ಕುಂದಾಪುರ| ಏಷ್ಯಾಕಪ್ ಟಿ-20 ಕ್ರಿಕೆಟ್‌ಗೆ ಕೆರಾಡಿಯ ಸನಿತ್ ಶೆಟ್ಟಿ ಆಯ್ಕೆ

ಕುಂದಾಪುರ, ಜ.8: ಹಳ್ಳಿಯ ಗೆಳೆಯರೊಂದಿಗೆ ಟೆನ್ನಿಸ್ ಬಾಲ್ ಆಡುತ್ತಿದ್ದ ಯುವಕ, ಈಗ ಕಿವುಡರ ಏಷ್ಯಾಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಡಲಿರುವ ಭಾರತ ತಂಡಕ್ಕೆ ಆಯ್ಕೆಯಾಗುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ. ವೈಕಲ್ಯವನ್ನು ಸವಾಲಾಗಿ ಸ್ವೀಕರಿಸಿ, ಸಾಧನೆಯ ಮೂಲಕ ಇವರು ಎಲ್ಲರಿಗೂ ಮಾದರಿಯಾಗಿದ್ದಾರೆ.
ಕೆರಾಡಿಯ ದುರ್ಗಾ ಕ್ರಿಕೆಟರ್ಸ್ ಬಳಗದಲ್ಲಿ ಕ್ರಿಕೆಟ್ ಆಡುತ್ತಿದ್ದ ಕೆರಾಡಿಯ ಸನಿತ್ ಶೆಟ್ಟಿ ಫೆ.18 ರಿಂದ 25 ವರೆಗೆ ಒಡಿಶಾದ ಕಟಕ್ ನಲ್ಲಿರುವ ಬಾರಬತಿ ಸ್ಟೇಡಿಯಂನಲ್ಲಿ ನಡೆಯಲಿರುವ ಕಿವುಡರ ಏಷ್ಯಾಕಪ್ ಟಿ-20 ಕ್ರಿಕೆಟ್ ಪಂದ್ಯಾವಳಿಗೆ ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಫೆ.14ರಿಂದ 17ವರೆಗೆ ಶ್ರೀಲಂಕಾ ವಿರುದ್ಧ ಅಭ್ಯಾಸ ಪಂದ್ಯಗಳು ನಡೆಯಲಿವೆ.
ಭಾರತೀಯ ಕಿವುಡರ ಕ್ರಿಕೆಟ್ ಅಸೋಸಿಯೇಶನ್‌ನ ಪುರುಷರ ಆಯ್ಕೆ ಸಮಿತಿಯು 16 ಮಂದಿಯ ಭಾರತ ತಂಡ ವನ್ನು ಪ್ರಕಟಿಸಿದ್ದು, ಬ್ಯಾಟರ್ ಹಾಗೂ ವೇಗದ ಬೌಲಿಂಗ್ ಸಹ ಮಾಡಬಲ್ಲ ಆಲ್ ರೌಂಡರ್ ಆಗಿರುವ ಸನಿತ್ ಶೆಟ್ಟಿ ತಂಡದಲ್ಲಿ ಸ್ಥಾನ ಪಡೆದ ಏಕೈಕ ಕನ್ನಡಿಗನಾಗಿದ್ದಾರೆ. ಹಿಮಾಚಲ ಪ್ರದೇಶದ ವೀರೇಂರ್ದ ಸಿಂಗ್ ತಂಡವನ್ನು ಮುನ್ನಡೆಸಲಿದ್ದಾರೆ.
