ಕುಂದಾಪುರ| ಉಳ್ತೂರಿನಲ್ಲಿ ಸಾರ್ವಜನಿಕ ಸಂಪರ್ಕ ಸಭೆ: ಮಲತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆಗೆ ಗ್ರಾಮಸ್ಥರ ವಿರೋಧ

ಕುಂದಾಪುರ, ಮಾ.25: ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ (ಎನ್‌ಜಿಟಿ) ಹಾಗೂ ಎಸ್ಬಿಎಂ(ಯು) 2.0 ಅನುದಾನದ ಜಲಶುದ್ಧಿ ಅಭಿಯಾನದಡಿ ಮಲತ್ಯಾಜ್ಯ ಸಂಸ್ಕರಣಾ ಘಟಕ ಯೋಜನೆಯನ್ನು ಅನುಷ್ಠಾನಗೊಳಿಸುವ ಹಿನ್ನೆಲೆಯಲ್ಲಿ ಬುಧವಾರ ಉಳ್ತೂರು ಎಂಬಲ್ಲಿರುವ ಸಾಲಿಗ್ರಾಮ ಪಟ್ಟಣ ಪಂಚಾಯತ್‌ಗೆ ಸೇರಿದ ಸರ್ವೇ ನಂ. 219/2 ರಲ್ಲಿ ನಡೆದ ಸಾರ್ವಜನಿಕ ಸಂಪರ್ಕ ಸಭೆಯಲ್ಲಿ ಘಟಕದ ಸ್ಥಾಪನೆಗೆ ತೀವ್ರ ವಿರೋಧ ಗ್ರಾಮಸ್ಥರಿಂದ ವ್ಯಕ್ತವಾಯಿತು.
ಸಾರ್ವಜನಿಕರಿಗೆ ಯೋಜನೆಯ ಮಾಹಿತಿ ನೀಡಲು ಆಗಮಿಸಬೇಕಿದ್ದ ಅಧಿಕಾರಿಗಳು ಒಂದು ಗಂಟೆ ತಡವಾಗಿಯೇ ಬಂದು ಗ್ರಾಮಸ್ಥರನ್ನು ಕಾಯುವಂತೆ ಮಾಡಿದರು. ಈ ಬಗ್ಗೆಯೂ ನಾಗರಿಕರು ಅಸಮಧಾನ ವ್ಯಕ್ತಪಡಿಸಿದರು. ಎಫ್‌ಎಸ್‌ಟಿಪಿ ಯೋಜನೆ ಬಗ್ಗೆ ವೀಣಾ ಎಂಬವರು ಮಾಹಿತಿ ನೀಡಿದ್ದು ಇದರಿಂದ ಸ್ಥಳೀಯವಾಗಿಯಾಗಲಿ, ಪರಿಸರಕ್ಕಾಗಲಿ ಯಾವುದೇ ರೀತಿಯಾದ ಹಾನಿಯಿಲ್ಲ ಎಂಬುದನ್ನು ವಿವರಿಸಿದರು.
ಆದರೆ ನಮ್ಮೂರಿಗೆ ಈ ಯೋಜನೆಯ ಅಗತ್ಯವಿಲ್ಲ. ಬೇರೆ ಕಡೆಯ ಸಮಸ್ಯೆಯನ್ನು ಜನನಿಬಿಡ ಪ್ರದೇಶಕ್ಕೆ ತರುವ ಹುನ್ನಾರ ಬೇಡ. ಉಳ್ತೂರು ಗ್ರಾಮವನ್ನೇ ಆಯ್ಕೆ ಮಾಡಿದ್ದು ಯಾಕೆ?. ಈ ಯೋಜನೆಯನ್ನು ಇಲ್ಲಿಗೆ ಕೈಬಿಡಿ ಎಂದು ಸೇರಿದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಇಲ್ಲಿಗೆ ಸಮೀಪವೇ ಮನೆಯಿದ್ದು ನಾವು ಬದುಕಬೇಕೆ ಬೇಡವೇ? ಎಂದು ಹಿರಿಯ ನಾಗರಿಕರೊಬ್ಬರು ಅಧಿಕಾರಿಗಳನ್ನು ಪ್ರಶ್ನಿಸಿದರು.
