ಕಾರ್ಕಳ : ಮಹಾಬಲ ಮರವಂತೆಗೆ ಪ್ರೊ. ಎಂ. ರಾಮಚಂದ್ರ ಸಂಸ್ಮರಣಾ ಪ್ರಶಸ್ತಿ

ಕಾರ್ಕಳ: ಕಾರ್ಕಳ ಸಾಹಿತ್ಯ ಸಂಘದ ವತಿಯಿಂದ ನೀಡಲಾಗುವ 2026ನೇ ಸಾಲಿನ ಪ್ರೊ. ಎಂ. ರಾಮಚಂದ್ರ ಸಂಸ್ಮರಣಾ ಪ್ರಶಸ್ತಿಗೆ ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಕಿರಿಮಂಜೇಶ್ವರದ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಮಹಾಬಲ ಕೆ. ಮರವಂತೆ ಆಯ್ಕೆಯಾಗಿದ್ದಾರೆ.
ಕಾರ್ಕಳ ಸಾಹಿತ್ಯ ಸಂಘದ ಸಂಸ್ಥಾಪಕರಾದ ಪ್ರೊ. ಎಂ. ರಾಮಚಂದ್ರ ಅವರು ಕನ್ನಡ ನಾಡು-ನುಡಿಯ ಸೇವೆಗೆ ತಮ್ಮ ಬದುಕನ್ನು ಸಮರ್ಪಿಸಿಕೊಂಡವರಾಗಿದ್ದು, ಸಾಹಿತ್ಯ ಸಂಘದ ಮೂಲಕ ನಾಡಿನ ಪ್ರಸಿದ್ಧ ಸಾಹಿತಿಗಳನ್ನು ಕಾರ್ಕಳಕ್ಕೆ ಪರಿಚಯಿಸಿದವರು. ಅವರ ನಿಧನದ ಬಳಿಕ ಅವರ ಕುಟುಂಬದವರು, ವಿದ್ಯಾರ್ಥಿಗಳಲ್ಲಿ ಕನ್ನಡದ ಅಭಿರುಚಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೆ ಅವರ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ನೀಡುತ್ತಾ ಬರುತ್ತಿದ್ದಾರೆ.
ಮಹಾಬಲ ಕೆ. ಮರವಂತೆ ಅವರು ಮಕ್ಕಳ ಕಥೆ, ಕವನ, ಶಿಶುಗೀತೆ, ರುಬಾಯಿ ಹಾಗೂ ಚುಟುಕುಗಳ ರಚನೆಯಲ್ಲಿ ತೊಡಗಿಸಿಕೊಂಡಿರುವ ಸಾಹಿತ್ಯಾಸಕ್ತ ಶಿಕ್ಷಕರಾಗಿದ್ದಾರೆ. ಶಾಲಾ ವಾರ್ಷಿಕ ಸಂಚಿಕೆ, ಚಿತ್ರಕಲೆ, ಕ್ರಾಫ್ಟ್, ಶಿಶುಗೀತೆ, ಕಥೆ-ಕವನ ರಚನೆ ಹಾಗೂ ಪರಿಸರ ಸಂರಕ್ಷಣಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ಸಕ್ರಿಯವಾಗಿ ತೊಡಗಿಸುವಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ.
ಅವರ 'ಇಂದೇ ಶಾಲೆಗೆ ಬಾರಮ್ಮ' ಹಾಗೂ 'ಗಾನ ವನಸಿರಿ' ಮಕ್ಕಳ ಕವನ ಸಂಕಲನಗಳು ಪ್ರಕಟಗೊಂಡಿವೆ. 'ನೆನಪಿನೋಲೆ' ಕವನಕ್ಕೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಲಭಿಸಿದ್ದು, 'ಮರೆಯಲಾಗದ ಮಂಜಯ್ಯ ಮಾಸ್ತರ್' ಮಕ್ಕಳ ಕಥೆಯನ್ನು ಶಿಕ್ಷಣ ಇಲಾಖೆಯು ಪಠ್ಯಪೂರಕ ಕಥಾ ಪುಸ್ತಕವಾಗಿ ಆಯ್ಕೆ ಮಾಡಿದೆ.
ತಾವು ಕರ್ತವ್ಯ ನಿರ್ವಹಿಸಿದ ಶಾಲೆಗೆ ಕ್ಲಸ್ಟರ್ ಮಟ್ಟದ ಉತ್ತಮ ಶಾಲೆ ಪ್ರಶಸ್ತಿ, ಪರಿಸರ ಇಲಾಖೆ ಹಾಗೂ ಜಿಲ್ಲಾಡಳಿತದ ಪರಿಸರ ಮಿತ್ರ ಶಾಲಾ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದ ಹಸಿರು ಶಾಲೆ ಪ್ರಶಸ್ತಿ, ಹಳದಿ ಶಾಲೆ ಪ್ರಶಸ್ತಿ ಹಾಗೂ ಶಾಲಾ ವಾರ್ಷಿಕ ಸಂಚಿಕೆ ಪ್ರಶಸ್ತಿಗಳನ್ನು ತಂದುಕೊಟ್ಟಿದ್ದಾರೆ. ಮಕ್ಕಳ ಕವನ ರಚನಾ ಶಿಬಿರ, ಬೇಸಿಗೆ ರಜಾ ಶಿಬಿರ ಸೇರಿದಂತೆ ವಿವಿಧ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭವು ಜುಲೈ 20ರಂದು ಕಾರ್ಕಳದ ಪ್ರಕಾಶ್ ಹೋಟೆಲ್‌ನ ಸಂಭ್ರಮ ಸಭಾಂಗಣದಲ್ಲಿ ಸಾಹಿತ್ಯ ಸಂಘದ ಅಧ್ಯಕ್ಷ ಕೆ.ಪಿ. ಶೆಣೈ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ತುಮಕೂರಿನ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ವಿರೇಶಾನಂದ ಸರಸ್ವತೀ ಹಾಗೂ ಉಡುಪಿ ಡಯಟ್ ಪ್ರಾಚಾರ್ಯ ಅಶೋಕ್ ಕಾಮತ್ ಭಾಗವಹಿಸಲಿದ್ದಾರೆ.






