ಕುಂದಾಪುರ| ಶಾಲಾ ಬಾಲಕಿಗೆ ಲೈಂಗಿಕ ಪೀಡನೆ: ಇಬ್ಬರು ಆರೋಪಿಗಳಿಗೆ 5 ವರ್ಷ ಜೈಲು ಶಿಕ್ಷೆ, ದಂಡ

ಪ್ರಶಾಂತ್ ನಾಯ್ಕ್ - ಶರತ್ ಶೆಟ್ಟಿ
ಕುಂದಾಪುರ, ಫೆ.5: ಕಳೆದ ವರ್ಷ ಅಮಾಸೆಬೈಲು ಠಾಣಾ ವ್ಯಾಪ್ತಿಯಲ್ಲಿ ಆಟೋರಿಕ್ಷಾವೊಂದರಲ್ಲಿ ನಡೆದ ಅಪ್ರಾಪ್ತ ವಯಸ್ಸಿನ ಶಾಲಾ ಬಾಲಕಿಗೆ ಲೈಂಗಿಕ ಪೀಡನೆಯ ಆರೋಪ ಸಾಬೀತಾಗಿದ್ದು ಪ್ರಕರಣದಲ್ಲಿ ಇಬ್ಬರನ್ನು ದೋಷಿಗಳೆಂದು ಉಡುಪಿ ಜಿಲ್ಲಾ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀನಿವಾಸ ಸುವರ್ಣ ಅವರು ತೀರ್ಪು ಪ್ರಕಟಿಸಿದ್ದಾರೆ.
ರಿಕ್ಷಾ ಚಾಲಕ ಶರತ್ ಶೆಟ್ಟಿ (32) ಮತ್ತು ಆತನ ಸ್ನೇಹಿತ ಪ್ರಶಾಂತ ನಾಯ್ಕ್(28) ಈ ಪ್ರಕರಣದ ಆರೋಪಿಗಳಾಗಿದ್ದು , ಇವರಿಗೆ 5 ವರ್ಷಗಳ ಕಾರಾಗೃಹ ಶಿಕ್ಷೆ, 5 ಸಾವಿರ ದಂಡ, ದಂಡ ತೆರದಿದ್ದಲ್ಲಿ 5 ತಿಂಗಳ ಹೆಚ್ಚುವರಿ ಸಜೆ ವಿಧಿಸಿದ್ದು, ನೊಂದ ಬಾಲಕಿಗೆ ಸರಕಾರ 50 ಸಾವಿರ ರೂ.ಗಳನ್ನು ಪರಿಹಾರ ರೂಪದಲ್ಲಿ ನೀಡಬೇಕೆಂದು ನ್ಯಾಯಾಲಯವು ಆದೇಶಿಸಿದೆ.
ಘಟನೆ ವಿವರ: ಪರಿಶಿಷ್ಟ ಜಾತಿಗೆ ಸೇರಿದ ಅಪ್ರಾಪ್ತ ಸಂತ್ರಸ್ಥ ಬಾಲಕಿ ಪ್ರತಿದಿನ ರಿಕ್ಷಾದಲ್ಲೇ ಶಾಲೆಗೆ ಬಂದು, ಹೋಗುತಿದ್ದು ಕಳೆದ ಜು.15ರಂದು ಶಾಲೆಯಿಂದ ಮನೆಗೆ ವಾಪಾಸು ಬರುವಾಗ ರಿಕ್ಷಾದಲ್ಲಿ ಶರತ್ ಶೆಟ್ಟಿ ಹಾಗೂ ಪ್ರಶಾಂತ್ ಲೈಂಗಿಕ ಕಿರುಕುಳ ನೀಡಿದ್ದರು. ಈ ಬಗ್ಗೆ ನೊಂದ ಬಾಲಕಿ ಶಾಲೆಯ ಅಧ್ಯಾಪಕರಿಗೆ ವಿಷಯ ತಿಳಿಸಿದ್ದು, ಅವರು ಅಮಾಸೆಬೈಲು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು.
ಕುಂದಾಪುರ ಉಪವಿಭಾಗದ ಡಿವೈಎಸ್ಪಿ ಎಚ್.ಡಿ.ಕುಲಕರ್ಣಿ ಅವರು ಕೇವಲ 15 ದಿನಗಳಲ್ಲೇ ತನಿಖೆಯನ್ನು ಪೂರ್ಣಗೊಳಿಸಿ ಆರೋಪಿಗಳಾದ ಮಚ್ಚಟ್ಟು ಗ್ರಾಮದವರಾದ ಶತ್ ಶೆಟ್ಟಿ ಹಾಗೂ ಪ್ರಶಾಂತ್ ವಿರುದ್ಧ ಪೋಕ್ಸೋ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಒಟ್ಟು 32 ಸಾಕ್ಷ್ಯಾಧಾರಗಳಿದ್ದು ನ್ಯಾಯಾಲಯವು 7 ತಿಂಗಳಿನಲ್ಲಿ ತ್ವರಿತಗತಿಯಲ್ಲಿ ಪ್ರಕರಣದ ಕೂಲಂಕಷ ವಿಚಾರಣೆ ನಡೆಸಿ ಆರೋಪಿಗಳು ದೋಷಿಗಳೆಂದು ತೀರ್ಪು ನೀಡಿದೆ.
ಪ್ರಾಸಿಕ್ಯೂಶನ್ ಪರವಾಗಿ ಉಡುಪಿ ಪೋಕ್ಸೋ ನ್ಯಾಯಾಲಯದ ಸರಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿ ಬೇಳೂರು, ಜಯರಾಮ ಶೆಟ್ಟಿ ಹಾಗೂ ವೈ.ಟಿ.ರಾಘವೇಂದ್ರ ವಾದಿಸಿದ್ದರು.