ಕೊರಗ ಶ್ರೇಯೋಭಿವೃದ್ಧಿ ಸಂಘಟನೆಯ ಮುಖಂಡ ಹಾಗೂ ಸ್ಥಳೀಯ ನಿವಾಸಿ ಗಣೇಶ್ ವಿ. ಮಾತನಾಡಿ, ಎಲ್ಲಿಂದಲೋ ಮಲ ತಂದು ಇಲ್ಲಿ ಹಾಕಲು ಬಿಡುವುದಿಲ್ಲ. ಯಾವುದೇ ಸಮಜಾಯಿಷಿಯನ್ನು ನಾವು ಒಪ್ಪುವುದಿಲ್ಲ. ಈ ಯೋಜನೆ ಇಲ್ಲಿ ಆಗಬಾರದು ಎಂದು ಹಿಂದಿನಿಂದಲೂ ಹೋರಾಟ ಮಾಡಿದ್ದೇವೆ. ಇಲ್ಲಿ ಎಸ್ಸಿ-ಎಸ್ಟಿ ಮನೆಗಳಿದ್ದು ಬೇರೆ ಕಡೆಯ ಮಲತ್ಯಾಜ್ಯ ಇಲ್ಲಿ ತಂದು ಸುರಿಯುವುದು ದಲಿತ ದೌರ್ಜನ್ಯ ಕಾಯ್ದೆಯಡಿ ಬರುತ್ತದೆ. ಅಧಿಕಾರಿಗಳು ಇದನ್ನೆಲ್ಲಾ ಮನಗಾಣಬೇಕು. ಪರಿಸರ ಹಾಗೂ ಭೂಮಿ ಉಳಿಸಿಕೊಳ್ಳಲು ಹೋರಾಟಕ್ಕೂ ಸಿದ್ಧರಿದ್ದೇವೆ. ಸಾಲಿಗ್ರಾಮ ಪ.ಪಂ ತನ್ನ ವ್ಯಾಪ್ತಿ ಹೊರತುಪಡಿಸಿ ಹಣವನ್ನು ಬೇರೆ ಗ್ರಾಮದಲ್ಲಿ ವಿನಿಯೋಗ ಮಾಡಿದ್ದು ಹೇಗೆ ಎಂಬುದು ಪ್ರಶ್ನೆಯಾಗಿದೆ ಎಂದರು.
ಸ್ಥಳೀಯ ನಿವಾಸಿ ಸುಮತಿ ಗೋವಿಂದ ಶೆಟ್ಟಿ ಉಳ್ತೂರು ಮಾತನಾಡಿ, ನಮ್ಮ ಮನೆಯ ಸಮೀಪವೇ ಈ ಘಟಕ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಊರಿನ ಶಾಲೆ, ಅಂಗನವಾಡಿ, ಆರೋಗ್ಯ ಕೇಂದ್ರ, ಕೆರೆಗಳ ಮೇಲೆ ಇದರಿಂದ ವ್ಯತಿರಿಕ್ತ ಪರಿಣಾಮವಾಗುತ್ತದೆ. ಜನಾಭಿಪ್ರಾಯ ಮೀರಿ ಕಾಮಗಾರಿ ಮಾಡಲು ಬಿಡುವುದಿಲ್ಲ. ಇಂತಹ ಜಾಗವನ್ನು ನಿವೇಶನ ರಹಿತರಿಗೆ ನೀಡಲಿ ಎಂದರು.
ಸಾಮಾಜಿಕ ಕಾರ್ಯಕರ್ತ ಅವಿನಾಶ್ ಉಳ್ತೂರು ಮಾತನಾಡಿ, ಈ ಘಟಕ ನಿರ್ಮಾಣದ ವಿರುದ್ಧ ಕಾನೂನು ಹೋರಾಟಕ್ಕೆ ರೂಪುರೇಷೆ ಸಿದ್ದ ಪಡಿಸಲಾಗಿದೆ. ಈ ನಡುವೆ ಜನಾಭಿಪ್ರಾಯಕ್ಕೆ ಬೆಲೆ ಕೊಡದಿದ್ದರೆ ಪ.ಪಂ ಹಾಗೂ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ ಮಾಡಲು ಹಿಂಜರಿಯುವುದಿಲ್ಲ ಎಂದು ಘೋಷಿಸಿದರು.
ಕೆದೂರು ಗ್ರಾಪಂ ಮಾಜಿ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಉಳ್ತೂರು ಮಾತನಾಡಿ, ಜನ-ಜಾನುವಾರುಗಳಿಗೆ ಜಲಮೂಲ ಸಿಗುವ ಪ್ರದೇಶ ಇಲ್ಲಿಗೆ ಸಮೀಪವಿದೆ. ಸಾವಿರಾರು ಕಾರ್ಮಿಕರು ಸಮೀಪದಲ್ಲಿದ್ದು ಒಂದು ಕಿ.ಮೀ ದೂರದಲ್ಲಿ ಪ್ರಸಿದ್ದ ಪಕ್ಷಿಧಾಮವಿದೆ. ಜನರ ಆಶಯಗಳನ್ನು ಗಾಳಿಗೆ ತೂರಿ ಯೋಜನೆ ಮಾಡಲು ಬಿಡುವುದಿಲ್ಲ ಎಂದರು.
