ಸಾಂಕ್ರಾಮಿಕ ರೋಗಗಳ ನಿಯಂತ್ರಣದ ಹೆಸರಿನಲ್ಲಿ ಸ್ವಾತಂತ್ರ್ಯದ ಹರಣ: ಡಾ.ಶ್ರೀನಿವಾಸ ಕಕ್ಕಿಲ್ಲಾಯ
ಭಾರತ ಜ್ಞಾನ ವಿಜ್ಞಾನ ಸಮಿತಿಯ ಸಮಾವೇಶ

ಉಡುಪಿ : ವಿಶ್ವ ಆರೋಗ್ಯ ಸಂಸ್ಥೆಯ ನೇತೃತ್ವದಲ್ಲಿ ಕೊರೋನಾದಂತಹ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸುವ ಒಡಂಬಡಿಕೆ ಕುರಿತು ಜಾಗತಿಕ ಮಟ್ಟದಲ್ಲಿ ಚರ್ಚೆಗಳು ಆರಂಭಗೊಂಡಿವೆ. ಸರಕಾರ ಮಾಡಿದ್ದೆಲ್ಲವೂ ಸರಿ ಎಂದು, ಕಣ್ಣು ಬಾಯಿ, ಕಿವಿ ಮುಚ್ಚಿ ಕುಳಿತರೆ, ಮುಂದೆ ಈ ಒಡಂಬಡಿಕೆ ಕಾನೂನಾಗಿ ಜಾರಿಗೆ ಬರುವ ಅಪಾಯ ಇದೆ. ಇದರಿಂದ ನಮ್ಮ ವೈಯಕ್ತಿಕ, ಗೌಪ್ಯತೆ ಸೇರಿದಂತೆ ಎಲ್ಲ ರೀತಿಯ ಸ್ವಾತಂತ್ರ್ಯಗಳು ಹರಣವಾಗಲಿವೆ ಎಂದು ಮಂಗಳೂರು ಆಂತರಿಕ ಔಷಧಶಾಸ್ತ್ರದ ತಜ್ಞ ವೈದ್ಯ ಡಾ.ಶ್ರೀನಿವಾಸ ಕಕ್ಕಿಲ್ಲಾಯ ಆತಂಕ ವ್ಯಕ್ತಪಡಿಸಿದ್ದಾರೆ.
ಭಾರತ ಜ್ಞಾನ ವಿಜ್ಞಾನ ಸಮಿತಿ ಉಡುಪಿ ಜಿಲ್ಲೆ ಇದರ ವತಿಯಿಂದ ರವಿವಾರ ಉಡುಪಿ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ಆಯೋಜಿಸ ಲಾದ ಸಂವಿಧಾನದ ನೆಲೆಗಟ್ಟಿನಲ್ಲಿ ವೈಜ್ಞಾನಿಕ ಮನೋಭಾವ ಕುರಿತ ಸರ್ವ ಸದಸ್ಯರ ಸಮಾವೇಶದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಸರಕಾರಗಳು ಮತ್ತು ಸ್ಥಳೀಯಾಡಳಿತಗಳು ನಮ್ಮ ವೈಯಕ್ತಿಕ ಹಕ್ಕುಗಳ ಮೇಲೆ ದಾಳಿ ಮಾಡಲು ಮತ್ತು ಕಿತ್ತುಕೊಳ್ಳಲು ಮುಂದಾದರೆ ಅದನ್ನು ಪ್ರಶ್ನಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಕೊರೋನಾದಿಂದ ಆಗಿರುವ ಪರಮಾ ಅನ್ಯಾಯವನ್ನು ಮರೆಯಬಾರದು. ಮರೆತರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊರೋನಾ ಸಮಯದಲ್ಲಿ ಏರಿದ ಕ್ರಮಗಳಿಗಿಂತ ಕೆಟ್ಟ ಮತ್ತು ಕಠಿಣವಾದ ಕಾನೂನು ಮುಂದೆ ಬರಲಿದೆ. ಅದನ್ನು ವಿರೋಧಿಸಲು ನಾವೆಲ್ಲ ಈಗಲೇ ಸನ್ನದ್ಧರಾಗಬೇಕು ಎಂದು ಅವರು ತಿಳಿಸಿದರು.
