Udupi | ಖಾಸಗಿ ಬಸ್ ಮಾಲಕರು ತರುವ ತಡೆಯಾಜ್ಞೆಯಿಂದ ಕೆಎಸ್ಸಾರ್ಟಿಸಿ ಹೊಸ ಬಸ್ ಓಡಿಸಲು ಸಾಧ್ಯವಾಗುತ್ತಿಲ್ಲ: ಸಚಿವ ರಾಮಲಿಂಗಾ ರೆಡ್ಡಿ

ಸಚಿವ ರಾಮಲಿಂಗಾ ರೆಡ್ಡಿ
ಬೈಂದೂರು: ಗ್ರಾಮೀಣ ಪ್ರದೇಶಗಳು ಸೇರಿದಂತೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೆಎಸ್ಸಾರ್ಟಿಸಿ ಬಸ್ಗಳನ್ನು ಓಡಿಸಲು ಜನರಿಂದ ಬೇಡಿಕೆ ಬರುತ್ತಿದೆ. ಎರಡೂ ಜಿಲ್ಲೆಗಳ ಶಾಸಕರ ಸಹ ಪಕ್ಷಾತೀತವಾಗಿ ಸರಕಾರಿ ಬಸ್ ಕುರಿತಂತೆ ಸಹಮತ ವ್ಯಕ್ತಪಡಿಸಿದ್ದಾರೆ. ಇಲಾಖೆಯಿಂದಲೂ ನಾವು ಬಸ್ ಓಡಿಸಲು ಉತ್ಸುಕರಾಗಿದ್ದೇವೆ. ಆದರೆ ಜಿಲ್ಲೆಯ ಖಾಸಗಿ ಬಸ್ಗಳ ಮಾಲಕರು ನ್ಯಾಯಾಲಯಗಳ ಮೂಲಕ ತರುವ ತಡೆಯಾಜ್ಞೆಯಿಂದ ಇದು ಸಾಧ್ಯವಾಗುತ್ತಿಲ್ಲ ಎಂದು ಸಾರಿಗೆ ಮತ್ತು ಮುಜುರಾಯಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಬೈಂದೂರಿನಲ್ಲಿ ನೂತನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಉದ್ಘಾಟಿಸಲು ಆಗಮಿಸಿ ಸಚಿವರು ಸುದ್ದಿಗಾರರೊಂದಿಗೆ ಮಾತನಾಡುತಿದ್ದರು. ಉಡುಪಿ ಜಿಲ್ಲೆಯಲ್ಲಿ ಖಾಸಗಿ ಬಸ್ಗಳದೇ ಪಾರುಪತ್ಯ. ನಾವು ಸಾರ್ವಜನಿಕರ ಬೇಡಿಕೆಯಂತೆ ಹೊಸ ಪರ್ಮಿಟ್ ಪಡೆದು ಬಸ್ ಓಡಿಸಲು ಮುಂದಾದರೆ ಅವರು ಪದೇ ಪದೇ ಕೋರ್ಟ್ಗೆ ಹೋಗುತ್ತಿದ್ದು, ಇದರಿಂದ ಸರಕಾರಿ ಬಸ್ ಹಾಕಲು ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳನ್ನು ಕರೆದು ಮಾತನಾಡುತ್ತೇನೆ ಎಂದರು.
ಶಕ್ತಿ ನಿಲುಗಡೆ ಇಲ್ಲ: ರಾಜ್ಯದಲ್ಲಿ ಶಕ್ತಿ ಯೋಜನೆ ನಿಲ್ಲಿಸಲಾಗುವುದೇ ಎಂದು ಅವರನ್ನು ಪ್ರಶ್ನಿಸಿದಾಗ, ಯಾಕೆ ಅದನ್ನು ನಿಲ್ಲಿಸಬೇಕು ಎಂದು ಮರು ಪ್ರಶ್ನಿಸಿದರು. ಇದು ರಾಜ್ಯದ ಮಹಿಳೆಯರಿಗೆ ತುಂಬಾ ಅನುಕೂಲಕರವಾಗಿದೆ. ಹೀಗಾಗಿ ಶಕ್ತಿ ಯೋಜನೆಯನ್ನು ನಿಲ್ಲಿಸುವ ಯಾವುದೇ ಉದ್ದೇಶವಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಹಾಗೂ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂಬ ಬಿ.ವೈ.ವಿಜಯೇಂದ್ರ ಅವರ ಹೇಳಿಕೆಯ ಕುರಿತಂತೆ ಯಾವುದೇ ಪ್ರತಿಕ್ರಿಯೆ ನೀಡಲು ರಾಮಲಿಂಗಾ ರೆಡ್ಡಿ ನಿರಾಕರಿಸಿದರು.
