ಮಹಾಲಕ್ಷ್ಮೀ ಬ್ಯಾಂಕ್ ಸಾಲಕ್ಕಾಗಿ ನಕಲಿ ಸಹಿ ಬಳಕೆ ಪ್ರಕರಣ: ಎಫ್‌ಎಸ್‌ಎಲ್ ವರದಿ ತರಿಸಿ ಸೂಕ್ತ ತನಿಖೆಗೆ ಸಂತ್ರಸ್ತರ ಆಗ್ರಹ

ಉಡುಪಿ: ಶ್ರೀಮಹಾಲಕ್ಷ್ಮೀ ಬ್ಯಾಂಕ್ ಮಲ್ಪೆ ಶಾಖೆಯಲ್ಲಿ ನಕಲಿ ಸಹಿ ಬಳಸಿ ನೀಡಿರುವ ಸಾಲಕ್ಕೆ ಸಂಬಂಧಿಸಿ ವಿಧಿವಿಜ್ಞಾನ ಪ್ರಯೋಗಾಲಯ ದಿಂದ ಪರೀಕ್ಷಿಸಿ ಸೂಕ್ತ ತನಿಖೆ ನಡೆಸಿ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕಿನ ಉಡುಪಿ ತಾಲೂಕು ಸಂತ್ರಸ್ತರ ಸಮಿತಿಯ ನೇತೃತ್ವದಲ್ಲಿ ಸೋಮವಾರ ಉಡುಪಿ ಸಹಕಾರ ಇಲಾಖೆಯ ಉಪನಿಬಂಧಕಿ ಲಾವಣ್ಯ ಅವರಿಗೆ ಮನವಿ ಸಲ್ಲಿಸಲಾಯಿತು.
ಶ್ರೀಮಹಾಲಕ್ಷ್ಮೀ ಬ್ಯಾಂಕ್ ಮಲ್ಪೆ ಶಾಖೆಯಲ್ಲಿ ಕೋವಿಡ್ ಸಂದರ್ಭದಲ್ಲಿ ಕೋವಿಡ್ ಸಾಲಮೇಳ ಎಂಬ ಯೋಜನೆ ಅಡಿಯಲ್ಲಿ ಸಾರ್ವಜನಿಕರಿಗೆ ನಗದು ರೂಪದಲ್ಲಿ ಸಾಲಗಳನ್ನು ನೀಡಲಾಗಿದ್ದು, ಆ ಸಾಲವನ್ನು ಒಂದು ವರ್ಷದ ಬಳಿಕ ಮರು ಪಾವತಿಸಬೇಕಾಗಿತ್ತು. ಆದರೆ ಈ ಯೋಜನೆಯಲ್ಲಿ ಅಲ್ಪ ಪ್ರಮಾಣದ ಸಾಲವನ್ನು ಪಡೆದ ಸಾಲಗಾರರ ಸಾಲವನ್ನು 2ಲಕ್ಷ ರೂ. ಎಂದು ತಪ್ಪಾಗಿ ನಮೂದಿಸಿ ಈಗ ಅಸಲು ಮತ್ತು ಬಡ್ಡಿ ಸೇರಿಸಿ 3 ಲಕ್ಷಕ್ಕಿಂತ ಅಧಿಕ ಪಾವತಿಸುವಂತೆ ನೋಟಿಸು ನೀಡಲಾಗಿತ್ತು.
ಈ ಬಗ್ಗೆ ಬ್ಯಾಂಕಿನಲ್ಲಿ ವಿಚಾರಿಸಿ ಸಾಲ ಪತ್ರಗಳನ್ನು ಪರಿಶೀಲಿಸಿದಾಗ ಅದರಲ್ಲಿ ನಮ್ಮ ನಕಲಿ ಸಹಿ ಬಳಸಿ ಹೆಚ್ಚಿನ ಹಣ ನೀಡಿರುವುದನ್ನು ನಮೂದಿಸಿ ದುರುಪಯೋಗ ಮಾಡಿರುವುದು ಗಮನಕ್ಕೆ ಬಂತು. ಬಳಿಕ ಬ್ಯಾಂಕ್ ಸಾಲ ಪತ್ರದಲ್ಲಿನ ನಕಲಿ ಸಹಿಯಿಂದ ಅನ್ಯಾಯ ಕ್ಕೊಳಗಾದ ಸಂತ್ರಸ್ತರು ಒಟ್ಟಾಗಿ ಹೋರಾಟ ನಡೆಸಿ ನ್ಯಾಯ ಒದಗಿಸುವಂತೆ ಸರಕಾರದ ಗಮನಕ್ಕೆ ತಂದು ಒತ್ತಾಯ ಮಾಡಿದಾಗ ಸರಕಾರ ಈ ವಿಷಯದ ಬಗ್ಗೆ ನಿಯಮ 64ರ ಅಡಿಯಲ್ಲಿ ಸಹಕಾರ ಇಲಾಖೆ ಉಪನಿಬಂಧಕರು ಸೂಕ್ತ ತನಿಖೆಯನ್ನು ನಡೆಸುವಂತೆ ಆದೇಶ ಜಾರಿಗೊಳಿಸಿತು.
