ಶೀರೂರು ಪರ್ಯಾಯಕ್ಕೆ ಸಜ್ಜುಗೊಂಡಿದೆ ಕೃಷ್ಣ ನಗರಿ ಉಡುಪಿ

ಉಡುಪಿ, ಜ.16: ಶೀರೂರು ಮಠಾಧೀಶರಾದ ಶ್ರೀವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯ ಮಹೋತ್ಸವಕ್ಕೆ ಎಲ್ಲಾ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿದ್ದು, ಉಡುಪಿ ಜನತೆಯ ಸಹಕಾರದಿಂದ ಅತ್ಯಂತ ವ್ಯವಸ್ಥಿತ ಹಾಗೂ ವೈಭವಯುತವಾಗಿ ಪ್ರತಿ ಎರಡು ವರ್ಷಗಳಿಗೊಮ್ಮೆ ಬರುವ ಪರ್ಯಾಯವನ್ನು ನಡೆಸಲು ಶ್ರೀಕೃಷ್ಣನ ನಗರಿ ಉಡುಪಿ ಸಜ್ಜು ಗೊಂಡಿದೆ ಎಂದು ಪರ್ಯಾಯ ಸ್ವಾಗತ ಸಮಿತಿ ಅಧ್ಯಕ್ಷ, ಶಾಸಕ ಯಶಪಾಲ್ ಸುವರ್ಣ ತಿಳಿಸಿದ್ದಾರೆ.
ಸುಮಾರು 2 ಲಕ್ಷ್ಮಕ್ಕೂ ಅಧಿಕ ಭಕ್ತರು ಪರ್ಯಾಯ ಮಹೋತ್ಸವದಲ್ಲಿ ಭಾಗಿಯಾಗುವ ನಿರೀಕ್ಷೆ ಇದ್ದು, ಇದಕ್ಕಾಗಿ ಶನಿವಾರ ರಾತ್ರಿ ಕೂಡಾ ಮೂರು ಕಡೆಗಳಲ್ಲಿ ಅನ್ನ ಸಂತರ್ಪಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
5 ಮಂದಿ ಸಾಧಕರಿಗೆ ಪ್ರಶಸ್ತಿ: ಜ.18ರ ಮುಂಜಾನೆ 6 ಗಂಟೆ ಅಲಂಕೃತಗೊಂಡ ರಾಜಾಂಗಣದಲ್ಲಿ ನಡೆಯುವ ಪರ್ಯಾಯ ದರ್ಬಾರ್ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಕ್ಷೇತ್ರಗಳ ಸಾಧಕ ಗಣ್ಯರಿಗೆ ಶೀರೂರು ಶ್ರೀಪಾದರು ಶ್ರೀಕೃಷ್ಣಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ.
ಶನಿವಾರ ಸಂಜೆ 4:30ಕ್ಕೆ ನಿರ್ಗಮನ ಶ್ರೀಗಳಾದ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ. ಶೀರೂರು ಪರ್ಯಾಯ ಸ್ವಾಗತ ಸಮಿತಿಯ ವತಿಯಿಂದ ತಮ್ಮ ಚತುರ್ಥ ಪರ್ಯಾಯ ಮಹೋತ್ಸವವನ್ನು ಯಶಸ್ವಿಯಾಗಿ ಪೂರೈಸಿದ ಪರ್ಯಾಯ ಶ್ರೀಗಳಿಗೆ ಹಾಗೂ ಕಿರಿಯ ಯತಿಗಳಾದ ಶ್ರೀಸುಶ್ರೀಂದ್ರ ತೀರ್ಥರಿಗೆ ರಥಬೀದಿಯ ಪೂರ್ಣ ಪ್ರಜ್ಞಾ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಗುವುದು ಎಂದು ಯಶಪಾಲ್ ತಿಳಿಸಿದ್ದಾರೆ.
