ಸಾವಿತ್ರಿಬಾಯಿ ಪುಲೆ ಹೆಸರಲ್ಲಿ ಶಿಕ್ಷಕರ ದಿನ ಆಚರಣೆಯಾಗಲಿ: ಸುಂದರ ಮಾಸ್ತರ್

ಬ್ರಹ್ಮಾವರ, ಜ.4: ಮನುಸ್ಮ್ರತಿ ಆಚರಣೆಯಲ್ಲಿದ್ದ ಆ ಕಾಲದಲ್ಲಿ ಈ ದೇಶದ ದಲಿತರಿಗೆ ಮತ್ತು ಮಹಿಳೆಯರಿಗೆ ಶಿಕ್ಷಣ ಕೊಟ್ಟ ಹಾಗೂ ಎಲ್ಲಾ ಅವಮಾನಗಳನ್ನು ಅನುಭವಿಸಿಯೂ ಈ ದೇಶದ ಶೋಷಿತರಿಗೆ ಶಿಕ್ಷಣ ಬೆಳಕನ್ನು ತೋರಿದ ಮಹಾ ಮಾತೆ ಸಾವಿತ್ರಿ ಬಾಯಿ ಪುಲೆ ಅವರ ಹೆಸರಲ್ಲಿ ಶಿಕ್ಷಕರ ದಿನವನ್ನು ಆಚರಿಸಬೇಕು ಎಂದು ದಸಂಸ ಅಂಬೇಡ್ಕರ್ ವಾದ ರಾಜ್ಯ ಸಂಘಟನಾ ಸಂಚಾಲಕ ಸುಂದರ ಮಾಸ್ತರ್ ಹೇಳಿದ್ದಾರೆ.
ಬ್ರಹ್ಮಾವರ ತೆಂಕು ಬಿರ್ತಿ ಅಂಬೇಡ್ಕರ್ ಯುವಕ ಮಂಡಲ, ಆದಿ ದ್ರಾವಿಡ ಸಹಕಾರ ಸಂಘ, ಸಾವಿತ್ರಿ ಬಾಯಿ ಪುಲೆ ಗ್ರಂಥಾಲಯಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಬಿರ್ತಿಯ ಅಂಬೇಡ್ಕರ್ ಭವನದಲ್ಲಿ ನಡೆದ ಅಕ್ಷರದವ್ವನ ಅರಿವು ಕಾರ್ಯಕ್ರಮ ಸಾವಿತ್ರಿ ಬಾಯಿ ಪುಲೆ ಜನ್ಮದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸ್ವಾತಂತ್ರ್ಯ ಪೂರ್ವದಲ್ಲಿ ದಲಿತರಿಗೆ ಮತ್ತು ಮಹಿಳೆಯರಿಗೆ ಶಿಕ್ಷಣ ನಿಷೇಧ ಇತ್ತು. ಅಂತಹ ಕಾಲದಲ್ಲಿ ದಲಿತ ರೊಂದಿಗೆ ಮಹಿಳೆಯರಿಗೂ ಶಾಲೆ ತೆರೆದ ಈ ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿ ಬಾಯಿ ಪುಲೆ ಹೆಸರಲ್ಲಿ ಅತ್ಯಗತ್ಯವಾಗಿ ಶಿಕ್ಷಕರ ದಿನಾಚರಣೆ ಆಚರಿಸಬೇಕಿತ್ತು. ಆದರೆ ರಾಜಕೀಯ ಕಾರಣಗಳಿಂದ ಅದು ಸಾಧ್ಯವಾಗದೇ ಇರುವುದು ದುರಂತ ಎಂದರು.
