ಉಡುಪಿ ಜಿಲ್ಲೆಯಲ್ಲಿ ತಗ್ಗಿದ ಮಳೆ: ಹಲವು ಮನೆಗಳಿಗೆ ಹಾನಿ

ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಗಾಳಿ ಮಳೆಗೆ ಇಂದು ಕೊಂಚ ವಿರಾಮ ಸಿಕ್ಕಿದೆ. ಆದರೆ ಬೆಳಗ್ಗೆ ಬೀಸಿದ ಭಾರೀ ಗಾಳಿಮಳೆಗೆ ಜಿಲ್ಲೆಯ ಹಲವು ಕಡೆಗಳಲ್ಲಿ ಮನೆಗಳ ಮೇಲೆ ಮರ ಬಿದ್ದು ಅಪಾರ ಹಾನಿ ಉಂಟಾಗಿದೆ.
ನಸುಕಿನ ವೇಳೆಯಿಂದ ಬೆಳಗ್ಗೆವರೆಗೆ ಜಿಲ್ಲೆಯ ಹಲವು ಕಡೆ ಭಾರೀ ಗಾಳಿ ಮಳೆಯಾಗಿದ್ದರೆ, ಬಳಿಕ ಮಳೆ ಕೊಂಚ ವಿರಾಮ ಪಡೆದು, ಬಿಸಿಲಿನ ವಾತಾವಾರಣ ಕಂಡುಬಂತು. ಸಂಜೆ ವೇಳೆ ಮೋಡ ಕವಿದ ವಾತಾವರಣದ ಜೊತೆ ಅಲ್ಪಪ್ರಮಾಣದಲ್ಲಿ ಮಳೆಯಾಗಿತ್ತು.
ಕಳೆದ 24 ಗಂಟೆ ಅವಧಿಯಲ್ಲಿ ಕಾರ್ಕಳ -122.0ಮಿ.ಮೀ., ಕುಂದಾಪುರ- 88.7ಮಿ.ಮೀ., ಉಡುಪಿ- 77.7ಮಿ.ಮೀ., ಬೈಂದೂರು- 90.0ಮಿ.ಮೀ., ಬ್ರಹ್ಮಾವರ-98.1ಮಿ.ಮೀ., ಕಾಪು-109.9ಮಿ.ಮೀ., ಹೆಬ್ರಿ-74.6ಮಿ.ಮೀ. ಮಳೆಯಾಗಿದ್ದು, ಜಿಲ್ಲೆಯಲ್ಲಿ ಸರಾಸರಿ 95.3ಮಿ.ಮೀ. ಮಳೆಯಾಗಿರುವ ಬಗ್ಗೆ ವರದಿಯಾಗಿದೆ.
ಕುಂದಾಪುರದಲ್ಲಿ ಅಪಾರ ಹಾನಿ: ಕುಂದಾಪುರ ತಾಲೂಕಿನ ಗುಲ್ವಾಡಿ ಗ್ರಾಮದ ಸೌಕೂರು ಎಂಬಲ್ಲಿ ಮಾಸ್ತಿ ಅಮ್ಮ ದೇವಸ್ಥಾನದ ಮೇಲೆ ಮರ ಬಿದ್ದು 15000ರೂ., ಮಿಣ್ಕ ಮೊಳಹಳ್ಳಿ ಗ್ರಾಮದಲ್ಲಿ ಮಳೆಗೆ ಮನೆಯ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿ 10000ರೂ. ನಷ್ಟ ಉಂಟಾಗಿದೆ.
