Kundapur | ಕೋಡಿ ಬ್ಯಾರೀಸ್‌ನಲ್ಲಿ ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ

ಕುಂದಾಪುರ : ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ 157ನೇ ಹಾಗೂ ದೇಶದ ದ್ವಿತೀಯ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 122ನೇ ಜನ್ಮಜಯಂತಿಯನ್ನು ಆಚರಿಸಲಾಯಿತು.
’ಶಾಂತಿಯೆಂದರೆ ಕೇವಲ ಸಂಘರ್ಷದ ಗೈರುಹಾಜರಿಯಲ್ಲ, ಅದು ನ್ಯಾಯ, ಸಾಮರಸ್ಯ ಮತ್ತು ತಿಳುವಳಿಕೆಯ ಉಪಸ್ಥಿತಿ’ ಎಂಬ ಉದಾತ್ತ ಚಿಂತನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಸಂಸ್ಥೆಯ ಟ್ರಸ್ಟಿ ಡಾ.ಆಸಿಫ್ ಬ್ಯಾರಿ ಮಾತನಾಡಿ, ಮಹಾನ್ ನಾಯಕರು ನಮಗೆ ಕಲಿಸಿದ ಒಳ್ಳೆಯ ಮೌಲ್ಯಗಳು ಹಾಗೂ ತತ್ವಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವುದೇ ನಾವು ಅವರಿಗೆ ನೀಡುವ ನಿಜವಾದ ಗೌರವ. ಮಾನವಕುಲಕ್ಕೆ ಮಾಡಿದ ನಿಸ್ವಾರ್ಥ ಸೇವೆಯಿಂದ ಅವರು ಮಹಾತ್ಮ ಎನಿಸಿಕೊಂಡರು. ಹಾಗೆಯೇ ಲಾಲ್ ಬಹದ್ದೂರ್ ಶಾಸ್ತ್ರಿಯವರು ಅತ್ಯಂತ ಸರಳ ಜೀವನ ನಡೆಸಿದ ಶ್ರೇಷ್ಠ ವ್ಯಕ್ತಿಯಾಗಿದ್ದರು. ಇಂತಹ ಶ್ರೇಷ್ಠ ನಾಯಕರ ಜನ್ಮದಿನವನ್ನು ಆಚರಿಸುವ ಮುಖ್ಯ ಉದ್ದೇಶ ಅವರಲ್ಲಿದ್ದ ಪ್ರಾಮಾಣಿಕತೆ, ಜವಾಬ್ದಾರಿ, ಅಹಿಂಸೆ ಮತ್ತು ಸಹಾಯ ಮನೋಭಾವದಂತಹ ಗುಣಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ರೆಹಮಾನ್ ಬ್ಯಾರಿ ಮಾತನಾಡಿ, ಮಹಾತ್ಮ ಗಾಂಧೀಜಿಯವರ ಜೀವನ ನಮಗೆ ಸತ್ಯ, ಅಹಿಂಸೆ, ಸರಳತೆ ಮತ್ತು ಮಾನವೀಯತೆಯ ಮಹತ್ವವನ್ನು ಕಲಿಸುತ್ತದೆ. ಹಾಗೆಯೇ ದೇಶದ ದ್ವಿತೀಯ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ತತ್ವದಂತೆ’ ಪರಿಸ್ಥಿತಿ ಎಷ್ಟೇ ಕಠಿಣವಾಗಿದ್ದರೂ, ನಮ್ಮ ತತ್ವ ಮತ್ತು ದೇಶಪ್ರೇಮದಿಂದ ಹಿಂದೆ ಸರಿಯಬಾರದು’ ಎಂಬುದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಂಸ್ಥೆಯ ಬಿ.ಎಡ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ವೆಂಕಟೇಶ್ ಎಸ್. ಗಾಂಧೀಜಿ-ಶಾಸ್ತ್ರೀಜಿಯವರ ತತ್ವಾದರ್ಶಗಳ ಕುರಿತು ದಿಕ್ಸೂಚಿ ಭಾಷಣ ಮಾಡಿದರು.
ತದನಂತರ ಬಿ.ಎಡ್ ವಿದ್ಯಾರ್ಥಿಗಳಿಂದ ಗಾಂಧೀಜಿಯವರ ಮೌಲ್ಯಗಳನ್ನು ಬಿಂಬಿಸುವ ಗಾಂಧೀಜಿಯವರ ಸತ್ಯ, ಅಹಿಂಸೆ ಹಾಗೂ ಶಾಂತಿಯುತ ಹೋರಾಟದ ಹಾದಿ ಮತ್ತು ಶಾಸ್ತ್ರೀಜಿಯವರ ಜೈ ಜವಾನ್, ಜೈ ಕಿಸಾನ್ ಘೋಷಣೆಯ ಹಿಂದಿನ ದೇಶಪ್ರೇಮದ ಸಂದೇಶಗಳು ಇಂದಿನ ಯುವಜನತೆಗೆ ದಾರಿದೀಪವಾಗಲಿ ಎಂಬ ಸಂದೇಶವನ್ನು ಬಿಂಬಿಸುವ ಸಾಂಸ್ಕೃತಿಕ ಪ್ರದರ್ಶನ ಜರಗಿತು.
ಪ್ರಶಿಕ್ಷಣಾರ್ಥಿಗಳಾದ ನಮಿತಾ ಖಾರ್ವಿ, ಪ್ರಸಾದ್ ಖಾರ್ವಿ, ಅನಿಲ್ ಕುಮಾರ್, ಅಂಜಲಿ ಅವರು ಗಾಂಧೀಜಿ ಮತ್ತು ಶಾಸ್ತ್ರಿ ಅವರ ಕುರಿತು ಮಾತನಾಡಿದರು. ಇದೇ ಸಂದರ್ಭದಲ್ಲಿ ಪದವಿ ವಿಭಾಗದ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಗಾಂಧಿ ಜಯಂತಿ ಪೋಸ್ಟರ್ ತಯಾರಿಕೆ’ ಸ್ಪರ್ಧೆಯ ವಿಜೇತರನ್ನು ಘೋಷಿಸಲಾಯಿತು.
ಸಂಸ್ಥೆಯ ನಿರ್ದೇಶಕಿ ಅಶ್ವಿನಿ ಶೆಟ್ಟಿ, ಶೈಕ್ಷಣಿಕ ಡೀನ್ ಡಾ.ಪೂರ್ಣಿಮಾ, ಬಿ.ಎಡ್ ಮತ್ತು ಡಿ.ಎಡ್ ಪ್ರಾಂಶುಪಾಲೆ ಡಾ.ಫಿರ್ದೋಸ್, ಪದವಿ ವಿಭಾಗದ ಪ್ರಾಂಶುಪಾಲೆ ಶಬೀನಾ ಎಚ್., ಎಲ್ಲಾ ವಿಭಾಗದ ಉಪಪ್ರಾಂಶು ಪಾಲರು, ವಿವಿಧ ವಿಭಾಗಾಧಿಕಾರಿಗಳು, ಬೋಧಕ ಮತ್ತು ಬೋಧಕೇತರ ವೃಂದದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಬ್ಯಾರೀಸ್ ಪದವಿ ಕಾಲೇಜಿನ ಬಿಸಿಎ ವಿದ್ಯಾರ್ಥಿನಿ ಮರಿಯಂ ಅಯೂಬ್ ನಿರೂಪಿಸಿ, ವಂದಿಸಿದರು.






