ಕೋಟೇಶ್ವರ: ಒಳಪೇಟೆ ರಸ್ತೆ ಹಲವಡೆ ಅತಿಕ್ರಮಣ, ಸಂಚಾರಕ್ಕೆ ಅಡ್ಡಿ; ಗ್ರಾಪಂ ಎದುರು ಜಮಾಯಿಸಿ ಸೂಕ್ತ ಕ್ರಮಕ್ಕೆ ಆಗ್ರಹಿಸಿದ ಗ್ರಾಮಸ್ಥರು

ಕುಂದಾಪುರ, ಜು.17: ತಾಲೂಕಿನಲ್ಲಿ ವೇಗವಾಗಿ ಅಭಿವೃದ್ಧಿಗೊಳ್ಳುತ್ತಿರುವ ಕೋಟೇಶ್ವರ, ವ್ಯಾಪಾರ ವಹಿವಾಟುಗಳ ಪ್ರಮುಖ ಕೇಂದ್ರವಾಗಿದೆ. ಆದರೆ ಇಲ್ಲಿನ ಒಳಪೇಟೆಯಲ್ಲಿ ಲೋಕೋಪಯೋಗಿ ಇಲಾಖೆಗೊಳಪಟ್ಟ ಪ್ರಮುಖ ರಸ್ತೆ ಅಲ್ಲಲ್ಲಿ ಅತಿಕ್ರಮಣವಾಗಿದ್ದು, ಈ ಒತ್ತುವರಿ ಸರಿಪಡಿಸಿ ಸಾರ್ವಜನಿಕರಿಗೆ ಹಾಗೂ ವಾಹನಗಳಿಗೆ ಸುಗಮ ಸಂಚಾ ರಕ್ಕೆ ಯಾವುದೇ ಸಮಸ್ಯೆಯಾಗದಂತೆ ಕ್ರಮವಹಿಸಬೇಕೆಂದು ಶುಕ್ರವಾರ ಅಪರಾಹ್ನ ಕೋಟೇಶ್ವರ ಗ್ರಾ.ಪಂ ಎದುರು ಜಮಾಯಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಪಿಡಬ್ಲ್ಯೂಡಿ ಇಲಾಖೆಯ ಕುಂದಾಪುರ ವಿಭಾಗದ ಕಿರಿಯ ಇಂಜಿನಿಯರ್ ರಾಮು ಶೇಖರ್ ಹೊದ್ಲೂರು ಸ್ಥಳೀಯರ ಸಮಸ್ಯೆ ಆಲಿಸಿದರು. ಕೂಡಲೇ ಈ ಬಗ್ಗೆ ಸಂಬಂದಪಟ್ಟ ಇಲಾಖೆ ಗಳ ಜೊತೆಗೂಡಿ ಸರ್ವೇ ಕಾರ್ಯ ನಡೆಸಿ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ನೀಡುವ ಭರವಸೆ ನೀಡಿದರು.
ಸಮಸ್ಯೆ ಏನು?: ಬೀಜಾಡಿ ಬೈಪಾಸ್‌ನಿಂದ ಕೋಟೇಶ್ವರ ಮೀನು ಮಾರುಕಟ್ಟೆ (ಕಿನಾರ ಜಂಕ್ಷನ್) ತನಕದ ಒಳ ಪೇಟೆಯ ಇಕ್ಕೆಲಗಳಲ್ಲಿ ಪಿಡಬ್ಲ್ಯೂಡಿ ಇಲಾಖೆಗೊಳಪಟ್ಟ ರಸ್ತೆಗೂ ಹೊಂದಿಕೊಂಡಂತೆ ಇರುವ ಬಹಳಷ್ಟು ಭಾಗಗಳಲ್ಲಿ ಒತ್ತುವರಿಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಕೆಲ ಭಾಗಗಳಲ್ಲಿ ರಸ್ತೆಯವರೆಗೂ ಅಂಗಡಿಗಳು, ಅಂಗಡಿಗಳ ಮೇಲ್ಮಾಡು, ಗೇಟುಗಳು ವ್ಯಾಪಿಸಿದೆ.