ಶಂಕರನಾರಾಯಣ ಗ್ರಾಮದ ಹದ್ದೂರು ಎಂಬಲ್ಲಿ ದನದ ಕೊಟ್ಟಿಗೆ ಹಾನಿ, ವಂಡ್ಸೆ ಹೋಬಳಿಯ ತಲ್ಲೂರು ಗ್ರಾಮದ ಪಾರ್ತಿಕಟ್ಟೆ ಎಂಬಲ್ಲಿನ ಲಕ್ಷ್ಮೀ ಅವರ ಮನೆಯ ಬಾತ್‌ರೂಮ್ ಮೇಲೆ ಮರ ಬಿದ್ದು ಹಾನಿಯಾಗಿದೆ. ಅಲ್ಲದೆ ಇವರ ಬ್ರಹ್ಮಶ್ರೀ ಫರ್ನಿಚರ್ ಕಟ್ಟಡದ 20 ಸಿಮೆಂಟ್ ಸೀಟ್‌ಗೆ ಹಾನಿಯಾಗಿದೆ. ಒಟ್ಟು ಅಂದಾಜು 20ಸಾವಿರ ರೂ. ನಷ್ಟವಾಗಿದೆ.
ಗುಲ್ವಾಡಿ ಗ್ರಾಮದ ದಾಸರಬೆಟ್ಟು ಎಂಬಲ್ಲಿ ಶಕುಂತಲಾ ಎಂಬವರ ಮನೆಯ ಸಿಮೆಂಟ್ ಸೀಟ್‌ಗಳು ಗಾಳಿಗೆ ಹಾರಿ ಹೋಗಿ 15000ರೂ., ಬಸ್ರೂರು ಗ್ರಾಮದ ಮಂಡಿಕೇರಿ ಎಂಬಲ್ಲಿ ಗಿರಿಜ ಅವರ ಮನೆ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿ 70000ರೂ., ಶಂಕರನಾರಾಯಣ ಗ್ರಾಮದ ಬೈಲೂರು ಎಂಬಲ್ಲಿ ನರಸಿಂಹ ಮೋಗವೀರ ಅವರ ಮನೆ ಮೇಲೆ ಅಡಿಕೆ ಮರ ಬಿದ್ದು 10000ರೂ. ಹಾಗೂ ಮೂಡುಬೈಲೂರು ಎಂಬಲ್ಲಿ ಮಳೆ ಗಾಳಿಗೆ ದುರ್ಗಿ ಅವರ ಮನೆ ಮೇಲೆ ಮರ ಬಿದ್ದು ಅಪಾರ ಹಾನಿಯಾಗಿ 50000ರೂ. ನಷ್ಟ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ.
15 ಮನೆಗಳಿಗೆ ಹಾನಿ: ಉಡುಪಿ ಜಿಲ್ಲೆಯ ಇತರ ಕಡೆಗಳಲ್ಲಿ ಭಾರೀ ಗಾಳಿಮಳೆಯಿಂದ ಒಟ್ಟು 15 ಮನೆಗಳ ಮೇಲೆ ಮರ ಬಿದ್ದು ಒಟ್ಟು 4,67,500ರೂ. ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ.
ಬೈಂದೂರು ತಾಲೂಕಿನ ಕಾಲ್ತೋಡು ಒಂದು ಮನೆ, ಕಾಪು ತಾಲೂಕಿನ ಹೆಜಮಾಡಿ, ಬೆಳ್ಳೆ, ಕಾಪು ಪಡು ಗ್ರಾಮದ ಮೂರು ಮನೆಗಳು, ಕಾರ್ಕಳ ತಾಲೂಕಿನ ನಿಟ್ಟೆ, ನಿಂಜೂರು, ಕುಕ್ಕುಂದೂರು ಗ್ರಾಮಗಳ ನಾಲ್ಕು ಮನೆಗಳು, ಉಡುಪಿ ತಾಲೂಕಿನ ಕೊಡವೂರು, ಉದ್ಯಾವರ, ಅಂಜಾರು, ಅಲೆವೂರು, 76 ಬಡಗಬೆಟ್ಟು ಗ್ರಾಮಗಳ ಏಳು ಮನೆಗಳ ಮೇಲೆ ಮರ ಬಿದ್ದು ಅಪಾರ ಹಾನಿ ಉಂಟಾಗಿದೆ ಎಂದು ತಾಲೂಕು ಕಚೇರಿ ಮೂಲಗಳು ತಿಳಿಸಿವೆ.







