ಮಲ್ಪೆ: ಬೋಟ್ ಮುಳುಗಡೆ, ಮೀನುಗಾರರ ರಕ್ಷಣೆ: ಅಪಾರ ನಷ್ಟ

ಮಲ್ಪೆ, ಡಿ.20: ಆಳಸಮುದ್ರ ಮೀನುಗಾರಿಕೆ ಮುಗಿಸಿ ವಾಪಾಸು ಬರುತ್ತಿದ್ದ ಬೋಟು, ಫೈಬರ್ ಒಡೆದು ನೀರು ಒಳಹೊಕ್ಕಿ ಮುಳುಗಡೆ ಯಾಗಿರುವ ಘಟನೆ ಡಿ.18ರಂದು ಮಲ್ಪೆ ಬಂದರು ವ್ಯಾಪ್ತಿಯಲ್ಲಿ ನಡೆದಿದೆ.
ಬಡಾನಿಡಿಯೂರಿನ ರಾಜು ಪಿ.ಮೆಂಡನ್ ಅವರ ಮಾಲಕತ್ವದ ಯಶಸ್ವಿ ಹೆಸರಿನ ಬೋಟು ಮುಳುಗಡೆಗೊಂಡಿದ್ದು ಬೋಟಿನಲ್ಲಿದ್ದ ತಾಂಡೇಲ ಸೇರಿದಂತೆ 6 ಮಂದಿ ಕಾರ್ಮಿಕರನ್ನು ರಕ್ಷಿಸಲಾಗಿದೆ.
ಡಿ.18ರಂದು ಬೆಳಗ್ಗೆ 11.30 ರ ಸಮಯದಲ್ಲಿ ಮಲ್ಪೆಯ ನೇರ 17 ಮಾರು ದೂರ ಆಳಸಮುದ್ರದಲ್ಲಿ ಬರುತ್ತಿದ್ದ ಬೋಟಿನ ತಳಭಾಗಕ್ಕೆ ಯಾವುದೋ ವಸ್ತು ಬಡಿಯಿತ್ತೆನ್ನಲಾಗಿದೆ. ಇದರ ಪರಿಣಾಮ ಫೈಬರ್ ಒಡೆದು ನೀರು ಒಳ ಬರಲಾರಂಭಿಸಿತು. ಈ ವೇಳೆ ಬೋಟ್‌ನ ತಾಂಡೇಲ ಸೇರಿದ ಕಾರ್ಮಿಕರು ನೀರು ಬರುವುದನ್ನು ತಡೆಯಲು ಸಾಕಷ್ಟು ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ.
ಸಮೀಪದಲ್ಲಿ ಹಿರಣ್ಮಯಿ ಮತ್ತು ಮಂತ್ರಸ್ಮಿತೆ ಬೋಟ್‌ನವರು ಸಹಾಯಕ್ಕೆ ಬಂದು ಬೋಟನ್ನು ತಮ್ಮ ಬೋಟ್‌ಗೆ ಕಟ್ಟಿ ಬಂದರಿನತ್ತ ಎಳೆದು ತಂದರು. ಸುಮಾರು 8 ಮಾರು ಆಳದೂರದಲ್ಲಿ ಸಂಜೆ 5 ಗಂಟೆಯ ವೇಳೆಗೆ ಬೋಟು ಸಂಪೂರ್ಣ ಮುಳುಗಡೆಗೊಂಡಿದೆ ಎಂದು ತಿಳಿದುಬಂದಿದೆ. ಬೋಟಿನಲ್ಲಿದ್ದ ಮೀನು, ಬೋಟ್‌ನ ಬಲೆ, ಡಿಸೇಲ್ ಹಾಗೂ ಇನ್ನಿತರ ಸಾಮಾಗ್ರಿಗಳು ಸೇರಿದಂತೆ ಒಟ್ಟು 35 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸ ಲಾಗಿದೆ.





