Kundapur | ಗಂಗೊಳ್ಳಿ ಅಳಿವೆಯಲ್ಲಿ ಮತ್ತೊಂದು ಮೀನುಗಾರಿಕಾ ಬೋಟ್ ಮುಳುಗಡೆ; 6 ಮೀನುಗಾರರ ರಕ್ಷಣೆ

ಕುಂದಾಪುರ: ಗಂಗೊಳ್ಳಿ ಅಳಿವೆ ಪ್ರದೇಶದಲ್ಲಿ ಬುಧವಾರ ಮತ್ತೊಂದು ಮೀನುಗಾರಿಕಾ ಬೋಟ್ ಮುಳುಗಡೆಯಾಗಿದ್ದು, ಬೋಟಿನಲ್ಲಿದ್ದ ಆರು ಮಂದಿ ಮೀನುಗಾರರನ್ನು ಇತರೆ ಬೋಟಿನ ಮೀನುಗಾರರು ರಕ್ಷಿಸಿದ್ದಾರೆ. ಕಳೆದ ವಾರವೂ ಇದೇ ಪ್ರದೇಶದ ಅರಬ್ಬಿ ಸಮುದ್ರದಲ್ಲಿ ಪರ್ಸಿನ್ ಬೋಟ್ ಸಂಪೂರ್ಣ ಮುಳುಗಡೆಯಾಗಿತ್ತು.
ಗಂಗೊಳ್ಳಿ ಬಂದರಿನಿಂದ ಬುಧವಾರ ಬೆಳಗ್ಗೆ ಮೀನುಗಾರಿಕೆಗೆ ತೆರಳಿದ್ದ ಕುಂಭಾಶಿ ಕೊರವಡಿಯ ಸಂತೋಷ್ ಎ. ಅವರಿಗೆ ಸೇರಿದ ‘ಮಂಜುನಾಥ ಸಾಗರ’ ಎಂಬ ತ್ರಿಸೆವೆಂಟಿ ಬೋಟ್ ಗಂಗೊಳ್ಳಿ ಅಳಿವೆ ಪ್ರದೇಶದಲ್ಲಿ ಮುಳುಗಿದೆ.
ಘಟನೆ ತಿಳಿಯುತ್ತಿದ್ದಂತೆ ಇತರೆ ಮೀನುಗಾರರು ಪರ್ಸಿನ್ ಬೋಟ್ ಮೂಲಕ ಸಮುದ್ರಕ್ಕೆ ತೆರಳಿ ಅಪಾಯದಲ್ಲಿದ್ದ ಆರು ಮಂದಿ ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಿದರು.
ನೀರಿನಲ್ಲಿ ಮುಳುಗುತ್ತಿದ್ದ ಬೋಟ್‌ನ್ನು ಮತ್ತೊಂದು ಬೋಟ್‌ನ ಸಹಾಯದಿಂದ ಎಳೆದು ಗಂಗೊಳ್ಳಿ ಬಂದರಿಗೆ ತರಲಾಯಿತು. ಬೋಟ್ ಭಾಗಶಃ ಮುಳುಗಿದ್ದರಿಂದ ಅದರಲ್ಲಿದ್ದ ಮೀನುಗಾರಿಕಾ ಬಲೆ ಹಾಗೂ ಇತರೆ ಸಲಕರಣೆಗಳು ಸಂಪೂರ್ಣ ಹಾನಿಗೊಂಡಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಘಟನೆಯ ಬಳಿಕ ಕರಾವಳಿ ಕಾವಲು ಪೊಲೀಸ್ ಇಲಾಖೆಯ ವಿರುದ್ಧ ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತುರ್ತು ಸಂದರ್ಭಗಳಲ್ಲಿ ರಕ್ಷಣಾ ಕಾರ್ಯಾಚರಣೆಗೆ ಬಳಸುವ ಬೋಟ್ ನಿಷ್ಕ್ರಿಯಗೊಂಡು ಇನ್ನೂ ಬಂದರಿನಲ್ಲೇ ಇದ್ದು, ಮೀನುಗಾರಿಕೆ ಆರಂಭವಾಗಿ ತಿಂಗಳು ಕಳೆದರೂ ಅದನ್ನು ಸಮುದ್ರಕ್ಕೆ ಇಳಿಸಿಲ್ಲ ಎಂದು ಆರೋಪಿಸಿದ್ದಾರೆ.






