ಕುಂದಾಪುರ ಶೂಟೌಟ್ ಪ್ರಕರಣ: ಆರೋಪಿ ಡೇರಿಕ್ 5 ದಿನ ಪೊಲೀಸ್ ಕಸ್ಟಡಿಗೆ

ಕುಂದಾಪುರ, ಆ.2: ಇಲ್ಲಿನ ಚರ್ಚ್ ರಸ್ತೆಯಲ್ಲಿ ಜು.31ರಂದು ನಸುಕಿನ ವೇಳೆ ನಡೆದ ಶೂಟೌಟ್ ಪ್ರಕರಣದ ಬಂಧಿತ ಆರೋಪಿ ಹೆಮ್ಮಾಡಿ ಸಮೀಪದ ಕನ್ನಡಕುದ್ರು ನಿವಾಸಿ ಡೆರಿಕ್ ಕ್ರಾಸ್ತಾ(55)ನನ್ನು ಪೊಲೀಸರು ರವಿವಾರ ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದಾರೆ.
ಆರೋಪಿಯನ್ನು ಹೆಚ್ಚಿನ ತನಿಖೆಗೆ ಒಳಪಡಿಸಬೇಕಾಗಿರುವುದರಿಂದ ಪೊಲೀಸ್ ಕಸ್ಟಡಿಗೆ ನೀಡಬೇಕು ಎಂಬ ಮನವಿಗೆ ಸ್ಪಂದಿಸಿದ ನ್ಯಾಯಾ ಧೀಶರು, ಆರೋಪಿಯನ್ನು 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶ ನೀಡಿದರು. ಅದರಂತೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.
ಕಾರು, ರೈಫಲ್ ವಶಕ್ಕೆ: ಹಣಕಾಸಿನ ವಿಚಾರಕ್ಕೆ ನಡೆಸಿದ ಗಲಾಟೆಯಲ್ಲಿ ಮಾತಿಗೆ ಮಾತು ಬೆಳೆದು ತನ್ನ ಬಳಿಯಿದ್ದ ರೈಫಲ್ ಮೂಲಕ ಐವನ್ ರಿಚರ್ಡ್ ಮಸ್ಕರೇನಸ್ ಯಾನೆ ಮುನ್ನಾ (45)ನನ್ನು ತೊಡೆಭಾಗಕ್ಕೆ ಗುಂಡಿಕ್ಕಿ ಬಳಿಕ ಡೇರಿಕ್ ತನ್ನ ಕಾರ್‌ನಲ್ಲಿ ಪರಾರಿಯಾಗಿದ್ದನು.
ಈ ಬಗ್ಗೆ ಉಡುಪಿ ಎಸ್ಪಿ ಹರಿರಾಂ ಶಂಕರ್ ಮಾರ್ಗದರ್ಶನ ಪೊಲೀಸರ ವಿಶೇಷ ತನಿಖಾ ತಂಡ ರಚಿಸಿದ್ದು ಶನಿವಾರ ಮದ್ಯಾಹ್ನದ ವೇಳೆ ಆರೋಪಿಯನ್ನು ಭಟ್ಕಳದ ಬೆಳಕೆ ಸಮೀಪದ ವಶಕ್ಕೆ ಪಡೆದು ವಿಚಾರಣೆ ಗೊಳಪಡಿಸಲಾಗಿತ್ತು. ಆತ ನೀಡಿದ ಮಾಹಿತಿಯಂತೆ ಉಡುಪಿಯ ಶಿರೂರು ಗಡಿ ಸಮೀಪದ ನಿರ್ಜನ ಕಾಡು ಪ್ರದೇಶದಲ್ಲಿ ಕೃತ್ಯಕ್ಕೆ ಬಳಸಿದ ರೈಫಲ್ ಹಾಗೂ ಕಾರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಪ್ರಕರಣದ ತನಿಖಾಧಿಕಾರಿ ಹಾಗೂ ಕುಂದಾಪುರ ನಗರ ಠಾಣೆ ಪೊಲೀಸ್ ನಿರೀಕ್ಷಕ ಜಯರಾಮ ಗೌಡ ನೇತೃತ್ವದಲ್ಲಿ ಕುಂದಾಪುರ ಎಸ್ಸೈ ನಂಜಾ ನಾಯ್ಕ್, ಸಿಬ್ಬಂದಿಗಳು, ಸೋಕೋ ತಂಡ ನೇತೃತ್ವದಲ್ಲಿ ರವಿವಾರ ಸ್ಥಳ ಮಹಜರು ಪ್ರಕ್ರಿಯೆ ನಡೆಸಿದ್ದಾರೆ.






