3 ತಿಂಗಳಲ್ಲಿ ಉಡುಪಿ ಸಂಚಾರ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ: ಎಸ್ಪಿ ಹರಿರಾಮ್ ಶಂಕರ್

ಉಡುಪಿ: ಜಿಲ್ಲೆಯಾದ್ಯಂತ ಕಾನೂನು ಸುವ್ಯವಸ್ಥೆ ಹಾಗೂ ಸುಗಮ ಸಂಚಾರಕ್ಕೆ ಸಂಬಂಧಿಸಿ ಸಿಸಿ ಕ್ಯಾಮೆರಾ ಅಳವಡಿಸುವ ಕಾರ್ಯ ನಡೆಯುತ್ತಿದ್ದು, ಮೂರು ನಾಲ್ಕು ತಿಂಗಳಲ್ಲಿ ಜಿಲ್ಲೆಯ ಸಂಚಾರ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ ತರಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಹೇಳಿದ್ದಾರೆ.
ಕೆನರಾ ಬ್ಯಾಂಕ್ ವತಿಯಿಂದ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಗೆ ನೀಡಲಾದ ಸುಮಾರು ಎರಡು ಲಕ್ಷ ರೂ. ವೆಚ್ಚದ 25 ಬ್ಯಾರಿಕೇಡ್‌ಗಳನ್ನು ಬುಧವಾರ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಸ್ವೀಕರಿಸಿ ಅವರು ಮಾತನಾಡುತಿದ್ದರು.
ಉದ್ಯಾವರ ಬಲಾಯಿಪಾದೆ ಮತ್ತು ಅಂಬಾಗಿಲಿನಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಸಲು ಉದ್ದೇಶಿಸಲಾಗಿದೆ. ಕೇಂದ್ರ ಸರಕಾರದಿಂದ ಬಿಡುಗಡೆಯಾಗಿ ರುವ ಐದು ಕೋಟಿ ಅನುದಾನದಲ್ಲಿ, ಉಡುಪಿಯ ಚೇಂಬರ್ ಆಫ್ ಕಾಮರ್ಸ್ ವತಿಯಿಂದ ನೀಡಲಾದ ಒಂದು ಕೋಟಿ ರೂ. ಅನುದಾನದಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವ ಕಾರ್ಯ ನಡೆಯುತ್ತಿದೆ. ಅದೇ ರೀತಿ ರಾಜ್ಯ ಸರಕಾರ ಸಂಚಾರ ವ್ಯವಸ್ಥೆ ಸುಧಾರಣೆಗಾಗಿ 2.5ಕೋಟಿ ರೂ. ಅನುದಾನ ಮಂಜೂರು ಮಾಡಿದೆ ಎಂದರು.
ಉಡುಪಿ ಜಿಲ್ಲೆಯ ವಿವಿಧೆಡೆ ಅಳವಡಿಸಲಾದ ಬ್ಯಾರಿಕೇಡ್‌ಗಳ ಪೈಕಿ ಹಲವು ಬ್ಯಾರಿಕೇಡ್‌ಗಳು ಹಾಳಾಗಿವೆ. ದುಸ್ಥಿತಿಯಲ್ಲಿರುವ ಬ್ಯಾರಿಕೇಡ್‌ಗಳೇ ಇಂದು ಅಪಘಾತಕ್ಕೆ ಕಾರಣವಾಗುತ್ತಿವೆ. ಅದನ್ನು ತಡೆಯುವ ನಿಟ್ಟಿನಲ್ಲಿ ರಿಫ್ಲೆಕ್ಟರ್ ಹೊಂದಿರುವ ಗುಣಮಟ್ಟದ ಬ್ಯಾರಿಕೇಡ್‌ಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದರು.
ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಟ್ರಾಫಿಕ್ ಸಮಸ್ಯೆ ಪರಿಹರಿಸಲು ಬ್ಯಾರಿಕೇಡ್‌ಗಳನ್ನು ಬಳಸಲಾಗುತ್ತಿದೆ. ಈ ಬಾರಿಯ ಪರ್ಯಾಯ ಮಹೋತ್ಸವದ ಸಂದರ್ಭದಲ್ಲಿ ಕೆನರಾ ಬ್ಯಾಂಕಿನವರು ನೀಡಿದ ಬ್ಯಾರೀಕೇಡ್ ಸದ್ಬಳಕೆ ಯಾಗಲಿದ್ದು, ಹೆಚ್ಚುವರಿಯಾಗಿ 100 ಬ್ಯಾರಿಕೇಡ್ ಹೊರ ಜಿಲ್ಲೆಯಿಂದ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.
ಕೆನರಾ ಬ್ಯಾಂಕ್‌ನ ಮಣಿಪಾಲ ವೃತ್ತದ ಜನರಲ್ ಮೆನೇಜರ್ ಎಚ್.ಕೆ.ಗಂಗಾಧರ್, ಹಾಗೂ ಉಡುಪಿ ಪ್ರಾದೇಶಿಕ ಕಚೇರಿಯ ಡೆಪ್ಯೂಟಿ ಜನರಲ್ ಮ್ಯಾನೇಜರ್ ಮಹಾಮಾಯ ಪ್ರಸಾದ್ ರಾಯ್, ಮ್ಯಾನೇಜರ್ ನಿರಂಜನ್ ಆಚಾರ್ಯ, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ ಎಸ್.ನಾಯ್ಕ, ಉಡುಪಿ ಡಿವೈಎಸ್ಪಿ ಪ್ರಭು ಡಿ.ಟಿ., ಕುಂದಾಪುರ ಡಿವೈಎಸ್ಪಿ ಎಚ್.ಡಿ.ಕುಲಕರ್ಣಿ, ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.