ಮುಖ್ಯ ಅತಿಥಿಯಾಗಿ ದಸಂಸ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ ಮಾತನಾಡಿ, ಸಾವಿತ್ರಿ ಬಾಯಿ ಪುಲೆ ಶಾಲೆಗೆ ಪಾಠ ಮಾಡಲು ಹೋಗುವಾಗ ಮೇಲ್ವರ್ಗದವರು ಸೆಗಣಿ, ಕಲ್ಲುಗಳನ್ನು ಎಸೆಯುತ್ತಿ ದ್ದರು. ಅದಕ್ಕಾಗಿ ಅವರು ಶಾಲೆಗೆ ಹೋಗುವಾಗ ಎರಡು ಸೀರೆಯನ್ನು ತೆಗೆದುಕೊಂಡು ಹೋಗುತ್ತಿದ್ದರು. ಶಾಲೆಗೆ ಹೋಗುವಾಗ ವಿರೋಧಿಗಳು ಎಸೆದ ಸೆಗಣಿ ಮತ್ತು ಮಣ್ಣಿನಿಂದ ಮಲಿನಗೊಂಡ ಸೀರೆಯನ್ನು ಶಾಲೆಯಲ್ಲಿ ಬದಲಾಯಿಸಿ ಬೇರೆ ಸೀರೆಯನ್ನು ಉಟ್ಟು ಪಾಠ ಮಾಡುತ್ತಿದ್ದರು ಎಂದರು.
ಸಾವಿತ್ರಿ ಅವರಿಗೆ ದಲಿತರಿಗೆ ಶಿಕ್ಷಣ ಕೊಡಬಾರದು ಎಂದು ಬೆದರಿಕೆಯನ್ನೂ ಒಡ್ಡಲಾಗುತ್ತಿತ್ತು. ಆದರೆ ಅವರು ಅದನ್ನೆಲ್ಲ ಅನುಭವಿಸಿ ದರು. ತುಂಬಾ ಕಷ್ಟಪಟ್ಟ ಅಕ್ಷರದವ್ವ ಸಾವಿತ್ರಿ ಬಾಯಿ ಪುಲೆ ದಲಿತರಿಗೆ, ಮಹಿಳೆಯರಿಗೆ ಈ ದೇಶದಲ್ಲಿ ಶಾಲೆಗಳನ್ನು ತೆರೆದರು ಎಂದು ಅವರು ತಿಳಿಸಿದರು.
ನ್ಯಾಷನಲ್ ಇನ್ಶೂರೆನ್ಸ್‌ನ ನಿವೃತ್ತ ಅಧಿಕಾರಿ ಬೋಜರಾಜ್ ಕಾವ್ರಾಡಿ, ಆಧಿಧ್ರಾವಿಡ ಸಹಕಾರ ಸಂಘದ ಅಧ್ಯಕ್ಷ ಸುಧಾಕರ ಮಾಸ್ಟರ್, ಅಂಬೇಡ್ಕರ್ ಯುವಕ ಮಂಡಲದ ಕಾರ್ಯದರ್ಶಿ ಅನಿಲ ಬಿರ್ತಿ ಮುಖ್ಯ ಅತಿಥಿಗಳಾಗಿದ್ದರು.
ಪ್ರಮುಖರಾದ ಮಂಜುನಾಥ ಬಾಳ್ಕದ್ರು, ಶ್ರೀನಿವಾಸ ವಡ್ಡರ್ಸೆ, ಹರೀಶ್ಚಂದ್ರ ಕೆ.ಡಿ., ಬಿರ್ತಿ ಸುರೇಶ, ಪ್ರಶಾಂತ್ ಬಿರ್ತಿ, ಶಿವಾನಂದ ಬಿರ್ತಿ, ಚತನ್ಯ ಬಿರ್ತಿ, ಕಿಶನ ಬಿರ್ತಿ, ಉಮೇಶ ಕಪಿಲೇಶ್ವರ, ಪ್ರಕಾಶ್ ಹೇರೂರು, ನಿಖಿಲ ಹಂದಾಡಿ, ಪ್ರದೀಪ ಕುಕ್ಕುಡೆ, ಸುಮನ ಟೀಚರ್, ಬಬಿತ ಟೀಚರ್, ಮಮತಾ ಉಪಸ್ಥಿತರಿದ್ದರು. ಗಣೇಶ ಬಿರ್ತಿ ಸ್ವಾಗತಿಸಿದರು. ಲಿಂಗಪ್ಪ ಮಾಸ್ಟರ್ ಕಾರ್ಯಕ್ರಮ ನಿರೂಪಿದರು.