ಬ್ರಹ್ಮಾವರ ತಹಶೀಲ್ದಾರ್ ಹಾಗೂ ಸಾಲಿಗ್ರಾಮ ಪಟ್ಟಣ ಪಂಚಾಯತ್ ಆಡಳಿತಾಧಿಕಾರಿ ಶ್ರೀಕಾಂತ್ ಹೆಗ್ಡೆ, ಪ.ಪಂ ಮುಖ್ಯಾಧಿಕಾರಿ ಅಜಯ್ ಭಂಡಾರ್ಕರ್ ಈ ವೇಳೆ ಉಪಸ್ಥಿತರಿದ್ದರು.
"ಸಾಲಿಗ್ರಾಮ ಪಟ್ಟಣ ಪಂಚಾಯತ್ 2012ರಲ್ಲಿ 2 ಎಕರೆ 17 ಸೆಂಟ್ಸ್ ಜಾಗವನ್ನು ಖಾಸಗಿಯೊಬ್ಬರಿಂದ ನಾಲ್ಕೈದು ಪಟ್ಟು ಹೆಚ್ಚಿನ ಬೆಲೆಗೆ ಕ್ರಯ ಮಾಡಿದ್ದು ಡಂಪಿಂಗ್ ಯಾರ್ಡ್ ಮಾಡಲು ಹೊರಟಿತ್ತು. ಆದರೆ ಊರವರ ಸಂಘಟಿತ ಹೋರಾಟದ ಪರಿಣಾಮ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣ ವಾಗಿರಲಿಲ್ಲ. ಜನವಸತಿ ಪ್ರದೇಶಕ್ಕೆ ಸಮೀಪದಲ್ಲಿ ರುವ ಈ ಜಾಗದಲ್ಲಿ ಇದೀಗ ಎಫ್‌ಎಸ್‌ಟಿಪಿ ನಿರ್ಮಿಸಲು ಮುಂದಾಗಿದ್ದು ಯಾವುದೇ ಕಾಮಗಾರಿ ಇಲ್ಲಿ ಮಾಡಬಾರ ದೆಂದು ಆಗ್ರಹಿಸುತ್ತೇವೆ. ಸಾಲಿಗ್ರಾಮದ ಕಸ ತ್ಯಾಜ್ಯ, ಮಲತ್ಯಾಜ್ಯ ಸಂಸ್ಕರಣಾ ಘಟಕ ಆ ವ್ಯಾಪ್ತಿಯಲ್ಲೇ ನಿರ್ಮಿಸಲಿ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ನೀಡುತ್ತೇವೆ ಹಾಗೂ ಕಾನೂನು ಹೋರಾಟ ಮಾಡುತ್ತೇವೆ".
-ಅಜಿತ್ ಉಳ್ತೂರು, ಸ್ಥಳೀಯ ನಿವಾಸಿ.
"ಸಾಲಿಗ್ರಾಮ ಪಪಂ ಸ್ಥಾಪಿಸಲುದ್ದೇಶಿಸಿದ ಎಫ್‌ಎಸ್‌ಟಿಪಿ ಯೋಜನೆಯು ಪರಿಸರಕ್ಕೆ ಮಾರಕವಾಗುತ್ತದೆ. ಅಧಿಕಾರಿಗಳು ಹೇಳಿದಂತೆ ಅದು ಉತ್ತಮ ಯೋಜನೆ ಹೌದಾದರೆ ಅದನ್ನು ಬೇರೆ ಕಡೆಯೇ ಮಾಡಲಿ. ನಮ್ಮೂರಿಗೆ ಬೇಡ. ನಾಲ್ಕಾರು ಗ್ರಾಮಗಳ ಜನರು ಒಗ್ಗಟ್ಟಾಗಿದ್ದೇವೆ. ಕಾಮಗಾರಿ ನಡೆಸಲು ಬಿಡಲ್ಲ. ಹೋರಾಟಕ್ಕೂ ಸಿದ್ಧ".
-ದೀಪಾ ಪ್ರವೀಣ್ ಶೆಟ್ಟಿ, ಕೆದೂರು ನಿವಾಸಿ.
