಳಲ್ಲೂ ಇದೇ ರೀತಿಯ ಟಿಕೆಟ್ ತಪಾಸಣೆಯನ್ನು ನಡೆಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.