ತಾಲೂಕು ಕೇಂದ್ರದಿಂದ ಮೂರ್ನಾಲ್ಕು ಕಿ.ಮೀ. ಅಂತರದಲ್ಲಿರುವ ಕೋಟೇಶ್ವರ ನಿತ್ಯ ಬೆಳೆಯುತ್ತಿರುವ ನಗರಗಳ ಪೈಕಿ ಒಂದಾಗಿದ್ದು ವಾಣಿಜ್ಯ ಕ್ಷೇತ್ರದಲ್ಲಿ ಬಹಳಷ್ಟು ಮುಂಚೂಣಿಯಲ್ಲಿದೆ. ಈ ಕಾರಣದಿಂದಾಗಿ ಇಲ್ಲಿನ ಪ್ರಮುಖ ರಸ್ತೆ ಸದಾ ವಾಹನಗಳಿಂದ ಕೂಡಿರುತ್ತದೆ. ಅದೆಷ್ಟೋ ವರ್ಷ ಗಳಿಂದ ಒಳಪೇಟೆಯಲ್ಲಿ ಕುಂದಾಪುರದಿಂದ ಗ್ರಾಮೀಣ ಭಾಗಗಳು ಹಾಗೂ ಉಡುಪಿ ಸಹಿತ ಜಿಲ್ಲೆಯ ವಿವಿದೆಡೆ ತೆರಳುತ್ತಿದ್ದ ಖಾಸಗಿ ಬಸ್ಸುಗಳು ಇಲ್ಲಿನ ಸಮಸ್ಯೆಯಿಂದ ಒಳ ಪ್ರವೇಶವನ್ನೇ ಬಹುತೇಕ ಕಡಿತಗೊಳಿಸಿವೆ.
ಸಾರ್ವಜನಿಕರ ಆಗ್ರಹ: ಒಳಪೇಟೆ ರಸ್ತೆಯಲ್ಲಿ ಸುಗಮ ಸಂಚಾರ ಸಹಿತ ವಾಹನ ಪಾರ್ಕಿಂಗ್ ಸಮಸ್ಯೆ ಹೆಚ್ಚಿದೆ. ಲೋಕೋಪಯೋಗಿ ಇಲಾಖೆ ಗೊಳಪಡುವ ರಸ್ತೆಯಾಗಿರುವುದರಿಂದ ನಿಯಮಾನುಸಾರ ಒತ್ತುವರಿ ಮಾಡಿ ಕೊಂಡವರಿಗೆ ನೋಟಿಸ್ ನೀಡಿ ಅಗತ್ಯ ಕ್ರಮವಹಿಸಬೇಕು. ಕಣ್ಣಿಗೆ ಕಾಣುವ ಒತ್ತುವರಿಯನ್ನು ಶೀಘ್ರ ತೆರವು ಗೊಳಿಸಬೇಕು. ಸ್ಥಳೀಯ ಗ್ರಾ.ಪಂ ವ್ಯಾಪ್ತಿಗೊಳಪಡುವ ಪ್ರದೇಶದಲ್ಲಿಯೂ ಇಂತಹ ಸಮಸ್ಯೆಗಳಿದ್ದು ಅಧಿಕಾರಿಗಳು ಇಚ್ಚಾಶಕ್ತಿಯಿಂದ ಕೆಲಸ ಮಾಡಿದರೆ ಇದೆಲ್ಲವೂ ನಿವಾರಣೆಯಾಗಿ ಜನರಿಗೆ ಅನುಕೂಲವಾಗಲಿದೆ ಎಂದು ಸಾರ್ವ ಜನಿಕರ ಪರವಾಗಿ ಕೋಟೇಶ್ವರ ಗ್ರಾ.ಪಂ ಮಾಜಿ ಸದಸ್ಯ ಲೋಕೇಶ್ ಅಂಕದಕಟ್ಟೆ, ಬೀಜಾಡಿ ಗ್ರಾ.ಪಂ ಮಾಜಿ ಅಧ್ಯಕ್ಷ ಪ್ರಕಾಶ್ ಪೂಜಾರಿ ಬೀಜಾಡಿ, ಸ್ಥಳೀಯ ಪ್ರಮುಖರಾದ ನಾರಾಯಣ ಮೊಗವೀರ, ಮಹೇಶ್ ಶೆಣೈ, ಸ್ಥಳೀಯರು, ರಿಕ್ಷಾ, ವಾಹನ ಚಾಲಕರು, ತಿಳಿಸಿದರು.