ಸುರಕ್ಷತಾ ಕ್ರಮ: ಹಿರಿಯೂರು ಬಳಿ ನಡೆದ ಬಸ್ ದುರ್ಘಟನೆಯ ಬಳಿಕ ಕೆಎಸ್ಸಾರ್ಟಿಸಿ ಬಸ್ಗಳ ಸುರಕ್ಷತೆಗೆ ಏನಾದರೂ ವಿಶೇಷ ಕ್ರಮ ತೆಗೆದು ಕೊಳ್ಳುತಿದ್ದೀರಾ ಎಂದು ಕೇಳಿದಾಗ, 2013ರಲ್ಲಿ ನಾನು ಇದೇ ಇಲಾಖೆಯಲ್ಲಿ ಸಚಿವನಾಗಿದ್ದಾಗ ಹಾವೇರಿಯಲ್ಲಿ ಒಂದು ಇದೇ ರೀತಿಯ ಆಫಘಾತ ವಾಗಿತ್ತು. ಆಗ ನಾನು ಗಮನಿಸಿದ್ದೇನೆಂದರೆ ಆ ಬಸ್ಗೆ ತುರ್ತು ನಿರ್ಗಮನ ಬಾಗಿಲು (ಎಮರ್ಜೆನ್ಸಿ ಎಕ್ಸಿಸ್ಟ್) ಇದ್ದಿರಲಿಲ್ಲ. ಲಕ್ಸುರಿ ಬಸ್ಗಳಲ್ಲಿ ಗ್ಲಾಸ್ ಒಡೆದು ಹೊರಬೇಕಾಗಿತ್ತು ಎಂದರು.
ಆಗ ನಾನು ನಮ್ಮ ಇಲಾಖೆಯ 25,000 ಬಸ್ಗಳು ಸೇರಿ ಎಲ್ಲಾ ಖಾಸಗಿ ಮತ್ತು ಶಾಲಾ ಬಸ್ಗಳಲ್ಲಿ ಎಮರ್ಜೆನ್ಸಿ ಬಾಗಿಲು ಕಡ್ಡಾಯಗೊಳಿಸಿದ್ದೆ. ಈಗ ತುರ್ತು ನಿರ್ಗಮನ ಬಾಗಿಲು ಇಲ್ಲದೇ ಬಸ್ಗಳಿಗೆ ಎಫ್ಸಿ ನೀಡುವ ಪರಿಪಾಠವಿಲ್ಲ ಎಂದರು.
ಅದೇ ರೀತಿ ಆಂಧ್ರದ ಕರ್ನೂಲ್ ಘಟನೆ ಬಳಿಕ ಬಸ್ನಲ್ಲಿ ಪ್ರಯಾಣಿಕರ ವಸ್ತುಗಳನ್ನು ಹೊರತುಪಡಿಸಿ ಮತ್ತೇನೂ ಸಾಗಾಟ ಮಾಡಲು ಅವಕಾಶವಿಲ್ಲ. ಪ್ರಯಾಣಿಕರ ಸೂಟ್ಕೇಸ್ ಮತ್ತು ಲಗೇಜ್ ಬಿಟ್ಟು ಮತ್ಯಾವ ವಸ್ತು ತೆಗೆದು ಕೊಂಡು ಹೋಗಲು ಈಗ ಅವಕಾಶವಿಲ್ಲ. ನಮ್ಮ ಅಧಿಕಾರಿಗಳು ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರುತಿದ್ದಾರೆ ಎಂದು ರೆಡ್ಡಿ ತಿಳಿಸಿದರು.
ಸಾರಿಗೆ ನೌಕರರು ವೇತನ ಪರಿಷ್ಕರಣೆಯ ವಿಚಾರದಲ್ಲಿ ಜನವರಿ ಮೊದಲ ವಾರದಲ್ಲಿ ಮುಷ್ಕರ ನಡೆಸುವ ನಿರ್ಧಾರದ ಬಗ್ಗೆ ಪ್ರಶ್ನಿಸಿದಾಗ, ಎರಡು ದಿನಗಳಿಂದ ಅದೇ ವಿಚಾರವಾಗಿ ಮಾತುಕತೆ ಮುಂದುವರಿಸಿದ್ದೇನೆ, ಎಲ್ಲದಕ್ಕೂ ಪರಿಹಾರವಿದೆ.ಅವರೊಂದಿಗೆ ಮಾತನಾಡಿ ವಿಷಯ ಇತ್ಯರ್ಥ ಪಡಿಸುತ್ತೇವೆ ಎಂದರು.
ರಾಜ್ಯದ ಸರಕಾರದ ಕುರಿತಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೀಡಿದ ಹೇಳಿಕೆಯ ಕುರಿತು ಪ್ರಶ್ನಿಸಿದಾಗ, ಅವರು ಯಾಕೆ ಹಾಗೆ ಹೇಳಿದ್ದಾರೋ ಗೊತ್ತಿಲ್ಲ.ಅವರು ಕೇರಳದ ಮುಖ್ಯಮಂತ್ರಿ ಅವರು ಅಲ್ಲಿದ್ದನ್ನು ನೋಡಿಕೊಳ್ಳಲಿ. ನಮ್ಮ ರಾಜ್ಯದ ವಿಷಯವನ್ನು ನಾವು ನೋಡಿಕೊಳ್ಳುತ್ತೇವೆ ಎಂದರು.







