ಕುಂದಾಪುರ: ಬೆಂಕಿ ಆಕಸ್ಮಿಕ; ಸಂಪೂರ್ಣವಾಗಿ ಅಗ್ನಿಗಾಹುತಿಯಾದ ಕಾರು

ಕುಂದಾಪುರ, ಜ.31: ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು, ಕ್ಷಣಾರ್ಧದಲ್ಲೇ ವ್ಯಾಪಿಸಿ ಸಂಪೂರ್ಣ ಕಾರು ಅಗ್ನಿಗೆ ಆಹುತಿಯಾದ ಘಟನೆ ಹೆಮ್ಮಾಡಿ–ಕೊಲ್ಲೂರು ರಾಜ್ಯ ಹೆದ್ದಾರಿಯ ವಂಡ್ಸೆ ಗ್ರಾಮದ ಶಾರ್ಕೆ ಕ್ರಾಸ್ ಸಮೀಪ ಶನಿವಾರ ಬೆಳಿಗ್ಗೆ ಸಂಭವಿಸಿದೆ.
ಘಟನೆ ವಿವರ:
ಬೀಜಾಡಿ ನಿವಾಸಿ ಭಾಸ್ಕರ್ ಆಚಾರ್ ಅವರಿಗೆ ಸೇರಿದ ಕಾರು ಇದಾಗಿದ್ದು, ಕಾರ್ಯನಿಮಿತ್ತ ಬೆಳಿಗ್ಗೆ ಆಲೂರಿಗೆ ತೆರಳಿದ್ದ ಅವರು ಸುಮಾರು 10 ಗಂಟೆಯ ವೇಳೆಗೆ ಅಲ್ಲಿಂದ ಕುಂದಾಪುರದತ್ತ ಮರಳುತ್ತಿದ್ದರು. ಈ ವೇಳೆ ಕಾರಿನ ಮುಂಭಾಗದಿಂದ ಶಬ್ದ ಸಹಿತ ಹೊಗೆ ಕಾಣಿಸಿಕೊಂಡಿದೆ. ತಕ್ಷಣ ಎಚ್ಚೆತ್ತುಕೊಂಡ ಭಾಸ್ಕರ್ ಆಚಾರ್ ಕಾರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದಾರೆ.
ಆದರೆ, ಆಗಲೇ ಬೆಂಕಿಯ ತೀವ್ರತೆ ಹೆಚ್ಚಾಗಿದ್ದು, ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದರೂ ಪ್ರಯೋಜನವಾಗದೆ ಸ್ವಲ್ಪ ಹೊತ್ತಿನಲ್ಲೇ ಇಡೀ ಕಾರು ಸುಟ್ಟು ಕರಕಲಾಗಿದೆ. ಭಾಸ್ಕರ್ ಆಚಾರ್ ಸಮಯಕ್ಕೆ ಕಾರಿನಿಂದ ಇಳಿದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ.
ಪ್ರಾಥಮಿಕ ಮಾಹಿತಿಯಂತೆ ಶಾರ್ಟ್ ಸರ್ಕ್ಯೂಟ್‌ನಿಂದಲೇ ಅವಘಡ ಸಂಭವಿಸಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಕುಂದಾಪುರ ಅಗ್ನಿಶಾಮಕ ದಳ ಹಾಗೂ ಕೊಲ್ಲೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.





