ನವದುರ್ಗೆಯರ ಕಾವಿ ವರ್ಣದ ಕಲಾಕೃತಿಗಳ ಪ್ರದರ್ಶನಕ್ಕೆ ಚಾಲನೆ

ಉಡುಪಿ, ಅ.21: ಹಾವಂಜೆ ಭಾವನಾ ಫೌಂಡೇಶನ್ ಹಾಗೂ ಬಾಸ ಗ್ಯಾಲರಿ ಮತ್ತು ಸ್ಟುಡಿಯೋ, ಉಡುಪಿ ಶ್ರೀಸ್ಥಾನಿಕ ಬ್ರಾಹ್ಮಣ ಸಂಘದ ಸಹಯೋಗದಲ್ಲಿ ಕುಂಜಿಬೆಟ್ಟಿನ ಶಾರದಾ ಮಂಟಪದಲ್ಲಿರುವ ಕೆ.ಆನಂದರಾವ್ ಸಭಾಂಗಣದ ಗ್ಯಾಲರಿ ಯಲ್ಲಿ ಸಿಂಧೂರ ಎನ್ನುವ ಶೀರ್ಷಿಕೆಯಡಿಯಲ್ಲಿ ಸಂಯೋಜಿಸಿದ ಕಲಾವಿದ ಡಾ.ಜನಾರ್ದನ ಹಾವಂಜೆ ಅವರ ನವ ದುರ್ಗೆ ಯರ ಕಾವಿ ವರ್ಣದ ಕಲಾಕೃತಿಗಳ ಪ್ರದರ್ಶನವನ್ನು ಕಾರ್ಪೋರೇಶನ್ ಬ್ಯಾಂಕಿನ ನಿವೃತ್ತ ಡಿಜಿಎಂ ಸಿ.ಎಸ್.ರಾವ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಭಾರತೀಯ ಸಾಂಪ್ರದಾಯಿಕ ಕಲಾಪ್ರಕಾರಗಳ ಲ್ಲೊಂದಾದ ಪುರಾತನವಾದ ಕಾವಿ ಕಲೆ ಯನ್ನು ಉಳಿಸಿ ಬೆಳೆಸುವಲ್ಲಿ ಹಾವಂಜೆ ಯವರ ಶ್ರಮ ನಿಜಕ್ಕೂ ಸ್ತುತ್ಯಾರ್ಹವಾದುದು. ಕೆಂಪು ಹಾಗೂ ಬಿಳಿ; ಸುಣ್ಣ ಮತ್ತು ಕೆಮ್ಮಣ್ಣು ಇವನ್ನಷ್ಟೇ ಬಳಸಿ ರಚಿಸುವ ಈ ಕಲಾಪ್ರಕಾರಕ್ಕೆ ಇನ್ನಾದರೂ ತಕ್ಕುದಾದ ಪ್ರಾಶಸ್ತ್ಯ ದೊರೆತು ಇನ್ನಷ್ಟು ಕಲಾ ಕಾರರು ಈ ಕೊಂಕಣ ಕರಾವಳಿಯ ಭಾಗದ ಕಲೆಯನ್ನು ಬೆಳೆಸುವಂತಾಗಲಿ ಎಂದು ಶುಭ ಹಾರೈಸಿದರು.
ಲೆಕ್ಕಪರಿಶೋದಕ ಗಣೇಶ್ ಹೆಬ್ಬಾರ್ ಮಾತನಾಡಿದರು. ಸ್ಥಾನಿಕ ಬ್ರಾಹ್ಮಣ ಸಂಘದ ಅಧ್ಯಕ್ಷ ಮಂಜುನಾಥ ಹೆಬ್ಬಾರ್, ಭಾವನಾ ಫೌಂಡೇಶನ್‌ನ ನಿರ್ದೇಶಕ ಯಕ್ಷ ಗುರು ಹಾವಂಜೆ ಮಂಜುನಾಥ ರಾವ್ ಉಪಸ್ಥಿತರಿದ್ದರು. ಕಲಾವಿದ ಜನಾರ್ದನ ಹಾವಂಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಭಾಕರ ಭಂಡಿ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ವಿದುಷಿ ಅಕ್ಷತಾ ವಿಶು ರಾವ್ ಹಾಗೂ ಹಾವಂಜೆ ಮಂಜುನಾಥಯ್ಯ ಅವರ ದೇವಿ ಮಾಹಾತ್ಮೆ ವಾಚನ- ಪ್ರವಚನ ಕಾರ್ಯಕ್ರಮ ನಡೆಯಿತು. ಈ ಕಲಾ ಪ್ರದರ್ಶನವು ಅ.24ರವರೆಗೆ ಅಪರಾಹ್ನ 3ರಿಂ ರಾತ್ರಿ 8ರವರೆಗೆ ಸಾರ್ವಜನಿಕ ವೀಕ್ಷಣೆಗೆ ತೆರೆದಿರುತ್ತದೆ.







