ಕುದುರೆಮುಖ | ಇಬ್ಬರ ಜೀವ ಬಲಿ ಪಡೆದಿದ್ದ ಕಾಡಾನೆ ಕೊನೆಗೂ ಸೆರೆ

ಕಾರ್ಕಳ : ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿ ಕೆರೆಕಟ್ಟೆ ಪ್ರದೇಶದಲ್ಲಿ ಇಬ್ಬರ ಸಾವಿಗೆ ಕಾರಣವಾಗಿದ್ದ ಕಾಡಾನೆಯನ್ನು ಅರಣ್ಯ ಇಲಾಖೆ ಕೊನೆಗೂ ಸೆರೆ ಹಿಡಿದಿದೆ. ತೀವ್ರ ಕಾರ್ಯಾಚರಣೆಯ ಮೂಲಕ ರವಿವಾರ ಸಂಜೆ ವೇಳೆ ಕುದುರೆಮುಖ ಭಗವತಿ ನೇಚರ್ ಕ್ಯಾಂಪ್ ಸಮೀಪದ ಅರಣ್ಯದಲ್ಲಿ ಒಂಟಿ ಸಲಗವನ್ನು ಯಶಸ್ವಿಯಾಗಿ ಹಿಡಿದು ನಾಗರ ಹೊಳೆಗೆ ಸ್ಥಳಾಂತರಿಸಲಾಗಿದೆ.
ಕಾಡಿನಿಂದ ಸೊಪ್ಪು ತರಲು ಹೋಗಿದ್ದ ಹರೀಶ್ ಶೆಟ್ಟಿ (44) ಮತ್ತು ಉಮೇಶ್ ಗೌಡ(48) ಎಂಬವರ ಮೇಲೆ ಶುಕ್ರವಾರ ಕಾಡಾನೆ ದಾಳಿ ನಡೆಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಇದರ ವಿರುದ್ಧ ಸ್ಥಳೀಯರು ಎಸ್‌ಕೆ ಬಾರ್ಡರ್‌ನ್ನು ಮುಚ್ಚಿ ತೀವ್ರ ಪ್ರತಿಭಟನೆ ನಡೆಸಿ, ಗರಿಷ್ಠ ಪರಿಹಾರ ಹಾಗೂ ಆನೆ ಸೆರೆಹಿಡಿಯುವಂತೆ ಆಗ್ರಹಿಸಿದ್ದರು.
ಇಲಾಖೆಯಿಂದ ಕಾರ್ಯಾಚರಣೆ :
ಕುದುರೆಮುಖ ಅರಣ್ಯದೊಳಗೆ ಬೀಡುಬಿಟ್ಟಿದ್ದ ಆನೆಯನ್ನು ಸೆರೆ ಹಿಡಿಯುವ ಕಾರ್ಯಾಚರಣೆಯನ್ನು ಮಂಗಳೂರು ಅರಣ್ಯ ವೃತ್ತ ಹಾಗೂ ಕುದುರೆಮುಖ ವನ್ಯಜೀವಿ ವಿಭಾಗದ ಅಧಿಕಾರಿಗಳ ನೇತೃತ್ವದಲ್ಲಿ ನಡೆಸಲಾಯಿತು.
ಈ ಕಾರ್ಯಾಚರಣೆಯಲ್ಲಿ 200ಕ್ಕೂ ಅಧಿಕ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ, ಸೇರಿದಂತೆ ಕುದುರೆಮುಖ, ಮಂಗಳೂರು, ಮತ್ತು ಚಿಕ್ಕಮಗಳೂರು ವಲಯದ ತಂಡಗಳು ಪಾಲ್ಗೊಂಡಿದ್ದವು. ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲು, ಕೊಡಗು ಜಿಲ್ಲೆಯ ದುಬಾರೆ ಹಾಗೂ ನಾಗರಹೊಳೆ ಆನೆ ಬಿಡಾರಗಳಿಂದ ಬಂದಿದ್ದ ನುರಿತ ತಂಡಗಳು ಮತ್ತು ತರಬೇತಿ ಪಡೆದ ಆನೆಗಳ ಸಹಕಾರದಲ್ಲಿ ತೀವ್ರ ಕಾರ್ಯಾಚರಣೆ ನಡೆಸಲಾಯಿತು.
