Kundapura | ಹೆಸಕುತ್ತೂರು ಶಾಲೆಯಲ್ಲಿ ಮಕ್ಕಳ ಹಬ್ಬದ ಸಡಗರ ‘ಸಿಂಗಾರ’

ಕುಂದಾಪುರ, ನ.21: ಮಕ್ಕಳು ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಬೆಳೆಯಬೇಕು. ಅಂತಹ ಸಾಧಕ ಮಕ್ಕಳನ್ನು ಅತಿಥಿಗಳಾಗಿ ಮಾಡಿ ಮಕ್ಕಳ ಹಬ್ಬ ಮಾಡಿದಾಗ ಇತರೆ ವಿದ್ಯಾರ್ಥಿಗಳಿಗೂ ಸ್ಫೂರ್ತಿಯಾಗುತ್ತದೆ ಎಂದು ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.
ಹೆಸಕುತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ಮಕ್ಕಳ ಹಬ್ಬದ ಸಡಗರ ‘ಸಿಂಗಾರ’ದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಮಕ್ಕಳೇ ಉದ್ಘಾಟಕರಾಗಿ, ಅಧ್ಯಕ್ಷರಾಗಿ, ಅತಿಥಿಗಳಾಗಿ ಸಭಾ ಕಾರ್ಯಕ್ರಮ ನಡೆಸಿಕೊಟ್ಟಿರುವುದು ಇಲ್ಲಿನ ವಿಶೇಷವಾಗಿತ್ತು. ಕಾರ್ಯಕ್ರಮವನ್ನು ಕಾಂತಾರ ಚಾಪ್ಟರ್-1 ಸಿನಿಮಾದ ಬಾಲನಟಿ ಸಮೀಕ್ಷ ಸುರೇಶ ಹಕ್ಲಾಡಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಶಾಲಾ ವಿದ್ಯಾರ್ಥಿ ನಾಯಕಿ ಆರಾಧನಾ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಶಾಲಾ ಉಪ ನಾಯಕ ಅದ್ವಿತ್ ವಿ. ಶೆಟ್ಟಿ, ಶಾಲಾ ವಿಪಕ್ಷ ನಾಯಕಿ ರನ್ಯಾ, ಶಾಲಾ ಸಾಂಸ್ಕೃತಿಕ ಸಚಿವೆ ಕನಿಷ್ಕ, ಆರಾಧ್ಯ ಎಂ.ಪಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಮೀಕ್ಷ ಸುರೇಶ್ ಹಕ್ಲಾಡಿ ಅವರನ್ನು ಕೆ. ಜಯಪ್ರಕಾಶ್ ಹೆಗ್ಡೆ ಸನ್ಮಾನಿಸಿದರು. ಕುಂದಾಪುರ ತಾಲೂಕು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಚಂದ್ರನಾಯ್ಕ್ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಸಾಧಕ ಶಿಕ್ಷಕರನ್ನು, ವಿದ್ಯಾರ್ಥಿಗಳನ್ನು, ಹಳೆ ವಿದ್ಯಾರ್ಥಿ ಗಳನ್ನು, ಪೋಷಕರ ಕ್ರೀಡಾಕೂಟದಲ್ಲಿ ವಿಜೇತರನ್ನು ಗೌರವಿಸಲಾಯಿತು. ಅಂಗನವಾಡಿ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ, ವಿಶೇಷ ಸ್ಮರಣಶಕ್ತಿ ಪ್ರದರ್ಶನ ನಡೆಯಿತು. ನಾಟಕಗಳಾದ ಶಿವಭೂತಿ, ಹೆಡ್ಡಾಯಣವನ್ನು ಪ್ರದರ್ಶಿಸಲಾಯಿತು.
ಈ ಸಂದರ್ಭದಲ್ಲಿ ಶಾಲಾ ಎಸ್ಡಿಎಂಸಿ ಅಧ್ಯಕ್ಷ ಸುಧಾಕರ ಕುಲಾಲ್, ಶಾಲಾ ಮುಖ್ಯ ಶಿಕ್ಷಕ ಶೇಖರ ಕುಮಾರ್, ಸಹ ಶಿಕ್ಷಕರಾದ ಸಂಜೀವ ಎಂ, ವಿಜಯಾ ಆರ್, ಅಶೋಕ ತೆಕ್ಕಟ್ಟೆ, ವಿಜಯ ಶೆಟ್ಟಿ, ರವೀಂದ್ರ ನಾಯಕ್, ಸ್ವಾತಿ ಬಿ, ಗೌರವ ಶಿಕ್ಷಕಿ ಮಧುರ ಉಪಸ್ಥಿತರಿದ್ದರು.
ಶಾಲಾ ಶಿಕ್ಷಣ ಸಚಿವೆ ಕೃತಿ ಸ್ವಾಗತಿಸಿ, ಶ್ರೀವತ್ಸ ಭಟ್ ವಂದಿಸಿದರು.







