ಕುಂದಾಪುರ | ಸಂವಿಧಾನದ ಮೂಲಕ ಪ್ರಜಾಪ್ರಭುತ್ವದ ರಕ್ಷಣೆ : ಸಂಸದ ಕೋಟ

ಕುಂದಾಪುರ, ನ.26: ಪ್ರಜಾಪ್ರಭುತ್ವವನ್ನು ರಕ್ಷಣೆ ಮಾಡಲು ಇರುವಂತಹ ಮೂರು ಕಂಬಗಳಾದ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದಲ್ಲಿ ಯಾವುದೇ ಶ್ರೇಷ್ಠ ಎಂದು ಚರ್ಚೆ ಬಂದಾಗ, ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಜನರೇ ಸರ್ವಶ್ರೇಷ್ಠ ಎಂಬ ಉತ್ತರ ಸಿಕ್ಕಿತು. ಜನರಿಗೆ ಅಂತಹ ಶ್ರೇಷ್ಠತೆ ಬರಲು ಕಾರಣ ನಮ್ಮ ಸಂವಿಧಾನ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಕುಂದಾಪುರ ತಾಲೂಕು ಸೇವೆಗಳ ಸಮಿತಿ, ಕುಂದಾಪುರ ವಕೀಲರ ಸಂಘ ಹಾಗೂ ಅಭಿಯೋಗ ಇಲಾಖೆ ಸಂಯುಕ್ತ ಆಶ್ರಯದಲ್ಲಿ ವಕೀಲರ ಸಂಘದ ಸಭಾಂಗಣದಲ್ಲಿ ಬುಧವಾರ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ವಿಶ್ವದಲ್ಲಿಯೇ ಅತ್ಯಂತ ಉತ್ತಮವಾದ ಸಂವಿಧಾನವನ್ನು ಬಿ.ಆರ್.ಅಂಬೇಡ್ಕರ್ ನೇತೃತ್ವದಲ್ಲಿ ರಚಿಸಲಾಯಿತು. ಜನರಿಗೆ ಅನುಕೂಲವಾಗುವಂತೆ, ದೇಶದ ಸಾರ್ವಭೌಮತೆಗೆ ಪೂರಕವಾಗಿ ಕಾಲ ಕಾಲಕ್ಕೆ ಸಂವಿಧಾನವನ್ನು ತಿದ್ದುಪಡಿ ಮಾಡಲಾಯಿತು. ಸಂವಿಧಾನ ಜಾರಿಯಾಗಿ ಇಷ್ಟು ವರ್ಷಗಳಾದರೂ ಇನ್ನೂ ಕೆಲ ವರ್ಗ ಸಮಾನತೆ, ಸಾಮಾಜಿಕ ನ್ಯಾಯ, ತಾರತಮ್ಯ, ಅಸ್ಪೃಶ್ಯತೆಯಂತಹ ಸಮಸ್ಯೆಗಳನ್ನು ಎದುರಿಸುತ್ತಲೇ ಇದ್ದಾರೆ. ಇದೆಲ್ಲ ಪೂರ್ಣವಾಗಿ ನಿವಾರಣೆಯಾದಾಗ ಸಂವಿಧಾನದ ಆಶಯ ಸಾಕಾರಗೊಳ್ಳಲು ಸಾಧ್ಯ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಅಬ್ದುಲ್ ರಹೀಂ ಹುಸೇನ್ ಶೇಖ್ ಮಾತನಾಡಿ, ಈ ದಿನ ದೇಶದ ಪ್ರತಿಯೊಬ್ಬರಿಗೂ ವಿಶೇಷ ದಿನ. ಅನೇಕ ದೇಶಗಳ ಒಳ್ಳೆಯ ಅಂಶಗಳನ್ನು ಸಂಗ್ರಹಿಸಿ, ಉತ್ತಮವಾದ ರೀತಿಯಲ್ಲಿ ನಮ್ಮ ಸಂವಿಧಾನವನ್ನು ರಚಿಸಲಾಗಿದೆ. ಸಂವಿಧಾನ ಅನೇಕ ಸಲ ತಿದ್ದುಪಡಿಯಾದರೂ, ಅದರ ಮೂಲ ಆಶಯಕ್ಕೆ ಯಾವುದೇ ಧಕ್ಕೆ ಉಂಟಾಗಿಲ್ಲ. ನಮ್ಮಲ್ಲಿರುವ ಎಲ್ಲ ಧರ್ಮಗಳ ಗ್ರಂಥಗಳೊಂದಿಗೆ ಸಂವಿಧಾನ ಗ್ರಂಥಕ್ಕೂ ಅಷ್ಟೇ ಪ್ರಾಮುಖ್ಯತೆ ನೀಡಬೇಕಾಗಿದೆ ಎಂಜು ಹೇಳಿದರು.
ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಿವಿಲ್ ನ್ಯಾಯಾಧೀಶ ಕುಮಾರ ಜಿ., ಪ್ರಧಾನ ಸಿವಿಲ್ ನ್ಯಾಯಾಧೀಶೆ ಮಂಜುಳಾ ಜಿ., ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಶ್ರುತಿಶ್ರೀ ಎಸ್., ಸರಕಾರಿ ಅಭಿಯೋಜಕಿ ಇಂದಿರಾ ನಾಯ್ಕ್, ಸಹಾಯಕ ಸರಕಾರಿ ಅಭಿಯೋಜಕ ಉದಯ ಕುಮಾರ್ ಬಿ.ಎ., ಉಮಾ ನಾಯ್ಕ್, ಸಂಘದ ಪ್ರಧಾನ ಕಾರ್ಯದರ್ಶಿ ಗಿಳಿಯಾರು ಪ್ರಕಾಶ್ಚಂದ್ರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಹಿರಿಯ ವಕೀಲ ಟಿ.ಬಿ.ಶೆಟ್ಟಿ ಪರಿಚಯಿಸಿ, ವಕೀಲೆ ಶ್ರೇಯಾ ಸಿ.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.