ಡ್ರೋನ್‌ಗಳ ಸಹಾಯದಿಂದ ಕುದುರೆಮುಖದ ಅರಣ್ಯ ಪ್ರದೇಶದಲ್ಲಿ ವ್ಯಾಪಕವಾಗಿ ಹುಡುಕಾಟ ನಡೆಸಿ, ಬೆಳಗಿನ ವೇಳೆಯಲ್ಲಿ ಭಗವತಿ ಕ್ಯಾಂಪ್ ಹತ್ತಿರ ಆನೆ ಇರುವುದನ್ನು ಪತ್ತೆ ಹಚ್ಚಲಾಯಿತು. ಸಂಜೆ ವೇಳೆ ಆನೆಯನ್ನು ನಿಖರ ಯೋಜನೆ ರೂಪಿಸಿ ಸೆರೆ ಹಿಡಿಯುವಲ್ಲಿ ಇಲಾಖೆ ಯಶಸ್ವಿಯಾಯಿತು.
ನಾಗರಹೊಳೆಗೆ ಸ್ಥಳಾಂತರ :
ಕಾರ್ಯಾಚರಣೆ 2 ದಿನಗಳ ಕಾಲ ನಿರಂತರ ನಡೆಸಲಾಗಿದ್ದು, ಹಗಲು ವೇಳೆ ಡ್ರೋನ್ ತಂತ್ರಜ್ಞಾನ ಮತ್ತು ರಾತ್ರಿ ವೇಳೆ ಥರ್ಮಲ್ ಡ್ರೋನ್ ಕ್ಯಾಮೆರಾ ಬಳಕೆ ಮಾಡಲಾಗಿತ್ತು. ಸಿಡೇಟಿವ್ ಡಾರ್ಟ್ ಪ್ರಯೋಗಿಸಿ ಆನೆಯನ್ನು ಸೆರೆಹಿಡಿಯಲಾಯಿತು.
ಸುಮಾರು 40 ವರ್ಷದ 5 ಟನ್ ತೂಕದ ಒಂಟಿ ಸಲಗ ಕೊನೆಗೂ ಇಲಾಖೆಯ ಬಲೆಗೆ ಬಿದ್ದಿದ್ದು, ಬಳಿಕ ಸುರಕ್ಷತಾ ಕ್ರಮದೊಂದಿಗೆ ಆನೆಯನ್ನು ಟ್ರಕ್‌ನಲ್ಲಿ ಹೊತ್ತೊಯ್ದು ನಾಗರಹೊಳೆ ದೊಡ್ಡ ಹರವೆ ಬಿಡಾರಕ್ಕೆ ಸ್ಥಳಾಂತರಿಸಲಾಯಿತು. ಈ ಕಾರ್ಯಾಚರಣೆಯಲ್ಲಿ ವನ್ಯಜೀವಿ ತಜ್ಞ ವೈದ್ಯ ಡಾ.ಮುಜೀಬ್, ಶಾರ್ಪ್ ಶೂಟರ್ ಅಕ್ರಮ್, ಹಾಗೂ ಪ್ರಾಜೆಕ್ಟ್ ಎಲಿಫೆಂಟ್‌ನ ಎಪಿಸಿಸಿಎಫ್ ಮನೋಜ್ ರಾಜನ್, ಮಂಗಳೂರು ವಲಯದ ಸಿಸಿಎಫ್ ಕರಿಕಾಲನ್, ಕಾರ್ಕಳ ಕುದುರೆಮುಖ ವನ್ಯಜೀವಿ ವಿಭಾಗದ ಡಿಎಫ್‌ಒ ಶಿವರಾಮ್ ಬಾಬು, ಎಸಿಎಫ್, ಆರ್‌ಎಫ್‌ಒ, ಡಿಆರ್‌ಎಫ್‌ಒ ಸೇರಿದಂತೆ ಅನೇಕ ಅಧಿಕಾರಿಗಳು ಭಾಗವಹಿಸಿದ್ದರು.
ಆನೆಯ ಆರೋಗ್ಯವನ್ನು ಡಾ.ಮುಜೀಬ್ ತಪಾಸಣೆ ನಡೆಸಿದ್ದು, ಆನೆಗೆ ಯಾವುದೇ ಗಂಭೀರ ಗಾಯಗಳಿಲ್ಲ ಮತ್ತು ಆರೋಗ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಆನೆ ಆಗುಂಬೆ-ಭಾಗಮಂಡಲ ಪ್ರದೇಶಗಳ ನಡುವೆ ಸಂಚರಿಸುವ ಸಲಗವಾಗಿದ್ದು, ಕೆರೆಕಟ್ಟೆ ಭಾಗದಲ್ಲಿ ಇಬ್ಬರ ಸಾವಿಗೆ ಕಾರಣವಾದ ನಂತರ ಕುದುರೆಮುಖದ ಕಾಡಿನಲ್ಲಿ ತಿರುಗಾಡಿಕೊಂಡಿತ್ತು ಎಂದು ಡಿಎಫ್‌ಒ ಶಿವರಾಮ್ ಬಾಬು ತಿಳಿಸಿದ್ದಾರೆ.







