Kundapur | ಪರಿಸರಸ್ನೇಹಿ ಆವಿಷ್ಕಾರಗಳಿಗೆ ಹೆಚ್ಚಿನ ಆದ್ಯತೆ ಅಗತ್ಯ : ತುಳಸಿ

ಕುಂದಾಪುರ : ಪರಿಸರ ಸಂರಕ್ಷಣೆ ಎನ್ನುವುದು ಕೇವಲ ಒಂದು ದಿನದ ಆಚರಣೆಯಾಗಬಾರದು. ತಂತ್ರಜ್ಞಾನ ಬೆಳೆದಂತೆಲ್ಲಾ ಪ್ರಕೃತಿಯ ಮೇಲಿನ ಒತ್ತಡ ಹೆಚ್ಚುತ್ತಿದೆ. ಭವಿಷ್ಯದ ಇಂಜಿನಿಯರ್ ಗಳಾದ ವಿದ್ಯಾರ್ಥಿಗಳು ಪರಿಸರಸ್ನೇಹಿ ಆವಿಷ್ಕಾರಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಮತ್ತು ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಗಿಡ-ಮರಗಳನ್ನು ಬೆಳೆಸಿ ಪೋಷಿಸುವ ಜವಾಬ್ದಾರಿ ಹೊರಬೇಕು ಎಂದು ಕುಂದಾಪುರದ ಸಾಮಾಜಿಕ ಅರಣ್ಯ ವಲಯಾಧಿಕಾರಿ ತುಳಸಿ ಹೇಳಿದ್ದಾರೆ.
ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ’ವಿಶ್ವ ಪರಿಸರ ದಿನಾಚರಣೆ’ ಕಾರ್ಯಕ್ರಮಕ್ಕೆ ಗಿಡ ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಮುಖ್ಯ ಅತಿಥಿಯಾಗಿ ಉಪವಲಯ ಅರಣ್ಯಾಧಿಕಾರಿ ನಾಗೇಶ್ ಬಿಲ್ಲವ ಮಾತನಾಡಿ, ಕಾಡು ಮತ್ತು ಪರಿಸರ ಉಳಿದರೆ ಮಾತ್ರ ಮಾನವ ಕುಲದ ಉಳಿವು ಸಾಧ್ಯ. ಯುವ ಪೀಳಿಗೆಯಲ್ಲಿ ಪರಿಸರದ ಬಗ್ಗೆ ಸ್ವಯಂಪ್ರೇರಿತ ಕಾಳಜಿ ಮೂಡುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ರಾಮಕೃಷ್ಣ ಹೆಗ್ಡೆ ವಹಿಸಿದ್ದರು. ಈ ಸಂದರ್ಭದಲ್ಲಿ ಪರಿಸರ ರಕ್ಷಣೆಯ ಪ್ರತಿಜ್ಞಾವಿಧಿಯನ್ನು ಸ್ವೀಕರಿಸಲಾಯಿತು. ಕಾರ್ಯಕ್ರಮದ ಆಯೋಜಕರಾದ ಪ್ರೊ.ಬಾಲ ನಾಗೇಶ್ವರ್, ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.






