ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಇಎಸ್ಐ ಸೌಲಭ್ಯ ಒದಗಿಸಲು ಸಿಎಂಗೆ ಕೋಟ ಪತ್ರ

ಕೋಟ ಶ್ರೀನಿವಾಸ ಪೂಜಾರಿ
ಉಡುಪಿ, ಜ.7: ಉಡುಪಿ ಜಿಲ್ಲಾ ವ್ಯಾಪ್ತಿಯ ಬಡಕಾರ್ಮಿಕರಿಗೆ ಇಎಸ್ಐ ಚಿಕಿತ್ಸೆ ಸೌಲಭ್ಯಕ್ಕಾಗಿ 10 ಆಸ್ಪತ್ರೆಗಳಿಗೆ ಅವಕಾಶಗಳಿದ್ದು ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಮಣಿಪಾಲದ ಕೆಎಂಸಿ ಆಸ್ಪತೆಯಲ್ಲೂ ಇವರಿಗೆ ಚಿಕಿತ್ಸೆಗೆ ಅವಕಾಶ ಮಾಡಿಕೊಡುವಂತೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯರಿಗೆ ಪತ್ರಬರೆದು ಒತ್ತಾಯಿಸಿದ್ದಾರೆ.
ಇಎಸ್ಐ ಚಿಕಿತ್ಸೆಗೆ ಅವಕಾಶ ಕಲ್ಪಿಸುವ ಜಿಲ್ಲೆಯ ಆಸ್ಪತ್ರೆಗಳಲ್ಲಿ ಮಣಿಪಾಲದ ಕೆಎಂಸಿಯೊಂದಿಗೆ ಕಾರ್ಕಳದ ಡಾ.ಟಿಎಂಎಪೈ ಆಸ್ಪತ್ರೆ ಹಾಗೂ ಕುಂದಾಪುರದ ಆದರ್ಶ ಆಸ್ಪತ್ರೆಗಳನ್ನು ಕೈ ಬಿಡಲಾಗಿದೆ. 10 ಆಸ್ಪತ್ರೆಗಳ ಪೈಕಿ ಉಡುಪಿ ಆದರ್ಶ, ನ್ಯೂ ಸಿಟಿ, ಹೈಟೆಕ್, ಪ್ರಸಾದ್ ನೇತ್ರಾಲಯ, ಮಹೇಶ್ ಆಸ್ಪತ್ರೆ ಬ್ರಹ್ಮಾವರ, ಮಂಜುನಾಥ ಆಸ್ಪತ್ರೆ ಕುಂದಾಪುರ, ಬಾಳಿಗ ಆಸ್ಪತ್ರೆ ಉಡುಪಿ ಮುಂತಾದ ಏಳು ಆಸ್ಪತ್ರೆಗಳಿಗೆ ಇಎಸ್ಐ ಸೌಲಭ್ಯದ ಆದೇಶ ಹೊರಡಿಸಲಾಗಿದೆ ಎಂದು ಕೋಟ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇವುಗಳೊಂದಿಗೆ ಕೆಎಂಸಿ ಮಣಿಪಾಲ, ಟಿಎಂಎ ಪೈ ಕಾರ್ಕಳ, ಆದರ್ಶ ಆಸ್ಪತ್ರೆ ಕುಂದಾಪುರ ಇವುಗಳಿಗೂ ಇಎಸ್ಐ ಸೌಲಭ್ಯದ ಆದೇಶ ಹೊರಡಿಸ ಬೇಕೆಂದು ಸಂಸದ ಕೋಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಪತ್ರದಲ್ಲಿ ಆಗ್ರಹಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 70,000 ಇಎಸ್ಐ ಸೌಲಭ್ಯ ಹೊಂದಿದ ಕಾರ್ಮಿಕರಿದ್ದು, ಅವರ ಕುಟುಂಬಗಳ ಸದಸ್ಯರೂ ಸೇರಿದಂತೆ 2 ಲಕ್ಷಕ್ಕೂ ಮಿಕ್ಕಿ ಇಎಸ್ಐ ಫಲಾನುಭವಿಗಳಿದ್ದಾರೆ.
ಕೆಎಂಸಿಯಂತಹ ಆಸ್ಪತ್ರೆ ಕೈ ಬಿಟ್ಟಿದ್ದರ ಹಿಂದೆ ಅಧಿಕಾರಿಗಳ ನಿರ್ಲಕ್ಷ ಎದ್ದು ತೋರುತ್ತಿದ್ದು, ತಾವು ತಕ್ಷಣ ಆದೇಶ ನೀಡಿ ಪ್ರಮುಖ ಆಸ್ಪತ್ರೆಗಳನ್ನು ಇಎಸ್ಐಗೆ ಸೇರ್ಪಡೆಗೊಳಿಸಬೇಕೆಂದು ಸಂಸದ ಕೋಟ ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.