ಕೊರೋನಾ ಸಂದರ್ಭದಲ್ಲಿ ಸರಕಾರಗಳ ನಡೆಸಿರುವ ಅನ್ಯಾಯಗಳು, ಅಸಂವಿಧಾನಿಕವಾದ ಮತ್ತು ಸಂಪೂರ್ಣ ಕಾನೂನು ವಿರೋಧಿ ಕ್ರಮಗಳನ್ನು ಯಾರು ಕೂಡ ಸರಿಯಾಗಿ ಪ್ರಶ್ನಿಸಲಿಲ್ಲ. ಸಂವಿಧಾನವನ್ನು ನಮ್ಮ ನಿತ್ಯ ಜೀವನದಲ್ಲಿ ಸರಿಯಾದ ಸಮಯಕ್ಕೆ ಬಳಸಿಕೊಳ್ಳದಿದ್ದಲ್ಲಿ ಮತ್ತು ಪ್ರಶ್ನೆ ಕೇಳುವ ಧೈರ್ಯ ತೋರಿಸದಿದ್ದರೆ ಅದರ ಉದ್ದೇಶ ವಿಫಲವಾಗುತ್ತದೆ. ಸಂವಿಧಾನವನ್ನು ಅನುಸರಿಸುವುದು ಹಾಗೂ ಹಕ್ಕು ಮತ್ತು ಕರ್ತವ್ಯವನ್ನು ಪಾಲಿಸುವುದು ಕೂಡ ವೈಜ್ಞಾನಿಕ ಮನೋಭಾವದ ಭಾಗವಾಗಿದೆ ಎಂಬುದನ್ನು ನಾವೆಲ್ಲ ಅರ್ಥ ಮಾಡಿ ಕೊಳ್ಳಬೇಕು ಎಂದರು.
ಸಮಾವೇಶವನ್ನು ಸಂವಿಧಾನದ ಪೀಠಿಕೆಯನ್ನು ಅನಾವರಣಗೊಳಿಸುವ ಮೂಲಕ ಉದ್ಘಾಟಿಸಿದ ಕದಿಕೆ ಟ್ರಸ್ಟ್‌ನ ಮಮತಾ ರೈ ಮಾತನಾಡಿ, ನಾವು ಇಂದು ಸಂವಿಧಾನದಲ್ಲಿ ಪ್ರಸ್ತಾಪಿಸಲಾದ ಮೂಲಭೂತ ಕರ್ತವ್ಯಗಳನ್ನು ಮರೆಯುತ್ತಿದ್ದೇವೆ. ಸಮಾಜದಲ್ಲಿ ಅಂಧಶ್ರದ್ಧೆ ಮೂಢನಂಬಿಕೆ ಬೆಳೆಯುತ್ತಿದೆ. ವಿಜ್ಞಾನಿಗಳು, ವೈದ್ಯರು, ಇಂಜಿನಿಯರ್‌ಗಳುವೈದ್ಯರಕು ಇಂಜಿನಿಯರ್‌ಗಳು ಕೂಡ ಮೌಢ್ಯದ ಪಾಲನೆ, ಅವೈಜ್ಞಾನಿಕ ವರ್ತನೆ ತೋರಿಸುತ್ತಿರುವುದು ದುರಂತ. ಈ ಬಗ್ಗೆ ನಾವೆಲ್ಲ ಚಿಂತನೆ ಮಾಡಬೇಕಾಗಿದೆ ಎಂದು ಹೇಳಿದರು.
ಹವಮಾನ ಬದಲಾವಣೆ ಬಗ್ಗೆ ಅತ್ಯಂತ ತುರ್ತಾಗಿ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕಾಗಿದೆ. ಜಾಗತಿಕ ತಾಪಮಾನದ ಹೆಚ್ಚಳದಿಂದ ಚಳಿಗಾಲ ದಲ್ಲೂ ನಾವು ಬೆವರುವಂತಾಗುತ್ತಿದೆ. ಜನರಲ್ಲಿ ಈ ಸಮಸ್ಯೆಯ ಗಂಭೀರತೆ ಬಗ್ಗೆ ಅರಿವು ಮೂಡಿಸಿ ಪರಿಹಾರ ಮಾರ್ಗವನ್ನು ಅನುಸರಿಸುವಂತೆ ಮಾಡಬೇಕಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ಅಧ್ಯಕ್ಷತೆಯನ್ನು ಸಮಿತಿಯ ಉಡುಪಿ ಜಿಲ್ಲಾಧ್ಯಕ್ಷ ಮನೋ ವೈದ್ಯ ಡಾ.ಪಿ.ವಿ. ಭಂಡಾರಿ ವಹಿಸಿದ್ದರು. ಸಮಿತಿಯ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಶಾಂತ ಬಾಬು ಟಿ.ಎ., ಕಾರ್ಯಕಾರಿ ಸಮಿತಿ ಸದಸ್ಯ ವಜ್ರಮುನಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಕ್ಕಳು ಸಂವಿಧಾನದ ಪೀಠಿಕೆಯನ್ನು ವಾಚಿಸಿದರು.
