ಕುಂದಾಪುರ | ಹೋಲಿ ರೋಜರಿ ಮಾತಾ ಇಗರ್ಜಿಯ ವಾರ್ಷಿಕ ಹಬ್ಬ

ಕುಂದಾಪುರ, ನ.29: ಸುಮಾರು 455 ವರ್ಷಗಳ ಇತಿಹಾಸ ಹೊಂದಿರುವ ಇಲ್ಲಿನ ಹೋಲಿ ರೋಜರಿ ಮಾತಾ ಇಗರ್ಜಿಯ ವಾರ್ಷಿಕ ಮಹಾಹಬ್ಬವನ್ನು ಸಡಗರ ಸಂಭ್ರಮದೊಂದಿಗೆ ಭಕ್ತಿಪೂರ್ವಕವಾಗಿ ಆಚರಿಸಲಾಯಿತು.
ಹಬ್ಬದ ಮಹಾ ಬಲಿದಾನದ ನೇತೃತ್ವವನ್ನು ವಹಿಸಿಕೊಂಡ ಶಿವಮೊಗ್ಗ ಧರ್ಮಪ್ರಾಂತದ ಕಬಳೆ ಸಂತ ಫ್ರಾನ್ಸಿಸ್ ಸಾವೆರ್ ಚರ್ಚಿನ ಧರ್ಮಗುರು ವಂ. ರೋಮನ್ ಪಿಂಟೊ, ಈ ಪ್ರಪಂಚದಲ್ಲಿ ಯಾರ ಮೇಲೂ ಭರವಸೆ ಇಡಲು ಸಾಧ್ಯವಿಲ್ಲ. ಮನುಷ್ಯ ಸಂಬಂಧದ ಮೇಲೆ, ಪ್ರಪಂಚದ ವಸ್ತುಗಳ ಮೇಲೆ ಭರವಸೆ ಇಡಲು ಸಾಧ್ಯವಿಲ್ಲ. ಆದರೆ ದೇವರ ಮಾತೆ, ರೋಜರಿ ಮಾತೆಯ ಮೇಲೆ ಭರವಸೆ ಇಟ್ಟು ನಮ್ಮ ಜೀವನದ ಪಯಣ ಮಾಡಿದರೆ ಯಶಸ್ಸು ಲಭಿಸುವುದು ಎಂದು ಸಂದೇಶ ನೀಡಿದರು.
ಕುಂದಾಪುರದವರೇ ಆದ ಉಡುಪಿ ಧರ್ಮಪ್ರಾಂತದ ಮೊನ್ಸಿಂರ್ಹೊರ್ ವಂ. ಫರ್ಡಿನಾಂಡ್ ಗೊನ್ಸಾಲ್ವೆಸ್, ಕುಂದಾಪುರ ಚರ್ಚಿನ ಧರ್ಮಗುರು ವಂ. ಪೌಲ್ ರೇಗೊ ಬಲಿ ಪೂಜೆಯಲ್ಲಿ ಭಾಗವಹಿಸಿ ಎಲ್ಲರಿಗೂ ಶುಭಾಶಯ ಮತ್ತು ಧನ್ಯವಾದಗಳನ್ನು ಅರ್ಪಿಸಿದರು.
ಗಂಗೊಳ್ಳಿ ಚರ್ಚಿನ ಧರ್ಮಗುರು ವಂ. ತೋಮಸ್ ರೋಶನ್ ಡಿಸೋಜಾ, ಕುಂದಾಪುರ ವಲಯ ಧರ್ಮಕೇಂದ್ರಗಳ ಅನೇಕ ಧರ್ಮಗುರುಗಳು, ಕಟ್ಕೆರೆ ಕಾರ್ಮೆಲ್ ಸಂಸ್ಥೆಯ ಧರ್ಮಗುರುಗಳು, ಅತಿಥಿ ಧರ್ಮಗುರುಗಳು, ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ಸುಪ್ರಿಯಾ, ಧರ್ಮಭಗಿನಿಯರು, ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ ಹಾಗೂ ಇತರರು ರೋಜರಿ ಮಾತೆಯ ವಾರ್ಷಿಕ ಜಾತ್ರೆಯ ದಿವ್ಯ ಬಲಿಪೂಜೆಯಲ್ಲಿ ಭಾಗಿಯಾದರು.







