ಕುಂದಾಪುರ| ಚಲಿಸುತ್ತಿದ್ದ ಬೈಕ್ ಮೇಲೆ ಹಾರಿದ ಕಡವೆ: ಸವಾರ ಮೃತ್ಯು, ಸಹಸವಾರ ಗಂಭೀರ

ಕುಂದಾಪುರ: ದೇವಸ್ಥಾನಕ್ಕೆ ಹೋಗಿ ಹಿಂತಿರುಗಿ ಬರುತ್ತಿದ್ದ ಬೈಕ್‌ವೊಂದರ ಮೇಲೆ ಕಡವೆ ಹಾರಿದ ಪರಿಣಾಮ ಬೈಕ್ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದು ಸವಾರ ಮೃತಪಟ್ಟಿದ್ದು, ಸಹಸವಾರ ಗಾಯಗೊಂಡ ಘಟನೆ ಶನಿವಾರ ಮಧ್ಯಾಹ್ನ ಕಮಲಶಿಲೆ ಸಮೀಪದ ತಾರೆಕೊಡ್ಲು ಎಂಬಲ್ಲಿ ಸಂಭವಿಸಿದೆ.
ಮೃತಪಟ್ಟ ಬೈಕ್ ಸವಾರ ಕಾವ್ರಾಡಿ ಸಮೀಪದ ಶ್ರೇಯಸ್ ಮೊಗವೀರ (22) ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡ ಸಹಸವಾರ ಕಾವ್ರಾಡಿ ಪಡುವಾಲ್ತೂರಿನ ವಿಘ್ನೇಶ್ ಅವರನ್ನು ಚಿಕಿತ್ಸೆಗಾಗಿ ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಬ್ಬರು ಸ್ನೇಹಿತರು ಶನಿವಾರ ಮಧ್ಯಾಹ್ನ ಕಮಲಶಿಲೆ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ತೆರಳಿ ಪೂಜೆ ಮುಗಿಸಿ ವಾಪಸ್ಸಾಗುವಾಗ ತಾರೆಕೊಡ್ಲು ಸಮೀಪ ಕಡವೆಯೊಂದು ಬೈಕ್ ಮೇಲೆ ಹಾರಿದೆ. ಇದರಿಂದ ಬೈಕ್ ಪಲ್ಟಿಯಾಗಿ ಈ ದುರ್ಘಟನೆ ನಡೆದಿದೆ. ಬೈಕ್ ನಜ್ಜುಗುಜ್ಜಾಗಿದ್ದು ಕಡವೆ ಕೂಡ ಸತ್ತಿದೆ.
ಶಂಕರನಾರಾಯಣ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





