ಕೊಂಕಣ ರೈಲ್ವೆ: ಟಿಕೆಟ್ ರಹಿತ ಪ್ರಯಾಣಿಕರಿಂದ ಎಪ್ರಿಲ್ ತಿಂಗಳಲ್ಲಿ 2.90 ಕೋಟಿ ರೂ. ದಂಡ ವಸೂಲಿ

ಉಡುಪಿ, ಮೇ 30: ಟಿಕೆಟ್ ರಹಿತ ಪ್ರಯಾಣಿಕರ ಪತ್ತೆಗೆ ಕೊಂಕಣ ರೈಲು ಮಾರ್ಗದಲ್ಲಿ ವಿಶೇಷ ಅಭಿಯಾನವನ್ನು ಕೈಗೊಂಡಿರುವ ಕೊಂಕಣ ರೈಲ್ವೆ ನಿಗಮ ಕಳೆದ ಎಪ್ರಿಲ್ ತಿಂಗಳಿನಲ್ಲಿ 2.90 ಕೋಟಿ ರೂ. ದಂಡ ರೂಪದಲ್ಲಿ ಸಂಗ್ರಹಿಸಿದೆ.
ಎಪ್ರಿಲ್ ತಿಂಗಳೊಂದರಲ್ಲೇ ಕೊಂಕಣ ರೈಲ್ವೆ ಮಾರ್ಗದಲ್ಲಿ ನಡೆಸಿದ 934 ವಿಶೇಷ ಟಿಕೆಟ್ ತಪಾಸಣಾ ಕಾರ್ಯಾಚರಣೆಯಲ್ಲಿ ಒಟ್ಟು 37,000 ಮಂದಿ ಟಿಕೆಟ್ ರಹಿತ ಹಾಗೂ ಅನಧಿಕೃತವಾಗಿ ಸಂಚರಿಸುವವರನ್ನು ಪತ್ತೆ ಹಚ್ಚಿರುವ ಸಿಬ್ಬಂದಿಗಳು ಅವರಿಂದ 2.90 ಕೋಟಿ ರೂ.ಗಳನ್ನು ದಂಡ ರೂಪದಲ್ಲಿ ಸಂಗ್ರಹಿಸಿದ್ದಾರೆ ಎಂದು ಕೊಂಕಣ ರೈಲ್ವೆಯ ಪ್ರಕಟಣೆ ತಿಳಿಸಿದೆ.
2025-26ನೇ ಸಾಲಿನಲ್ಲಿ ಇದುವರೆಗೆ ಅಂದರೆ ಜನವರಿ ತಿಂಗಳಿನಿಂದ ಎಪ್ರಿಲ್ ತಿಂಗಳ ಕೊನೆಯವರೆಗೆ ಒಟ್ಟು 11,394 ವಿಶೇಷ ಟಿಕೆಟ್ ತಪಾಸಣಾ ಕಾರ್ಯಾಚರಣೆ ನಡೆಸಲಾಗಿದ್ದು, ಒಟ್ಟು 4,99,675 ಮಂದಿ ಟಿಕೆಟ್ ರಹಿತ ಹಾಗೂ ಅನಧಿಕೃತವಾಗಿ ಸಂಚರಿಸುವವರನ್ನು ಪತ್ತೆ ಹಚ್ಚಿ ಅವರಿಂದ ದಂಡದ ರೂಪದಲ್ಲಿ ಒಟ್ಟು 27.68 ಕೋಟಿ ರೂ. ಹಣವನ್ನು ರೈಲ್ವೆ ಖಜಾನೆಗೆ ಸಂಗ್ರಹಿಸಲಾಗಿದೆ ಎಂದೂ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕೊಂಕಣ ರೈಲ್ವೆ ಮಾರ್ಗದಲ್ಲಿ ಈ ವಿಶೇಷ ಕಾರ್ಯಾಚರಣೆಯನ್ನು ರೈಲ್ವೆ ಅಧಿಕಾರಿಗಳು ಹಾಗೂ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ನೆರವಿನಿಂದ ರೈಲುಗಳಲ್ಲಿ ಹಾಗೂ ರೈಲು ನಿಲ್ದಾಣಗಳಲ್ಲಿ ನಡೆಸಲಾಗುತ್ತಿದೆ. ಹೀಗಾಗಿ ಇದರಲ್ಲಿ ಸಂಚರಿಸುವ ಪ್ರಯಾಣಿಕರು ಅಧಿಕೃತವಾದ ಟಿಕೆಟ್ ಖರೀದಿಸಿ ಪ್ರಯಾಣಿಸುವಂತೆ ಹೇಳಿಕೆಯಲ್ಲಿ ವಿನಂತಿಸಲಾಗಿದೆ.
ಈ ಮೂಲಕ ಕೆಆರ್‌ಸಿಎಲ್‌ನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಆಗುವ ಯಾವುದೇ ರೀತಿಯ ತೊಂದರೆಯನ್ನು ತಪ್ಪಿಸುವಂತೆ ರೈಲ್ವೆ ಅಧಿಕಾರಿಗಳು ವಿನಂತಿಸಿದ್ದಾರೆ. ಇನ್ನು ಮುಂದೆಯೂ ಕೊಂಕಣ ರೈಲ್ವೆಯ ಎಲ್ಲಾ ಮಾರ್ಗ ಗಳಲ್ಲೂ ಟಿಕೆಟ್ ತಪಾಸಣೆಯನ್ನು ಇನ್ನಷ್ಟು ತೀವ್ರವಾಗಿ ನಡೆಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.






