ಮಲ್ಪೆ ಬೀಚ್: ಸಮುದ್ರದಲ್ಲಿ ಮುಳುಗಿ ಬಾಲಕಿ ಮೃತ್ಯು: ಇನ್ನೋರ್ವಳ ರಕ್ಷಣೆ

ಸಾಂದರ್ಭಿಕ ಚಿತ್ರ
ಉಡುಪಿ, ಆ.6: ಮಲ್ಪೆ ಬೀಚ್ ನಲ್ಲಿ ಸಮುದ್ರ ತೀರದಲ್ಲಿ ನೀರಿನಲ್ಲಿ ಆಟವಾಡುತ್ತಿದ್ದ ಮಡಿಕೇರಿ ಮೂಲದ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಶನಿವಾರ ರಾತ್ರಿ 8:30ರ ಸುಮಾರಿಗೆ ನಡೆದಿದೆ. ಇದೇವೇಳೆ ಇನ್ನೋರ್ವ ಬಾಲಕಿಯನ್ನು ರಕ್ಷಿಸಲಾಗಿದೆ.
ಮೃತರನ್ನು ಮಡಿಕೇರಿ ನಿವಾಸಿ ಮಾನ್ಯ(16) ಎಂದು ಗುರುತಿಸಲಾಗಿದೆ. ಈಕೆಯೊಂದಿಗೆ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಆಕೆಯ ಗೆಳತಿ ಯಶಸ್ವಿನಿ(16) ಎಂಬವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇವರಿಬ್ಬರೂ ಮೂರು ದಿನಗಳ ಹಿಂದೆ ಮನೆ ಬಿಟ್ಟು ಮಂಗಳೂರು ಕಡೆಗೆ ಹೊರಟಿದ್ದರು ಎನ್ನಲಾಗಿದೆ. ಪಣಂಬೂರು ಬೀಚ್ ನಲ್ಲಿ ಆಟವಾಡಿ ಬಳಿಕ ಬಸ್ ಹತ್ತಿಕೊಂಡು ಮುಸ್ಸಂಜೆ ವೇಳೆ ಮಲ್ಪೆ ಬೀಚಿಗೆ ಬಂದಿದ್ದಾರೆ. ರಾತ್ರಿ ವೇಳೆ ಮಲ್ಪೆ ಬೀಚಿನ ಸಮುದ್ರದಲ್ಲಿ ಆಟ ಆಡುತ್ತಿದ್ದ ವೇಳೆ ಅಬ್ಬರದ ಅಲೆಗಳಿಗೆ ಸಿಲುಕಿ ಇವರಿಬ್ಬರೂ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರೆ ಎನ್ನಲಾಗಿದೆ.
ಇವರನ್ನು ಮುಳುಗುತಜ್ಞ ಈಶ್ವರ ಮಲ್ಪೆ ತಂಡ ರಕ್ಷಿಸಿ ತೀರಕ್ಕೆ ತಂದಿದ್ದಾರೆ. ಈ ಪೈಕಿ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಮಾನ್ಯ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಳು ಎಂದು ತಿಳಿದುಬಂದಿದೆ.
ಯಶಸ್ವಿನಿ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ ಈ ಬಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ





