ಕುಂದಾಪುರ | ಟಿಪ್ಪರ್ ಢಿಕ್ಕಿ: ದ್ವಿಚಕ್ರ ವಾಹನ ಸವಾರ ಮೃತ್ಯು

ಕುಂದಾಪುರ: ಮರಳು ಸಾಗಾಟ ಟಿಪ್ಪರ್ ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿಯಾದ ಪರಿಣಾಮ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಹಂಗಳೂರು ರಾಷ್ಟ್ರೀಯ ಹೆದ್ದಾರಿ-66ರ ಡಿವೈಡರ್ ಬಳಿ ಬುಧವಾರ ನಡೆದಿದೆ.
ಮೂಲತಃ ಆಲೂರಿನವರಾದ ಪ್ರಸಕ್ತ ಕೋಟೇಶ್ವರದ ಅಂಕದಕಟ್ಟೆ ಬಳಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಕೃಷ್ಣಮೂರ್ತಿ ಅಡಿಗ (57) ಮೃತಪಟ್ಟವರು. ಅವರು ಅಡುಗೆ ಕೆಲಸ ಮಾಡಿಕೊಂಡಿದ್ದರು. ವಾರದ ಹಿಂದೆ ಖರೀದಿಸಿದ ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ ಹಾಕಿಸಲು ಮನೆಯಿಂದ ಹೊರಟವರು ಸರ್ವೀಸ್ ರಸ್ತೆಯಿಂದ ಹೆದ್ದಾರಿಗೆ ತಿರುವು ಪಡೆದಾಗ ಕುಂದಾಪುರ ಕಡೆಯಿಂದ ಉಡುಪಿಯತ್ತ ಸಾಗುತ್ತಿದ್ದ ಟಿಪ್ಪರ್ ಢಿಕ್ಕಿ ಹೊಡೆದಿದೆ. ಈ ವೇಳೆ ರಸ್ತೆಗೆಸೆಯಲ್ಪಟ್ಟ ಕೃಷ್ಣಮೂರ್ತಿಯವರ ತಲೆಗೆ ಗಂಭೀರ ಗಾಯಗಳಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಸಂಬಂಧ ಟಿಪ್ಪರ್ ಚಾಲಕ ಶಶಾಂಕ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕುಂದಾಪುರ ನಗರ ಠಾಣೆ ಪೊಲೀಸ್ ನಿರೀಕ್ಷಕ ಜಯರಾಮ ಗೌಡ, ಸಂಚಾರ ಠಾಣೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.







