ನೆರೆಮನೆಯ ಗಿರಿಜಾ ಶೆಟ್ಟಿಗಾರ್ ಸಮಸ್ಯೆ ಪರಿಹಾರಕ್ಕೆ ಮುಸ್ಲಿಮ್ ಮಹಿಳೆಯರಿಂದ ಮನವಿ; ಉಸ್ತುವಾರಿ ಸಚಿವರ ಭೇಟಿ

ಉಡುಪಿ: 80 ಬಡಗಬೆಟ್ಟು ಗ್ರಾಮದಲ್ಲಿ ಸುಮಾರು 35ವರ್ಷಗಳ ಹಿಂದೆ ಮಂಜೂರಾದ 5 ಸೆಂಟ್ಸ್ ಭೂಮಿಯಲ್ಲಿ ಮನೆ ನಿರ್ಮಿಸಲು ಅವಕಾಶ ಕಲ್ಪಿಸುವಂತೆ ವೃದ್ಧೆಯೊಬ್ಬರಿಗಾಗಿ ನೆರೆಮನೆಯ ಮುಸ್ಲಿಮ್ ಮಹಿಳೆಯರು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಭೇಟಿ ಮಾಡಿಸಿ ಮನವಿ ಮಾಡುವ ಮೂಲಕ ಕೋಮು ಸೌಹಾರ್ದತೆ ಮೆರೆದಿದ್ದಾರೆ.
ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಗಿರಿಜಾ ಶೆಟ್ಟಿಗಾರ್ ಅವರಿಗೆ 1989ರಲ್ಲಿ ಬಡ ಜನತೆಗೆ ವಿತರಿಸಲಾಗುವ ಮನೆ ನಿವೇಶನ ಯೋಜನೆಯಡಿಯಲ್ಲಿ 5 ಸೆಂಟ್ಸ್ ಭೂಮಿ ಮಂಜೂರಾಗಿ ಹಕ್ಕು ಪತ್ರ ಪಡೆದಿದ್ದರು. ಆದರೆ ತಾಂತ್ರಿಕ ಸಮಸ್ಯೆಯಿಂದಾಗಿ ಆ ಜಾಗದಲ್ಲಿ ಮನೆ ನಿರ್ಮಿಸಲು ಗಿರಿಜಾ ಅವರಿಗೆ ಸಾಧ್ಯವಾಗಿರಲಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು ಈ ಜಾಗವನ್ನು ಡೀಮ್ಡ್ ಫಾರೆಸ್ಟ್ ಎಂದು ಸಬೂಬು ಹೇಳಿ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ವಿಧವೆಯಾಗಿರುವ ಗಿರಿಜಾ ಶೆಟ್ಟಿಗಾರ್ ಹಲವು ವರ್ಷಗಳಿಂದ ಸ್ವಂತ ಸೂರಿಲ್ಲದೆ ಬಾಡಿಗೆ ಮನೆಯಲ್ಲಿ ವಾಸವಾಗಿ ದ್ದಾರೆ. ಈ ಸಂಬಂಧ ಹಲವರನ್ನು ಭೇಟಿ ಮಾಡಿದರೂ ಅವರಿಗೆ ಯಾವುದೇ ಸ್ಪಂದನೆ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಇವರ ನೋವನ್ನು ಕಂಡ ನೆರೆಮನೆಯ ಮಹಿಳೆಯರು, ಇಂದು ಉಡುಪಿಗೆ ಆಗಮಿಸಿದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಭೇಟಿ ಮಾಡಿಸಿದರು.
ಈ ವೇಳೆ ಗಿರಿಜಾ ಶೆಟ್ಟಿಗಾರ್, ನನಗೆ ಮಂಜೂರಾದ ಸ್ಥಳದಲ್ಲಿ ಮನೆ ನಿರ್ಮಿಸಲು ಸೂಕ್ತ ವ್ಯವಸ್ಥೆಯನ್ನು ಕಲ್ಪಿಸ ಬೇಕಾಗಿ ಸಚಿವರಲ್ಲಿ ಮನವಿ ಮಾಡಿದರು. ವೃದ್ಧೆಯ ಸಮಸ್ಯೆಯನ್ನು ಸಚಿವರಿಗೆ ವಿವರಿಸುವಾಗ ನೆರೆಮನೆಯ ಮುಸ್ಲಿಮ್ ಮಹಿಳೆಯರು ಬಾವುಕರಾದರು. ಇದನ್ನು ಗಮನಿಸಿದ ಸಚಿವರು, ಹಿಂದೂ ಮಹಿಳೆಯ ನೋವಿಗೆ ಮುಸ್ಲಿಮ್ ಮಹಿಳೆಯರು ಕಣ್ಣೀರು ಹಾಕುತ್ತಿದ್ದಾರೆ. ಇದು ನಮ್ಮ ಭಾರತ ದೇಶ. ಇದನ್ನು ಉಡುಪಿ ಬಿಜೆಪಿಯವರು ಅರಿತುಕೊಳ್ಳಬೇಕು ಎಂದರು.
‘ನೀವು ಯಾವುದೇ ತಲೆಬಿಸಿ ಮಾಡಿಕೊಳ್ಳಬೇಡಿ. ನಾನು ಖಂಡಿತವಾಗಿ ನಿಮ್ಮ ಸಮಸ್ಯೆಯನ್ನು ಬಗೆಹರಿಸುತ್ತೇನೆ ಎಂದು ಸಚಿವರು ವೃದ್ಧ ಮಹಿಳೆಗೆ ಭರವಸೆ ನೀಡಿದರು.