"ಉಳ್ತೂರು ಗ್ರಾಮದ 219/2 ಸರ್ವೇ ನಂಬರಲ್ಲಿ ಮಲತ್ಯಾಜ್ಯ ಸಂಸ್ಕರಣಾ ಘಟಕವನ್ನು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಹಾಗೂ ಎಸ್ಬಿಎಂ (ಯು) 2.0 ಅನುದಾನದ ಜಲಶುದ್ಧಿ ಅಭಿಯಾನದಡಿ ನಿರ್ಮಿಸಲು ಸಾಲಿಗ್ರಾಮ ಪ.ಪಂ ವ್ಯಾಪ್ತಿಯಲ್ಲಿ ಜಾಗ ಅಲಭ್ಯವಿರುವ ಕಾರಣ ಉಳ್ತೂರಿನ ಜಾಗದಲ್ಲಿ ಘಟಕ ನಿರ್ಮಿಸಲು ಉದ್ದೇಶಿಸಲಾಗಿತ್ತು. ಜಿಲ್ಲಾಧಿಕಾರಿಗಳ ಆದೇಶದಂತೆ ಸಾರ್ವಜನಿಕರ ಸಭೆ ಕರೆದು ಯೋಜನೆ ಬಗ್ಗೆ ವಿವರಿಸ ಲಾಗಿದೆ. ಆದರೆ ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗುವುದು".
-ಅಜಯ್ ಭಂಡಾರ್ಕರ್, ಸಾಲಿಗ್ರಾಮ ಪ.ಪಂ ಮುಖ್ಯಾಧಿಕಾರಿ.
ಕಾನೂನು ಉಲ್ಲಂಘನೆ?
ಕಾನೂನು ವ್ಯಾಪ್ತಿಯನ್ನು ಮೀರಿ ಉಳ್ತೂರು ಸಹಿತ ಮೂರು ಗ್ರಾಮದ ಸಂಪೂರ್ಣ ವಿರೋಧದ ನಡುವೆ ಎಫ್‌ಎಸ್‌ಟಿಪಿ (ಮಲತ್ಯಾಜ್ಯ ಸಂಸ್ಕರಣಾ ಘಟಕ) ನಿರ್ಮಿಸಲು ಉದ್ದೇಶಿಸಲಾಗಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿಯಿಲ್ಲ. ಸ್ಥಳೀಯಾಡಳಿತದ ಅನುಮತಿ ಯನ್ನೂ ಪಡೆದಿಲ್ಲ. ಉದ್ದೇಶಿತ ಸ್ಥಳದ ವ್ಯಾಪ್ತಿಗೊಳಪಡುವ ಗ್ರಾಮಕ್ಕೆ ಇದರ ಉಪಯೋಗವೂ ಇಲ್ಲ. ಸ್ಥಳದ ಆಯ್ಕೆ, ಮಲತ್ಯಾಜ್ಯಗಳ ಸಂಗ್ರಹ ಪ್ರಮಾಣ ಸಹಿತ ಯಾವುದೇ ಕಾನೂನು ಪಾಲನೆಯೂ ಆಗಿಲ್ಲ ಎಂದು ನ್ಯಾಯವಾದಿ ಅವಿನಾಶ್ ಶೆಟ್ಟಿ ಬೇಳೂರು ಮಾಹಿತಿ ನೀಡಿದರು.
ಸಭೆಯ ಪ್ರಮುಖ ಅಂಶ... ಕಂಡಿದ್ದು ಕೇಳಿದ್ದು...
*‘ಮಲ ತ್ಯಾಜ್ಯ ಸಂಗ್ರಹ ಘಟಕ’ ವಿಚಾರದಲ್ಲಿ ಉಳ್ತೂರಿನಲ್ಲಿ ನಡೆದ ಸಾರ್ವಜನಿಕ ಸಂಪರ್ಕ ಸಭೆ
*ಕೆದೂರು ಗ್ರಾ.ಪಂ ವ್ಯಾಪ್ತಿಯ ಉಳ್ತೂರಿನಲ್ಲಿ ನಿರ್ಮಿಸಲುದ್ದೇಶಿಸಿದ ಎಫ್.ಎಸ್.ಟಿ.ಪಿ. ಘಟಕಕ್ಕೆ ವಿರೋಧ
*ಬೇರೆ ಊರಿನ ಮಲತ್ಯಾಜ್ಯ ನಮ್ಮೂರಿಗೆ ತಂದು ಸುರಿಯಬೇಡಿ
*ಉಳ್ತೂರು, ಕೆದೂರು, ಮಲ್ಯಾಡಿ, ಬೇಳೂರು ಹಾಗೂ ಸ್ಥಳೀಯ ನಾಗರಿಕರ ತೀವ್ರ ಆಕ್ರೋಶ
*ನಮ್ಮೂರಿಗೆ ಎಫ್.ಎಸ್.ಟಿ.ಪಿ. ಘಟಕ ಬೇಡವೇ ಬೇಡ ಗ್ರಾಮಸ್ಥರ ಒಕ್ಕೊರಲ ನಿರ್ಧಾರ
*ಸಾಲಿಗ್ರಾಮ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಹಾಗೂ ಆಡಳಿತಾಧಿಕಾರಿಗೆ ಮನವಿ