ರಿಕ್ಷಾ ಚಾಲಕರಾಗಿರುವ ಕೆರಾಡಿ ಗ್ರಾಮದ ಸುರೇಂದ್ರ ಶೆಟ್ಟಿ ಹಾಗೂ ಗೃಹಿಣಿ ಶೆಟ್ಟಿ ಹೊಸಗದ್ದೆ ದಂಪತಿಯ ಪುತ್ರನಾದ ಸನಿತ್ ಮೂಡ್ಲಕಟ್ಟೆಯಲ್ಲಿ ಜನಿಸಿದ್ದು, ಕುಂದಾಪುರದ ಎಚ್‌ಎಂಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ, ಶ್ರೀವೆಂಕಟರಮಣ ಪ್ರೌಢಶಾಲೆಯಲ್ಲಿ ಪ್ರೌಢ, ಮೂಡ್ಲಕಟ್ಟೆಯ ಐಎಂಜೆ ಪದವಿ ಕಾಲೇಜಿನಲ್ಲಿ ಬಿಸಿಎ ಪೂರೈಸಿ, ಸದ್ಯ ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿ ಹೆಚ್‌ಆರ್ ಆಗಿದ್ದಾರೆ. ಇವರು ಹುಟ್ಟಿನಿಂದಲೇ ಶ್ರವಣ ದೋಷದ ಸಮಸ್ಯೆಯಿದ್ದು, ಅದನ್ನೆಲ್ಲ ಮೆಟ್ಟಿನಿಂತು ಈಗ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಮೊದಲ ಬಾರಿಗೆ ಅವಕಾಶ: ಆರಂಭದಲ್ಲಿ ಇವರಿಗೆ ನಿತಿನ್ ಸಾರಂಗ ಕ್ರಿಕೆಟ್ ತರಬೇತಿ ನೀಡಿದ್ದು, ಇದೀಗ ಕುಂದಾಪುರದ ಚಕ್ರವರ್ತಿ ಕ್ರಿಕೆಟ್ ಕ್ಲಬ್‌ನ ಮೊಹಮ್ಮದ್ ಅರ್ಮಾನ್ ಗರಡಿಯಲ್ಲಿ 21 ವರ್ಷದ ಸನಿತ್ ತರಬೇತಿ ಪಡೆಯುತ್ತಿದ್ದಾರೆ.
ಭಾರತ ಪರ ಆಡಿದ ಕುಂದಾಪುರ ಮೂಲದ ವಿಶೇಷ ಚೇತನ ಕ್ರಿಕೆಟ್ ಆಟಗಾರ ಪೃಥ್ವಿರಾಜ್ ಶೆಟ್ಟಿ ಹುಂಚಣಿ ಸಹಕಾರ ನೀಡಿದ್ದಾರೆ. 2018 -19 ರಲ್ಲಿ ಅಂಡರ್ -14 ಮಂಗಳೂರು ವಲಯಕ್ಕೆ ಆಯ್ಕೆಯಾಗಿದ್ದು, ಉಡುಪಿ ಜಿಲ್ಲಾ ತಂಡಕ್ಕೂ ಆಯ್ಕೆಯಾಗಿದ್ದರು. ಅವರ ನಾಯಕತ್ವದಲ್ಲಿ ಭಾರತೀಯ ಕಿವುಡರ ಚಾಂಪಿಯನ್ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು.
ಕಳೆದ ವರ್ಷ ನಡೆದ 9ನೇ ರಾಷ್ಟ್ರೀಯ ಕ್ರಿಕೆಟ್ ಚಾಂಪಿಯನ್ ಶಿಪ್‌ನಲ್ಲಿ ಕರ್ನಾಟಕ ಪರ ಉತ್ತಮ ಪ್ರದರ್ಶನ ನೀಡಿ ಮಿಂಚಿದ್ದರು. ಈ ಹಿಂದೆ ದುಬೈನಲ್ಲಿ ನಡೆಯುವ ಭಾರತ ತಂಡದಲ್ಲಿ ಆಡುವ ಅವಕಾಶ ಸಿಕ್ಕಿದ್ದರೂ, ಆಗ ಪಾಸ್ ಪೋರ್ಟ್ ಮಾಡಿಸದೇ ಇದ್ದುದರಿಂದ ಅದೃಷ್ಟವಿರಲಿಲ್ಲ. ಈಗ ಮೊದಲ ಬಾರಿಗೆ ಸನಿತ್ ಅವರಿಗೆ ಭಾರತ ತಂಡದಲ್ಲಿ ಆಡುವ ಅವಕಾಶ ಸಿಕ್ಕಿದೆ.
‘ಕರ್ನಾಟಕ ಪರ ಉತ್ತಮ ಪ್ರದರ್ಶನ ನೀಡಿದ್ದರಿಂದ ಈ ಬಾರಿ ಭಾರತ ತಂಡಕ್ಕೆ ಆಯ್ಕೆಯಾಗುವ ವಿಶ್ವಾಸ ಇತ್ತು. ಕೊನೆಗೂ ಭಾರತದ ಪರ ಆಡುವ ಕನಸು ನನಸಾಗುತ್ತಿದೆ. ಇಷ್ಟು ದಿನ ಪಟ್ಟ ಶ್ರಮಕ್ಕೆ ಸಿಕ್ಕ ಫಲ ಇದಾಗಿದ್ದು ತುಂಬಾ ಸಂತಸವಾಗಿದೆ. ಸಹಕರಿಸಿದ ಹೆತ್ತವರು, ಗುರುಗಳು, ಎಲ್ಲರಿಗೂ ಕೃತಜ್ಞತೆಗಳು’
-ಸನಿತ್ ಶೆಟ್ಟಿ ಕೆರಾಡಿ, ಕ್ರಿಕೆಟ್ ಪಟು







