ಕುಂದಾಪುರ| ಜೀವ ಬೆದರಿಕೆ ಪ್ರಕರಣ: ಮಾಜಿ ನಕ್ಸಲ್ ಪದ್ಮನಾಭ ನೀಲುಗುಳಿ ದೋಷಮುಕ್ತಿ

ಕುಂದಾಪುರ: 21 ವರ್ಷಗಳ ಹಿಂದೆ ಓರ್ವ ಮಹಿಳೆ ಸೇರಿದಂತೆ ಎಂಟು ಮಂದಿಯಿದ್ದ ಗುಂಪೊಂದು ಮನೆಯೊಂದರ ಬಳಿ ಬಂದೂಕು ಸಹಿತವಾಗಿ ಬಂದು ಕಾರ್ಮಿಕರಿಗೆ ಕೂಲಿ ನೀಡುವ ವಿಚಾರದಲ್ಲಿ ಮಾತನಾಡಿ, ಪೊಲೀಸರಿಗೆ ಮಾಹಿತಿ ನೀಡದಂತೆ ಜೀವ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ನಕ್ಸಲ್ ಪದ್ಮನಾಭ ನೀಲುಗುಳಿಯನ್ನು ದೋಷಮುಕ್ತ ಗೊಳಿಸಿ ಕುಂದಾಪುರದಲ್ಲಿರುವ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ಆದೇಶ ನೀಡಿದ್ದಾರೆ.
ಘಟನೆ ಹಿನ್ನೆಲೆ: 2005ರಲ್ಲಿ ಕುಂದಾಪುರ ತಾಲೂಕಿನ ಹಳ್ಳಿಹೊಳೆಯ ಕೋಟುಗುಳಿ ಎಂಬಲ್ಲಿ ಗುರುದತ್ತ ಚಾತ್ರ ಎನ್ನುವವರ ಮನೆ ಸಮೀಪ ಓರ್ವ ಮಹಿಳೆ ಹಾಗೂ ಏಳು ಮಂದಿ ಪುರುಷರಿದ್ದ ತಂಡ ಬಂದೂಕು ಸಹಿತ ಆಗಮಿಸಿ ದೂರುದಾರ ಗುರುದತ್ತ ಅವರ ಬಳಿ ಕೆಲಸಗಾರರಿಗೆ ಸರಿಯಾದ ಸಂಬಳ ನೀಡದಿರುವ ಬಗ್ಗೆ ವಿಚಾರಿಸಿದ್ದರು.
ಇದಾದ ಬಳಿಕ ಪೊಲೀಸರಿಗೆ ಯಾವುದೇ ಮಾಹಿತಿ ನೀಡದಂತೆ ಜೀವ ಬೆದರಿಕೆ ಹಾಕಿ ಈ ತಂಡ ಸ್ಥಳದಿಂದ ತೆರ ಳಿತ್ತು. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಗುರುದತ್ತ ಚಾತ್ರ ಪ್ರಕರಣ ದಾಖಲಿಸಿದ್ದರು. ಇದರಲ್ಲಿ ಪದ್ಮನಾಭ ನೀಲುಗುಳಿ ಸಹಿತ ಏಳು ಮಂದಿ ಶಂಕಿತ ನಕ್ಸಲರ ಹೆಸರನ್ನು ಉಲ್ಲೇಖಿಸಲಾಗಿದ್ದು ಅವರೆಲ್ಲಾ ಕಾಡು ಪ್ರದೇಶದಲ್ಲಿ ನಿಷೇಧಿತ ಸಂಘಟನೆಯೊಂದಿಗೆ ಸೇರುಕೊಂಡು ಸರಕಾರದ ವಿರುದ್ಧ ಕಾನೂನು ಬಾಹಿರ ಚಟುವಟಿಕೆ ಯಲ್ಲಿ ತೊಡಗಿಸಿಕೊಂಡವರು ಎಂದು ಕಾನೂನು ಬಾಹಿರ ಚಟುವಟಿಕೆ ತಡೆ ಕಾಯಿದೆ ಮತ್ತು ಕಲಂ.3 ಮತ್ತು 25 ಭಾರತೀಯ ಶಸ್ತ್ರಾಸ್ತ್ರ ಕಾಯಿದೆಯಂತೆ ಶಿಕ್ಷಾರ್ಹ ಅಪರಾಧದಡಿ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿತ್ತು. ಅಂದಿನ ಕುಂದಾಪುರ ಡಿವೈಎಸ್ಪಿ ವಿಶ್ವನಾಥ್ ಅವರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಹಳ್ಳಿಹೊಳೆಯ ಕೋಟುಗುಳಿ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ಈವರೆಗೆ ವಿಚಾರಣೆ ನಡೆಯುತ್ತಿದ್ದು ಆರೋಪಿ ವಿರುದ್ಧ ಮಾಡಲಾದ ದೋಷಾರೋಪಣೆಗಳು ರುಜುವಾತಾಗದ ಹಿನ್ನೆಲೆಯಲ್ಲಿ ಈ ಪ್ರಕರಣದಲ್ಲಿ ಪದ್ಮನಾಭ ನಿರ್ದೋಷಿಯೆಂದು ತೀರ್ಪು ನೀಡಲಾಗಿದೆ.
2018ರಲ್ಲಿ ನೀಲಗುಳಿ ಪದ್ಮನಾಭ ಅವರನ್ನು ಪೊಲೀಸರು ಬಂಧಿಸಿದ್ದು ಬಳಿಕ ಜಾಮಿನು ಪಡೆದು ಊರಿನಲ್ಲಿ ಸಂಸಾರದ ಜೊತೆಯಿರುವ ಇವರ ಮೇಲೆ ಇನ್ನೂ ಮೂರು ಕೇಸುಗಳು ವಿಚಾರಣಾ ಹಂತದಲ್ಲಿವೆ. ಮಾಜಿ ನಕ್ಸಲ್ ನೀಲಗುಳಿ ಪದ್ಮನಾಭ್ ಪರವಾಗಿ ನ್ಯಾಯವಾದಿ ಬಿ. ಪ್ರಕಾಶ್ಚಂದ್ರ ಹೆಗ್ಡೆ ವಾದ ಮಂಡಿಸಿದ್ದರು.






