ಕುಂದಾಪುರ| ಹೆಲ್ಮೆಟ್ ಧರಿಸಿ ದೇವಸ್ಥಾನದ ಹುಂಡಿ ಕಳವು ಪ್ರಕರಣ: ಸಂದೀಪ ಆಚಾರಿ, ಮುತ್ತಪ್ಪ ಶರಣಪ್ಪ ಬಂಧನ

ಕುಂದಾಪುರ, ಎ.24: ಆಜ್ರಿ ಗ್ರಾಮದ ಉಮಾಮಹೇಶ್ವರ ದೇವಸ್ಥಾನದಲ್ಲಿ ಹೆಲ್ಮೆಟ್ ಧರಿಸಿಕೊಂಡು ಬಂದು ಕಾಣಿಕೆ ಹುಂಡಿ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಶಂಕರನಾರಾಯಣ ಪೊಲೀಸರು ಬಂಧಿಸಿದ್ದಾರೆ.
ಕಮಲಶಿಲೆ ಗ್ರಾಮದ ಎಳಬೇರು ನಿವಾಸಿ ಸಂದೀಪ ಆಚಾರಿ(28) ಹಾಗೂ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಮುತ್ತಪ್ಪ ಶರಣಪ್ಪ ವಾಲಿಕರ್(40) ಬಂಧಿತ ಆರೋಪಿಗಳು.
ಇವರು ಎ.20ರಂದು ಬೆಳಗ್ಗೆ ಹೆಲ್ಮೇಟ್ ಧರಿಸಿ ದೇವಸ್ಥಾನದ ಹೊರ ಪೌಳಿಗೆ ಬಂದು ಕಾಣಿಕೆ ಹುಂಡಿಯನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಬಗ್ಗೆ ಶಂಕರ ನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಾಗಲಕೋಟೆ ಜಿಲ್ಲೆಯ ಇಳಕಲ್‌ನಲ್ಲಿ ಬಂಧಿಸಿ, ಕೃತಕ್ಕೆ ಬಳಸಿದ ಬೈಕ್ ಹಾಗೂ ಮೂರು ಮೊಬೈಲ್ ಫೋನ್ ಮತ್ತು ದೇವಸ್ಥಾನದ ಕಾಣಿಕೆ ಹುಂಡಿಯನ್ನು ವಶಪಡಿಸಿಕೊಂಡಿದ್ದಾರೆ. ಇವುಗಳ ಒಟ್ಟು ಮೌಲ್ಯ 1,50,000 ರೂ. ಎಂದು ಅಂದಾಜಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಕುಂದಾಪುರ ಡಿವೈಎಸ್ಪಿ ಎಚ್.ಡಿ.ಕುಲಕರ್ಣಿ ಹಾಗೂ ಕುಂದಾಪುರ ವೃತ್ತ ನಿರೀಕ್ಷಕ ಸಂತೋಷ್ ಎ.ಕಾಯ್ಕಣಿ ಮಾರ್ಗದರ್ಶನದಲ್ಲಿ ಶಂಕರನಾರಾಯಣ ಠಾಣಾ ಎಸ್ಸೈಗಳಾದ ಐ.ಆರ್.ಗಡ್ಡೇಕರ್ ಮತ್ತು ಅಕ್ಷಯ ಕುಮಾರಿ, ಸಿಬ್ಬಂದಿ ಸಚಿನ್ ಶೆಟ್ಟಿ, ಜಯರಾಮ ನಾಯ್ಕ್, ಚೇತನ್ ಕುಮಾರ್, ನವೀನ್ ನಾಯ್ಕ್, ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ಸಿಬ್ಬಂದಿ ಮೌನೇಶ್ ನಾಯ್ಕ್, ಜಿಲ್ಲಾ ತಾಂತ್ರಿಕ ವಿಭಾಗದ ದಿನೇಶ್ ಈ ಕಾರ್ಯಾಚರಣೆ ನಡೆಸಿದ್ದಾರೆ.






