ಕುಂದಾಪುರ | ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸ್ಕ್ರಾಚ್ ಪ್ರೋಗ್ರಾಮಿಂಗ್ ತರಬೇತಿ

ಕುಂದಾಪುರ, ಡಿ.7: ಪ್ರಾಥಮಿಕ ಹಂತದ ವಿದ್ಯಾರ್ಥಿಗಳು, ಆಂಗ್ಲ ಭಾಷೆಯ ಸಹಾಯವಿಲ್ಲದೆ ಕನ್ನಡದಲ್ಲೇ ಕಂಪ್ಯೂಟರ್ ಪ್ರೋಗ್ರಾಂಗಳನ್ನು ಬರೆಯುವುದು ಸಾಧ್ಯವಿದೆ. ಇದಕ್ಕಾಗಿ ಗ್ರಾಮೀಣ ಭಾಗದ ಸರಕಾರಿ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಉದ್ದೇಶ ನಮ್ಮದಾಗಿದೆ ಎಂದು ಕರಾವಳಿ ವಿಕಿಪಿಡಿಯನ್ ಸ್ಥಾಪಕ ಕಾರ್ಯದರ್ಶಿ, ವಿಶ್ವ ಕನ್ನಡ ಫೌಂಡೇಶನ್ ನಿರ್ದೇಶಕರು, ವಿಜ್ಞಾನಿ ಡಾ.ಯು.ಬಿ.ಪವನಜ ಹೇಳಿದ್ದಾರೆ.
ಹೆಸಕುತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸ್ಕ್ರಾಚ್ ಪ್ರೋಗ್ರಾಮಿಂಗ್ ತರಬೇತಿಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ವಿಶ್ವ ಕನ್ನಡ ಫೌಂಡೇಶನ್ ನ ನಿರ್ದೇಶಕ, ವಿಜ್ಞಾನಿ ಆನಂದ ಸಾವಂತ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದರು. ಶಾಲೆಯ 7ನೇ ತರಗತಿಯ ಎಲ್ಲ ವಿದ್ಯಾರ್ಥಿಗಳು ಶಾಲೆಯ ಕಂಪ್ಯೂಟರ್ ಲ್ಯಾಬ್ ನಲ್ಲಿ ನಡೆದ ಈ ತರಬೇತಿಯ ಪ್ರಯೋಜನವನ್ನು ಪಡೆದರು.
ಶಾಲಾ ಎಸ್ಡಿಎಂಸಿ ಅಧ್ಯಕ್ಷ ಸುಧಾಕರ ಕುಲಾಲ ಅಧ್ಯಕ್ಷತೆ ವಹಿಸಿದ್ದರು. ಡಯೆಟ್ ಉಡುಪಿಯ ಪ್ರಾಂಶುಪಾಲ ಅಶೋಕ ಕಾಮತ್, ಉಪನ್ಯಾಸಕ ರಾದ ನಾಗರಾಜ್, ಸುರೇಶ ಭಟ್, ಶಾಲಾ ಶಿಕ್ಷಕರಾದ ಸಂಜೀವ ಎಂ., ವಿಜಯಾ ಆರ್., ವಿಜಯ ಶೆಟ್ಟಿ, ಸ್ವಾತಿ ಬಿ. ಉಪಸ್ಥಿತರಿದ್ದರು.
ಶಾಲೆಯ ಮುಖ್ಯ ಶಿಕ್ಷಕ ಶೇಖರ ಕುಮಾರ್ ಸ್ವಾಗತಿಸಿದರು. ಸಹಶಿಕ್ಷಕಿ ವಿಜಯಾ ಆರ್. ವಂದಿಸಿದರು. ಸಹಶಿಕ್ಷಕ ಅಶೋಕ ತೆಕ್ಕಟ್ಟೆ ಕಾರ್ಯಕ್ರಮ ನಿರೂಪಿಸಿದರು.