ಈ ತನಿಖೆಗೆ ಆದೇಶವಾಗಿ ಒಂದು ವರ್ಷ ಕಳೆದರೂ ಈವರೆಗೆ ನ್ಯಾಯ ಸಿಕ್ಕಿಲ್ಲ. ಹಾಗೆಯೇ ತನಿಖೆಗೆ ಆದೇಶವಾದ ದಿನದಿಂದಲೇ ನಮ್ಮ ಸಹಿಯ ನಕಲಿಯ ಬಗ್ಗೆ ಬ್ಯಾಂಕಿನಿಂದ ಸಾಲ ಪತ್ರವನ್ನು ತರಿಸಿ ನಮ್ಮ ಸಹಿಯ ಸತ್ಯಾಸತ್ಯತೆಯ ಬಗ್ಗೆ ವಿಧಿ ವಿಜ್ಞಾನ ಸಂಸ್ಥೆಯಿಂದ ತನಿಖೆ ನಡೆಸಬೇಕೆಂದು ತನಿಖಾಧಿಕಾರಿಯವರಿಗೆ ಮನವಿ ಸಲ್ಲಿಸಲಾಗಿದೆ.
ಆದರೆ ಇದನ್ನು ವಿಧಿವಿಜ್ಞಾನ ಸಂಸ್ಥೆಗೆ ಕಳುಹಿಸಿದ ಬಗ್ಗೆ ನಮಗೆ ಯಾವುದೇ ಮಾಹಿತಿಯಿಲ್ಲ. ಅನ್ಯಾಯಕ್ಕೊಳಗಾದ ನಮ್ಮ ಅಭಿಪ್ರಾಯವನ್ನು ಕೇಳದೆ ಒಂದೇ ನೋಟಿಸಿನಲ್ಲಿ ಸಾಲ ಮರುಪಾವತಿಸುವ ಬಗ್ಗೆ ಸಹಕಾರಿ ಸಂಘಗಳ ನ್ಯಾಯಾಲಯ ಬೆಂಗಳೂರು ಏಕಪಕ್ಷೀಯ ತೀರ್ಪು ಕೈಗೊಂಡು ಆದೇಶಿಸಿದೆ. ಈ ತನಿಖೆಯ ವರದಿ ಬಾಕಿಯಿದ್ದರೂ ಬ್ಯಾಂಕಿನವರು ವಸೂಲಾತಿಗೆ ಮನೆ ಜಪ್ತಿ, ಆಸ್ತಿ ಜಪ್ತಿ ಹಾಗೂ ಚೆಕ್ ಹಾಕುವುದಾಗಿ ಸಂತ್ರಸ್ತರನ್ನು ಕಾನೂನಿನ ನೆಪದ ಮೂಲಕ ಬೆದರಿಸುತ್ತಿದ್ದಾರೆ.
ಆದ್ದರಿಂದ ಬ್ಯಾಂಕಿನ ಮಲ್ಪೆ ಶಾಖೆಯಲ್ಲಿ ನಮ್ಮ ಸಹಿಯನ್ನು ನಕಲಿ ಮಾಡಿ ಸಾಲ ನೀಡಿರುವ ಆ ಸಹಿಯ ಸತ್ಯಾಸತ್ಯತೆಯನ್ನು ತಿಳಿಯಲು ವಿಧಿವಿಜ್ಞಾನ ಪ್ರಯೋಗಾಲಯದಿಂದ ಪರೀಕ್ಷಿಸಿ ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸಬೇಕು. ಈ ತನಿಖೆ ಪೂರ್ಣಗೊಂಡು ವರದಿ ಬರುವವರೆಗೆ ನಮಗೆ ಸಾಲ ಮರುಪಾವತಿಗೆ ಕಿರುಕುಳ ನೀಡದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.







