ಕುಂದಾಪುರ| ಎಸ್‌ಐಆರ್ ವಿಚಾರ: ಅಧಿಕಾರಿಯ ಸರಕಾರಿ ಕರ್ತವ್ಯಕ್ಕೆ ಅಡ್ಡಿ, ಜಾತಿನಿಂದನೆಯ ದೂರು; ತಂದೆ-ಮಗ ಬಂಧನ

ಕುಂದಾಪುರ, ಜು.16: ಎಸ್‌ಐಆರ್ ವಿಚಾರದಲ್ಲಿ ಗ್ರಾಮ ಆಡಳಿತ ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ಬೈದು, ಜಾತಿ ನಿಂದನೆ ಮಾಡಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಕುಂದಾಪುರ ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಗುಲ್ವಾಡಿ ನಿವಾಸಿಗಳಾದ ಪಳ್ಳಿ ಸುಲೇಮಾನ್ ಮತ್ತು ಆತನ ಮಗ ಶಫಿ ಬಂಧಿತ ಆರೋಪಿಗಳು.
ಘಟನೆಯ ವಿವರ: ಜು.15ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಕುಂದಾಪುರ ತಾಲೂಕಿನ ಗುಲ್ವಾಡಿ ಗ್ರಾಮ ಪಂಚಾಯತ್ ಆವರಣದಲ್ಲಿರುವ ಗ್ರಾಮ ಆಡಳಿತ ಅಧಿಕಾರಿ ಕಛೇರಿಯಲ್ಲಿ ಅಧಿಕಾರಿ ಪ್ರಕಾಶ ನಾಯ್ಕ ಅವರು ಕರ್ತವ್ಯ ನಿರ್ವಹಿಸುತ್ತಿದ್ದಾಗ ಕಛೇರಿಗೆ ಬಂದ ಆರೋಪಿಗಳಾದ ಪಳ್ಳಿ ಸುಲೇಮಾನ್ ಹಾಗೂ ಶಫಿ, ಎಸ್‌ಐಆರ್ ಫಾರ್ಮ್ ನೀಡುವ ವಿಚಾರವಾಗಿ ಅಧಿಕಾರಿಯೊಂದಿಗೆ ತಗಾದೆ ತೆಗೆದಿದ್ದಾರೆ.
ಫಾರ್ಮ್‌ನ್ನು ತಮಗೆ ನೀಡುವಂತೆ ಅಧಿಕಾರಿ ಹೇಳಿದಾಗ ಆಕ್ರೋಶಗೊಂಡ ಆರೋಪಿಗಳಿಬ್ಬರು, ಅಧಿಕಾರಿಗೆ ಅವಾಚ್ಯವಾಗಿ ಬೈದು, ಜೀವ ಬೆದರಿಕೆ ಹಾಕಿದ್ದಲ್ಲದೆ, ಜಾತಿ ನಿಂದನೆ ಮಾಡಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಪ್ರಕರಣ ದಾಖಲಾದ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಪೊಲೀಸರು, ಕುಂದಾಪುರ ಪೊಲೀಸ್ ಉಪಾಧೀಕ್ಷಕ ಎಚ್.ಡಿ. ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ ಹಾಗೂ ಕುಂದಾಪುರ ವೃತ್ತ ನಿರೀಕ್ಷಕ ಸಂತೋಷ ಕಾಯ್ಕಿಣಿ ಅವರ ನೇತೃತ್ವ ದಲ್ಲಿ ಗ್ರಾಮಾಂತರ ಠಾಣೆ ಪಿಎಸ್‌ಐಗಳಾದ ನಿರಂಜನ್ ಗೌಡ, ಚಂದ್ರಕಲಾ ಎಂ. ಪತ್ತಾರ ಹಾಗೂ ಸಿಬ್ಬಂದಿಗಳಾದ ಎ.ಎಸ್. ಸೂರ ನಾಯ್, ರಮೇಶ್ ನರೂಣಿ ಮತ್ತು ಮಂಜುನಾಥ ಪಡಸಲಗಿ ಅವರನ್ನೊಳಗೊಂಡ ಪೊಲೀಸ್ ತಂಡವು, ಜು.16ರಂದು ಗುಲ್ವಾಡಿ ಗ್ರಾಮದ ಮಾವಿನಕಟ್ಟೆ ಎಂಬಲ್ಲಿ ಆರೋಪಿಗಳಾದ ಪಳ್ಳಿ ಸುಲೇಮಾನ್ ಮತ್ತು ಶಫಿ ಇಬ್ಬರನ್ನೂ ದಸ್ತಗಿರಿ ಮಾಡಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.






