ಕುಂದಾಪುರ| ಸುಳಿಗುಂಡಿ ಹಿರೇಹೊಳೆಯಲ್ಲಿ ಮುಳುಗಿ ಕಾಲೇಜು ವಿದ್ಯಾರ್ಥಿ ಮೃತ್ಯು

ಕುಂದಾಪುರ: ತೆಕ್ಕಟ್ಟೆ ಸಮೀಪದ ಆರ್ಬೆಟ್ಟು ಸುಳಿಗುಂಡಿ ಹಿರೇಹೊಳೆಗೆ ಈಜಲು ತೆರಳಿ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದ ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿಯ ಮೃತದೇಹ ರವಿವಾರ ಬೆಳಗ್ಗೆ ಪತ್ತೆಯಾಗಿದೆ.
ಸಾೖಬ್ರಕಟ್ಟೆ ಗರಿಕೆಮಠ ಮೂಲದ ಸಾಮರಾಜ್ (21) ಮೃತಪಟ್ಟ ವಿದ್ಯಾರ್ಥಿ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ವಿವರ:-
ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದ ಸಾಮರಾಜ್, ಜೂನ್ 13ರ ಸಂಜೆ ಸುಮಾರು 4.30ರ ವೇಳೆಗೆ ಆರ್ಬೆಟ್ಟು ಸುಳಿಗುಂಡಿ ಹಿರೇಹೊಳೆಗೆ ಈಜಲು ತೆರಳಿದ್ದಾಗ ನೀರಿನ ತೀವ್ರ ಸೆಳೆತಕ್ಕೆ ಸಿಲುಕಿ ಮುಳುಗಿ ನಾಪತ್ತೆಯಾಗಿದ್ದರು.
ಈಶ್ವರ್ ಮಲ್ಪೆ ತಂಡದಿಂದ ಶೋಧ ಕಾರ್ಯ:-
ವಿದ್ಯಾರ್ಥಿ ನಾಪತ್ತೆಯಾದ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಮುಳುಗು ತಜ್ಞ ಈಶ್ವರ್ ಮಲ್ಪೆ ಹಾಗೂ ಅವರ ತಂಡ ಶೋಧ ಕಾರ್ಯಾಚರಣೆ ನಡೆಸಿದ್ದು, ಇಂದು ಬೆಳಗ್ಗಿನಿಂದಲೇ ಭಾರೀ ಮಳೆ ಸುರಿಯುತ್ತಿದ್ದರೂ ಲೆಕ್ಕಿಸದ ತಂಡ, ಆಕ್ಸಿಜನ್ ಸಿಲಿಂಡರ್ ಬಳಸಿ ಹೊಳೆಯ ಆಳಕ್ಕೆ ಇಳಿದು ತೀವ್ರ ಹುಡುಕಾಟ ಮುಂದುವರಿಸಿದ್ದರು. ತಂಡದ ನಿರಂತರ ಕಾರ್ಯಾಚರಣೆಯಿಂದ ಹೊಳೆಯ ಮಧ್ಯಭಾಗದಲ್ಲಿ ಸಾಮರಾಜ್ ಅವರ ಮೃತದೇಹ ಪತ್ತೆಯಾಗಿದೆ.
ಅಗ್ನಿಶಾಮಕ ದಳದಲ್ಲಿ ಸ್ಕೂಬಾ ಡೈವಿಂಗ್ ಪರಿಕರಗಳಿಗೆ ಆಗ್ರಹ: ಸಚಿವರಿಗೆ ಮನವಿ
ರಾಜ್ಯದ ಪ್ರತಿಯೊಂದು ಅಗ್ನಿಶಾಮಕ ದಳದ ತಂಡದಲ್ಲಿ ಕಡ್ಡಾಯವಾಗಿ ಸ್ಕೂಬಾ ಡೈವಿಂಗ್ (ಮುಳುಗು ತಜ್ಞರ) ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬೇಕು ಹಾಗೂ ಅದಕ್ಕೆ ಬೇಕಾದ ಅತ್ಯಾಧುನಿಕ ಪರಿಕರಗಳನ್ನು ಒದಗಿಸ ಬೇಕು ಎಂದು ಜೀವನ್ ಮಿತ್ರ ಆಂಬುಲೆನ್ಸ್‌ನ ನಾಗರಾಜ್ ಪುತ್ರನ್ ಆರೋಗ್ಯ ಸಚಿವರಾದ ಯು.ಟಿ. ಖಾದರ್ ಅವರಿಗೆ ಮನವಿ ನೀಡುವುದಾಗಿ ತಿಳಿಸಿದ್ದಾರೆ.
ಯಾರಾದರೂ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದಾಗ ತಕ್ಷಣವೇ ಕಾರ್ಯಪ್ರವೃತ್ತರಾಗಿ ಜೀವ ಉಳಿಸಲು ಅಥವಾ ಪತ್ತೆ ಹಚ್ಚಲು ಮುಳುಗು ತಜ್ಞರ ಅಗತ್ಯವಿದೆ. ಅಗ್ನಿಶಾಮಕ ಸಿಬ್ಬಂದಿ ಕೇವಲ ಬೆಂಕಿ ಆರಿಸುವುದಕ್ಕೆ ಮಾತ್ರ ಸೀಮಿತವಾಗದೆ, ನೀರಿನಲ್ಲಿ ಬಿದ್ದವರನ್ನು ರಕ್ಷಿಸುವ ಮತ್ತು ಶವಗಳನ್ನು ಮೇಲಕ್ಕೆತ್ತುವ ಕಾರ್ಯದಲ್ಲೂ ತೊಡಗಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಅಗ್ನಿಶಾಮಕ ತಂಡದಲ್ಲಿ ಇಂತಹ ತುರ್ತು ಪರಿಸ್ಥಿತಿಗೆ ಸ್ಪಂದಿಸಲು ಮುಳುಗು ತಜ್ಞರಾಗಲಿ ಅಥವಾ ಅದಕ್ಕೆ ಬೇಕಾದ ಅಗತ್ಯ ಪರಿಕರಗಳಾಗಲಿ ಇಲ್ಲದಿರುವುದು ಖೇದನೀಯವಾಗಿದೆ. ಆದ್ದರಿಂದ ಸಚಿವರು ಈ ವಿಚಾರವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಅಗ್ನಿಶಾಮಕ ದಳದ ತಂಡಗಳಿಗೆ ಮುಳುಗು ತಜ್ಞರನ್ನು ಮತ್ತು ಸ್ಕೂಬಾ ಡೈವಿಂಗ್ ಪರಿಕರಗಳನ್ನು ಒದಗಿಸ ಬೇಕೆಂದು ಸಾರ್ವಜನಿಕರ ಪರವಾಗಿ ನಾಗರಾಜ್ ಪುತ್ರನ್ ಒತ್ತಾಯಿಸಿದ್ದಾರೆ.






