ಲೋಕ ಅದಾಲತ್: ಒಂದೇ ದಿನದಲ್ಲಿ 73,355 ಪ್ರಕರಣ ಇತ್ಯರ್ಥ

ಉಡುಪಿ, ಜು.11: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಇದರ ನಿರ್ದೇಶನದ ಮೇರೆಗೆ ಜು.11ರ ಶನಿವಾರ ಉಡುಪಿ ಜಿಲ್ಲೆಯ ಉಡುಪಿ, ಕುಂದಾಪುರ, ಕಾರ್ಕಳ ಹಾಗೂ ಬೈಂದೂರಿನ ವಿವಿಧ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ ಅದಾಲತ್‌ನ್ನು ಹಮ್ಮಿಕೊಂಡಿದ್ದು, ಒಂದೇ ದಿನದಲ್ಲಿ ಒಟ್ಟು 73,355 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.
ದಿನದಲ್ಲಿ ಇತ್ಯರ್ಥಗೊಂಡ ಪ್ರಕರಣಗಳಲ್ಲಿ ರಾಜಿಯಾಗಬಲ್ಲ ಚೆಕ್ ಅಮಾನ್ಯ ಪ್ರಕರಣ-243, ಬ್ಯಾಂಕ್/ಹಣ ವಸೂಲಾತಿ ಪ್ರಕರಣ-12, ಎಂವಿಸಿ ಪ್ರಕರಣ-82, ಇತರೇ ಕ್ರಿಮಿನಲ್ ಪ್ರಕರಣ-2940, ಇತರೇ ಸಿವಿಲ್ ಪ್ರಕರಣ-273 ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳು-69,805 ನ್ನು ರಾಜೀ ಮೂಲಕ ಇತ್ಯರ್ಥ ಪಡಿಸಿ ಒಟ್ಟು 21,06,68,649ರೂ. ಪರಿಹಾರ ಮೊತ್ತವನ್ನು ಘೋಷಿಸಲಾಗಿದೆ.
ನ್ಯಾಯಾಂಗ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಉಡುಪಿ, ಕುಂದಾಪುರ, ಕಾರ್ಕಳ, ಬೈಂದೂರು ಮತ್ತು ಬ್ರಹ್ಮಾವರ, ಅಭಿಯೋಜನ ಇಲಾಖೆ, ಸರಕಾರಿ ವ್ಯಾಜ್ಯಗಳ ಇಲಾಖೆ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ವಿಮಾ ಕಂಪೆನಿಗಳು ಹಾಗೂ ಇತರ ಸರಕಾರಿ ಇಲಾಖೆಗಳ ಸಂಪೂರ್ಣ ಸಹಕಾರದೊಂದಿಗೆ ಲೋಕ ಅದಾಲತ್ ಯಶಸ್ವಿ ಯಾಗಿ ನಡೆದಿದೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






