ಕುಂದಾಪುರ | ವೈದ್ಯಕೀಯ ಸ್ನಾತಕೋತ್ತರ ಪದವಿಯಲ್ಲಿ ಡಾ.ಶ್ರದ್ಧಾಗೆ ಚಿನ್ನದ ಪದಕ

ಕುಂದಾಪುರ, ನ.14: ಮೈಸೂರಿನ ಜೆಎಸ್ಎಸ್ ವೈದ್ಯಕೀಯ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಜೆಎಸ್ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್ ನ 16ನೇ ಘಟಿಕೋತ್ಸವ ಸಮಾರಂಭದಲ್ಲಿ, ಕಮ್ಯುನಿಟಿ ಮೆಡಿಸಿನ್ ವಿಭಾಗದ ವೈದ್ಯಕೀಯ ಸ್ನಾತಕೋತ್ತರ ಪದವಿ ಅಧ್ಯಯನದಲ್ಲಿ ಪ್ರಾವೀಣ್ಯತೆ ತೋರಿ ಚಿನ್ನದ ಪದಕ ಹಾಗೂ ಅತ್ಯುತ್ತಮ ಶೈಕ್ಷಣಿಕ ಸಾಧನೆಯನ್ನು ಮಾಡಿರುವ ಕುಂದಾಪುರ ಮೂಲದ ಡಾ.ಶೃದ್ಧಾ ಅವರನ್ನು ಗೌರವಿಸಲಾಯಿತು.
ಸಾಧಕರನ್ನು ಗೌರವಿಸಿ, ಪದಕ ಪ್ರದಾನ ಮಾಡಿದ ಭಾರತದ ಸುಪ್ರೀಂ ಕೋರ್ಟ್ ನ ಮಾಜಿ ನ್ಯಾಯಮೂರ್ತಿ ಶಿವರಾಜ್ ವಿರೂಪಣ್ಣ ಪಾಟೀಲ್, ಸಾಧನೆಯ ಹಿಂದಿರುವ ಶ್ರಮ ಹಾಗೂ ಸಾಧಕರು ಗುರಿ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ವಿವಿಧ ವಿಭಾಗ ಗಳಲ್ಲಿನ ಶೈಕ್ಷಣಿಕ ಶ್ರೇಷ್ಠತೆಯನ್ನು ಗುರುತಿಸಿ ಸಾಧಕರನ್ನು ಗೌರವಿಸಲಾಯಿತು.
ಕುಲಾಧಿಪತಿಗಳಾದ ಸುತ್ತೂರು ಸಂಸ್ಥಾನದ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮೀಜಿ, ಉಪ ರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಮಕುಲಾಧಿಪತಿ ಡಾ.ಬಿ.ಸುರೇಶ್, ಕುಲಪತಿ ಡಾ.ಎಚ್.ಬಸವನಗೌಡಪ್ಪ, ಆಡಳಿತ ಮಂಡಳಿ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರುಮಠ ಉಪಸ್ಥಿತರಿದ್ದರು.
ಕೋಟೇಶ್ವರದ ಕಲ್ಪತರು ಕೊಕೊನಟ್ ಇಂಡಸ್ಟ್ರೀಸ್ ಮಾಲಕ ಚಂದ್ರಶೇಖರ ರಾವ್ ಹಾಗೂ ಪದ್ಮಲತಾ ದಂಪತಿ ಪುತ್ರಿಯಾಗಿರುವ ಡಾ.ಶ್ರದ್ದಾ ಮಕ್ಕಳ ತಜ್ಞ ಡಾ.ಬಿ.ಲಕ್ಷ್ಮೀನಾರಾಯಣ ಇವರ ಪತ್ನಿಯಾಗಿದ್ದಾರೆ.