ಶೀರೂರು ಪರ್ಯಾಯದ ಕಾರ್ಯಕ್ರಮಗಳ ವಿವರ: ಜ.18ರ ಪ್ರಾತಃ ಕಾಲ 1:15ಕ್ಕೆ ಕಾಪು ಸಮೀಪದ ದಂಡ ತೀರ್ಥದಲ್ಲಿ ಶೀರೂರು ಶ್ರೀಗಳಿಂದ ಪವಿತ್ರ ಸ್ನಾನ. 2:00 ಗಂಟೆಗೆ ಜೋಡುಕಟ್ಟೆಯಿಂದ ವೈಭವದ ಪರ್ಯಾಯ ಮೆರವಣಿಗೆ ಪ್ರಾರಂಭ. ಬೆಳಗ್ಗೆ 5:15ಕ್ಕೆ ಕನಕನ ಕಿಂಡಿಯಲ್ಲಿ ಶ್ರೀಕೃಷ್ಣ ದರ್ಶನ. ಬೆಳಗ್ಗೆ 5:45ಕ್ಕೆ ಶೀರೂರು ಶ್ರೀಗಳಿಂದ ಸರ್ವಜ್ಞ ಪೀಠಾರೋಹಣ, 5:55ಕ್ಕೆ ಬಡಗುಮಳಿಗೆಯ ಅರಳು ಗದ್ದುಗೆಯಲ್ಲಿ ‘ಸಾಂಪ್ರದಾಯಿಕ ದರ್ಬಾರ್ ಹಾಗೂ ಅಷ್ಟ ಮಠಾಧೀಶರಿಗೆ ಮಾಲಿಕೆ ಮಂಗಳಾರತಿ.
ಬೆಳಗ್ಗೆ 6:15ಕ್ಕೆ ರಾಜಾಂಗಣದಲ್ಲಿ ಪರ್ಯಾಯ ದರ್ಬಾರ್ ಕಾರ್ಯಕ್ರಮ ಆಮಂತ್ರಿತ ಅಷ್ಟಮಠಾಧೀಶರಿಂದ ಹಾಗೂ ಪರ್ಯಾಯ ಪೀಠಾಧೀಶರಿಂದ ಅನುಗ್ರಹ ಸಂದೇಶ. 10:30ಕ್ಕೆ ಶೀರೂರು ಶ್ರೀಗಳಿಂದ ಮಹಾಪೂಜೆ.
ಪರ್ಯಾಯ ಮೆರವಣಿಗೆ: ಮುಂಜಾನೆ 2:00 ಗಂಟೆಗೆ ವೈಭವದ ಪರ್ಯಾಯ ಮೆರವಣಿಗೆ ಪ್ರಾರಂಭಗೊಳ್ಳಲಿದೆ. ಉಡುಪಿ ಜೋಡುಕಟ್ಟೆ ಯಿಂದ ಶ್ರೀಕೃಷ್ಣಮಠದವರೆಗೆ ಸುಮಾರು 85 ಕ್ಕೂ ಅಧಿಕ ವಿವಿಧ ರಾಜ್ಯಗಳ ಕಲಾ ತಂಡಗಳು, ವೈವಿಧ್ಯಮಯ ಆಕರ್ಷಕ ಸ್ತಬ್ಧ ಚಿತ್ರಗಳನ್ನೊಳಗೊಂಡ ವೈಭವದ ಪರ್ಯಾಯ ಮೆರವಣಿಗೆ ಸಾಗಿ ಬರಲಿದೆ.
ಜ.17ರ ರಾತ್ರಿ 40 ಸಾವಿರ ಮಂದಿಗೆ ಭೋಜನ ವ್ಯವಸ್ಥೆ ಮಾಡಲಾಗಿದೆ. ರಾತ್ರಿ 7:30ರಿಂದ ವಿಶೇಷ ಅನ್ನ ಸಂತರ್ಪಣೆಯು ನಗರಸಭಾ ಕಚೇರಿ ಬಳಿಯ ಶ್ರೀನಿತ್ಯಾನಂದ ಸ್ವಾಮಿ ಮಂದಿರ, ಕೃಷ್ಣ ಮಠದ ಪಾರ್ಕಿಂಗ್ ಪ್ರದೇಶ.
ಭಾಗವಹಿಸುವ ಗಣ್ಯರು: ಪರ್ಯಾಯ ಮೆರವಣಿಗೆ ಹಾಗೂ ಪರ್ಯಾಯ ದರ್ಬಾರ್‌ಗಳಲ್ಲಿ ಉಡುಪಿ ಶ್ರೀಕೃಷ್ಣ ಮಠದ ಅಷ್ಟ ಮಠಗಳಸ ಮಠಾಧೀಶರೊಂದಿಗೆ ನಾಡಿನ ಹಲವು ಮಂದಿ ಗಣ್ಯರು ಭಾಗವಹಿಸಲಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಮೈಸೂರಿನ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗೃಹ ಸಚಿವ ಡಾ.ಜಿ.ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳ್ಳರ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರು, ಜಿಲ್ಲಾದಿಕಾರಿ ಹಾಗೂ ಇತರರು ಭಾಗವಹಿಸಲಿದ್ದಾರೆ.







