ಕುಂದಾಪುರ| ಅಪ್ರಾಪ್ತನಿಂದ ಪ್ರಚೋದನಕಾರಿ ಹೇಳಿಕೆಯ ವಿಡಿಯೋ ಚಿತ್ರೀಕರಣ: ಇಬ್ಬರು ಆರೋಪಿಗಳ ಬಂಧನ

ಕುಂದಾಪುರ: ಉತ್ತರ ಭಾರತದ ಕೂಲಿ ಕಾರ್ಮಿಕ ಕುಟುಂಬದ ಅಪ್ರಾಪ್ತ ಬಾಲಕನಿಂದ ಬಲವಂತವಾಗಿ ದೇಶದ್ರೋಹದ ಹೇಳಿಕೆ ದಾಖಲಿಸಿ ಆ ದೃಶ್ಯವನ್ನು ಮೊಬೈಲ್ ನಲ್ಲಿ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಪ್ರಚೋದನೆ ನೀಡಿದ ಆರೋಪದಡಿಯಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಶಶಾಂಕ್ ಹಾಗೂ ಪ್ರಮೋದ್ ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಕುಂದಾಪುರದ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಬಾಲಕನ ತಂದೆ ನೀಡಿದ ದೂರಿನಂತೆ ಪ್ರಕರಣಕ್ಕೆ ಸಂಬಂಧಿಸಿ ಶಶಾಂಕ್ ಹಾಗೂ ಪ್ರಮೋದ್ ರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅದೇ ರೀತಿ ಆರೋಪಿ ಶಶಾಂಕ್, ತನ್ನ ಮೇಲೆಯೂ ಗುಂಪೊಂದು ಹಲ್ಲೆಗೆ ನಡೆಸಿದೆ ಎಂದು ಆರೋಪಿಸಿ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರತಿ ದೂರು ನೀಡಿದ್ದು ಅದರಂತೆಯೂ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
ವಿಡಿಯೋ ಹರಿಬಿಟ್ಟರೆ ಕಾನೂನು ಕ್ರಮ: ಎಸ್ಪಿ
ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹೇರ್‌ಡ್ರೆಸ್ ಅಂಗಡಿಯೊಂದರಲ್ಲಿ ಬಿಹಾರ ಮೂಲದ 11 ವರ್ಷದ ಬಾಲಕನೊಬ್ಬ ಪ್ರಚೋದನಕಾರಿ ಘೋಷಣೆ ಕೂಗುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಚಾರದಲ್ಲಿ ಈಗಾಗಲೇ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿರುವುದರಿಂದ ಈ ವಿಡಿಯೋವನ್ನು ಸಾರ್ವಜನಿಕರು ಶೇರ್ ಮಾಡುವುದಾಗಲಿ ಅಥವಾ ಪೋಸ್ಟ್ ಮಾಡುವುದಾಗಲಿ ಮಾಡಬಾರದು. ಮಾಡಿದಲ್ಲಿ ಅವರ ವಿರುದ್ಧ ಐಟಿ ಕಾಯ್ದೆ, ಜೆಜೆ ಆಕ್ಟ್, ಇತರ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದ್ದಾರೆ.