ಜಂಟಿ ಸರ್ವೇ ಬಳಿಕ ಅಗತ್ಯ ಕ್ರಮ: ಪಿಡಿಒ
ಕೋಟೇಶ್ವರ ಒಳಪೇಟೆಯಲ್ಲಿ ಕೆಲವೆಡೆ ಅಂಗಡಿ ಕೋಣೆಗಳ ನಿರ್ಮಾಣ, ಸಂಚಾರ ದಟ್ಟಣೆ ಸಮಸ್ಯೆ, ರಸ್ತೆ ಜಾಗ ಒತ್ತುವರಿ ವಿಚಾರದಲ್ಲಿ ಸಾರ್ವಜನಿಕರು ತಮ್ಮ ದೂರು ಹೇಳಿಕೊಂಡಿದ್ದಾರೆ. ಈ ಬಗ್ಗೆ ಕಂದಾಯ, ಲೋಕೋಪ ಯೋಗಿ ಇಲಾಖೆ, ಗ್ರಾಮಪಂಚಾಯತಿ ಜಂಟಿ ಸರ್ವೇ ನಡೆಸಿ, ಗಡಿ ಗುರುತು ಮಾಡಿ, ಒತ್ತುವರಿಯಾದ ಜಾಗವಿದ್ದರೆ ಅದನ್ನು ತೆರವುಗೊಳಿಸಲು ತಕ್ಷಣ ಅಗತ್ಯ ಕ್ರಮವಹಿಸಲಾಗುತ್ತದೆ ಎಂದು ಕೋಟೇಶ್ವರ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ದಿನೇಶ್ ನಾಯ್ಕ್ ಜನತೆಗೆ ಭರವಸೆ ನೀಡಿದ್ದಾರೆ.
‘ಒಳಪೇಟೆ ಅತಿಕ್ರಮಣದ ವಿಚಾರದಲ್ಲಿ ಕೋಟೇಶ್ವರ ಗ್ರಾ.ಪಂಗೆ ಸಾರ್ವಜನಿಕರು ಮುತ್ತಿಗೆ ಹಾಕಿ ಪ್ರತಿಭಟಿಸಿದ್ದು ಲೋಕೋಪಯೋಗಿ ಇಲಾಖೆಗೆ ಸಂಬಂಧಿತ ಕೋಟೇಶ್ವರ-ಮುದ್ದೇರಕಟ್ಟೆ ತನಕದ ಉದ್ದ-ಅಗಲದ ಪರಿಮಿತಿ, ದಾಖಲೆಗಳನ್ನು ಅವರೇ ಸಾರ್ವಜನಿಕರಿಗೆ ಸ್ಪಷ್ಟಪಡಿಸಬೇಕು. ಕಂದಾಯ, ಪಿಡಬ್ಲ್ಯೂಡಿ, ಗ್ರಾ.ಪಂ ಜಂಟಿಯಾಗಿ ಸರ್ವೇ ಮಾಡಿ, ಗಡಿ ಗುರುತಿಸಿ ಅಗತ್ಯ ಕ್ರಮವಹಿಸಬೇಕು.
-ಕೃಷ್ಣ ಗೊಲ್ಲ, ಕೋಟೇಶ್ವರ ಗ್ರಾಪಂನ ಮಾಜಿ ಅಧ್ಯಕ್ಷ.
ವಿಶಾಲವಾಗಿದ್ದ ಒಳಪೇಟೆ ರಸ್ತೆ ಕಿರಿದಾಗಿದೆ. ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ ಮನವಿ ನೀಡಿದ್ದೇವೆ. ಉಳಿವಿಗೆ ನಮ್ಮ ಹೋರಾಟ ನಿರಂತರ ವಾಗಿರಲಿದೆ.
-ಶೇಖರ್ ಮಠದಬೆಟ್ಟು, ಸಾಮಾಜಿಕ ಕಾರ್ಯಕರ್ತ.