ಟೀಚರ್ ಪತ್ರಿಕೆಯ ಸಂಪಾದಕ ಉದಯ ಗಾಂವಕಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಿತಿಯ ಉಡುಪಿ ಜಿಲ್ಲಾ ಕಾರ್ಯದರ್ಶಿ ಸಂತೋಷ್ ನಾಯಕ್ ಪಟ್ಲ ಸ್ವಾಗತಿಸಿದರು. ರವೀಂದ್ರ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಕಟಪಾಡಿ ಎಸ್‌ವಿಎಸ್ ಪ್ರೌಢಶಾಲೆಯ ಬಾಲರಂಗ ನಾಟಕ ಶಾಲೆಯ ವಿದ್ಯಾರ್ಥಿಗಳಿಂದ ಜ್ಞಾನ ವಿಜ್ಞಾನ ಜಿಂದಾಬಾದ್ ನಾಟಕ ಪ್ರದರ್ಶನಗೊಂಡಿತು.
‘ಧರ್ಮ ನೋಡಿ ನ್ಯಾಯ ನಿರ್ಧಾರ’
ಸಂವಿಧಾನದಲ್ಲಿನ ಮೂಲಭೂತ ಹಕ್ಕಗಳು ಅನೇಕರ ಪಾಲಿಗೆ ಇಂದಿಗೂ ಗಗನ ಕುಸುಮವಾಗಿದೆ. ಜಾತಿ, ಧರ್ಮ, ಲಿಂಗ, ಅಂತಸ್ತಿನ ತಾರತಮ್ಯ ಬೆಳೆಯುತ್ತಲೇ ಇದೆ. ಅಡುಗೆ ಮಾಡುವವರ ಜಾತಿಯ ಕಾರಣಕ್ಕೆ ಊಟ ಮಾಡದ ಮಕ್ಕಳು, ಧರ್ಮ ನೋಡಿ ನ್ಯಾಯ ನಿರ್ಧರಿಸುವ ಜನರು, ಅಂತಸ್ತಿನ ಕಾರಣಕ್ಕೆ ಜನಸಾಮಾನ್ಯರ ಮೇಲೆ ತೋರಿಸುವ ಅಧಿಕಾರಿಗಳು ಮತ್ತು ರಾಜಕಾರಣಿಗಳು, ಹೆಣ್ಣು ಎಂಬ ಕಾರಣಕ್ಕೆ ತನಗೆ ಇಷ್ಟದ ಕೆಲಸ ಮಾಡಲು ಅವಕಾಶ ನಿರಾಕರಣೆಯಂತಹ ಬೆಳವಣಿಗೆಗಳು ಸಮಾಜದಲ್ಲಿ ಕಾಣುತ್ತಿದ್ದೇವೆ ಎಂದು ಮಮತಾ ರೈ ಆತಂಕ ವ್ಯಕ್ತಪಡಿಸಿದರು.
ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಂಡವರು ಎಂದಿಗೂ ಇನ್ನೊಬ್ಬರ ಧರ್ಮ, ಆಹಾರ ಪದ್ಧತ್ತಿ, ಹೆಣ್ಣು ಗಂಡು ಎಂಬ ಕಾರಣಕ್ಕೆ ಕೀಳಾಗಿ ಕಾಣಲು ಸಾಧ್ಯವೇ ಇಲ್ಲ. ಆದುದರಿಂದ ಜನರಲ್ಲಿ ಸಂನವಿಧಾನದ ಕುರಿತು ಜಾಗೃತಿ ಮತ್ತು ವೈಜ್ಞಾನಿಕ ಬೆಳೆಸುವಂತೆ ಮಾಡಬೇಕಾಗಿದೆ. ಸಂವಿಧಾನ ಅರಿವು ಮತ್ತು ವೈಜ್ಞಾನಿಕ ಮನೋಭಾವದಿಂದ ಉತ್ತಮ ನಾಗರಿಕತ ಸಮಾಜ ನಿರ್ಮಿಸಲು ಸಾಧ್ಯ. ಮಕ್ಕಳಿಗೆ ಬಾಲ್ಯದಲ್ಲೇ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವಂತೆ ಮಾಡಬೇಕು ಎಂದು ಅವರು ಹೇಳಿದರು.
‘ಕೊರೋನಾ ಹೆಸರಿನಲ್ಲಿ ಸರಕಾರಗಳು ವಿಧಿಸಿರುವ ದಿಗ್ಬಂಧನವು ಸಂನಿಧಾನ ನಮಗೆ ನೀಡಿರುವ ಬದುಕುವ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಅನುಭವಿಸುವ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ. ನ್ಯಾಯಾಲಯ ಮತ್ತು ಮಾಧ್ಯಮಗಳು ಕೂಡ ಇದನ್ನು ಪ್ರಶ್ನೆ ಮಾಡಿಲ್ಲ’
-ಡಾ.ಶ್ರೀನಿವಾಸ ಕಕ್ಕಿಲ್ಲಾಯ, ತಜ್ಞ ವೈದ್ಯರು







