ಕೋಟೇಶ್ವರ: ಸರ್ವೀಸ್ ರಸ್ತೆಯಲ್ಲಿ ಪಾರ್ಕಿಂಗ್ ಮಾಡಿದ್ದ ವಾಹನಗಳಿಗೆ ಪೊಲೀಸರಿಂದ ಲಾಕ್!

ಕುಂದಾಪುರ, ಜು.22: ತಾಲೂಕಿನ ಕೋಟೇಶ್ವರ ಸಮೀಪದ ಸರ್ವೀಸ್ ರಸ್ತೆಗಳಲ್ಲಿ ವಾಹನಗಳನ್ನು ನಿಲ್ಲಿಸಿ ಸುಗಮ ಸಂಚಾರಕ್ಕೆ ಅಡಚಣೆ ಮಾಡುತ್ತಿದ್ದ ಬಗ್ಗೆ ದೂರುಗಳು ಬಂದ ಹಿನ್ನೆಲೆ ಕುಂದಾಪುರ ಸಂಚಾರ ಠಾಣೆ ಪೊಲೀಸರು ದಂಡ ಪ್ರಯೋಗ ಮಾಡುವ ಮೂಲಕ ಸಂಚಾರ ಸುರಕ್ಷತಾ ಕ್ರಮಕ್ಕೆ ಮುಂದಾಗಿದ್ದಾರೆ.
ಕೋಟೇಶ್ವರ ಅಂಡರ್ ಪಾಸ್ (ಹಾಲಾಡಿ ರಸ್ತೆ ತಿರುವು) ಸಮೀಪದಿಂದ ಮೀನು ಪೇಟೆ ತನಕ ವಾಹನಗಳನ್ನು ಸರ್ವೀಸ್ ರಸ್ತೆಯಲ್ಲಿ ನಿಲುಗಡೆ ಮಾಡುವ ಮೂಲಕ ಸಂಚರಿಸುವ ಇತರೆ ವಾಹನಗಳಿಗೆ ಸಮಸ್ಯೆಯಾಗುತ್ತಿತ್ತು. ಇಲ್ಲಿನ ಒಳಪೇಟೆಯೂ ಕೂಡ ಒತ್ತಡವಿರುವ ಕಿರಿದಾದ ರಸ್ತೆಯಾದ ಕಾರಣ ಘನ ವಾಹನಗಳು, ಖಾಸಗಿ ಹಾಗೂ ಸರಕಾರಿ ಬಸ್ಸುಗಳು ಸಹಿತ ಬಹುತೇಕ ವಾಹನಗಳು ಈ ಸರ್ವೀಸ್ ರಸ್ತೆ ಮೂಲಕವಾಗಿ ಕುಂದಾಪುರ-ಕೋಟೇಶ್ವರ ಮಾರ್ಗವಾಗಿ ಉಡುಪಿ, ಹಾಲಾಡಿ ರಸ್ತೆ ಅವಲಂಭಿಸಿದೆ.
ಹಲವು ಸಮಯದಿಂದ ಇಲ್ಲಿನ ಅಂಡರ್ಪಾಸ್ ಸಮೀಪ, ಖಾಸಗಿ ಆಸ್ಪತ್ರೆ ಎದುರು, ಕಿನಾರ ಜಂಕ್ಷನ್ ಎದುರು, ರಾಷ್ಟ್ರೀಯ ಹೆದ್ದಾರಿಯಿಂದ ಸರ್ವೀಸ್ ರಸ್ತೆಗೆ ತಿರುವ ಪಡೆಯುವ ಭಾಗದಲ್ಲಿ ಕಾರು, ಬೈಕ್ ಸಹಿತ ಇತರ ವಾಹನ ಗಳನ್ನು ನಿಲ್ಲಿಸುತ್ತಿದ್ದು ಸಂಚಾರ ದಟ್ಟಣೆ ಸಹಿತ ಬಹಳಷ್ಟು ಅವಘಡಕ್ಕೂ ಇದು ಕಾರಣವಾಗುತ್ತಿತ್ತು. ಈ ಬಗ್ಗೆ ಹಲವು ಬಾರಿ ಪೊಲೀಸರು ಸಂಬಂದಪಟ್ಟವರಿಗೆ ಸೂಚನೆ ನೀಡಿದ್ದರೂ ಕೂಡ ನಿರಂತರ ಸಮಸ್ಯೆ ಮುಂದುವರೆದಿತ್ತು.
ಬುಧವಾರ ಕುಂದಾಪುರ ಸಂಚಾರ ಠಾಣೆ ಪಿಎಸ್‌ಐ ಅನೂಪ್ ನಾಯಕ್ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಸರ್ವೀಸ್ ರಸ್ತೆಯಲ್ಲಿ ನಿಲ್ಲಿಸಿದ್ದ ವಾಹನಗಳ ಚಕ್ರಕ್ಕೆ ಲಾಕ್ ಹಾಕಿ ದಂಡ ವಿಧಿಸಿದ್ದಾರೆ. ಸಾರ್ವಜನಿಕರು, ಸವಾರರ ಅನುಕೂಲಕ್ಕಾಗಿ ಇರುವ ಸರ್ವೀಸ್ ರಸ್ತೆಗಳಲ್ಲಿ ವಾಹನಗಳನ್ನು ನಿಲ್ಲಿಸಿ ಸುಗಮ ಸಂಚಾರಕ್ಕೆ ತಡೆ ಮಾಡುತ್ತಿರುವರ ಬಗ್ಗೆ ಠಾಣಾ ವ್ಯಾಪ್ತಿಯ ವಿವಿದೆಡೆ ಈ ಕಾರ್ಯಾಚರಣೆ ಮುಂದುವರೆಯಲಿದೆ. ಸವಾರರು ಸರ್ವೀಸ್ ರಸ್ತೆಗಳನ್ನು ಪಾರ್ಕಿಂಗ್ ಸ್ಥಳವಾಗಿ ಬಳಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ಟ್ರಾಫಿಕ್ ಠಾಣೆ ಪಿಎಸ್‌ಐ ಅನೂಪ್ ನಾಯಕ್ ತಿಳಿಸಿದ್ದಾರೆ.






