ಮಲ್ಪೆ| ಹೋಂ ಸ್ಟೇಯಲ್ಲಿ ಅಕ್ರಮ ಡ್ರಗ್ಸ್ ದಾಸ್ತಾನು ಪ್ರಕರಣ : 7 ಆರೋಪಿಗಳ ಬಂಧನ

ಮಲ್ಪೆ, ಜೂ.19: ತೆಂಕನಿಡಿಯೂರು ಗ್ರಾಮದ ತೊಟ್ಟಂ ಚರ್ಚ್ ಬಳಿಯ ಹೋಂ ಸ್ಟೇಯಲ್ಲಿ ಅಕ್ರಮವಾಗಿ ಮಾದಕ ವಸ್ತುಗಳನ್ನು ದಾಸ್ತಾನು ಇರಿಸಿದ್ದ ಆರೋಪದಲ್ಲಿ ಏಳು ಮಂದಿಯನ್ನು ಮಲ್ಪೆ ಪೊಲೀಸರು ಜೂ.18ರಂದು ಬಂಧಿಸಿದ್ದಾರೆ.
ಹೂಡೆಯ ನಾಜೀಲ್(31), ಶಿರ್ವ ಮಂಚಕಲ್‌ನ ಅಝರುದ್ದೀನ್(42), ಅಫ್ನಾನ್(19), ತೆಂಕನಿಡಿಯೂರು ಗ್ರಾಮದ ಲಕ್ಷ್ಮಿನಗರ ನಿವಾಸಿ ವಿಘ್ನೇಶ (35), ನೇಪಾಳ ಮೂಲದ ಬಸವರಾಜು (36), ಪೆರಂಪಳ್ಳಿಯ ಧನ್ವತ್ ರಿಕೀತ್ (36), ಒರಿಸ್ಸಾದ ಗೀತಾಜಂಲಿ ಜಿನಾ (44) ಬಂಧಿತ ಆರೋಪಿಗಳು. ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಖಚಿತ ಮಾಹಿತಿಯಂತೆ ಉಡುಪಿ ಡಿವೈಎಸ್ಪಿ ಮತ್ತು ಮಲ್ಪೆ ಪೊಲೀಸ್ ವೃತ್ತ ನಿರೀಕ್ಷಕರ ಮಾರ್ಗದರ್ಶನದಲ್ಲಿ ಮಲ್ಪೆ ಪೊಲೀಸ್ ಠಾಣಾ ಎಸ್ಸೈಗಳಾದ ಅನೀಲ್ ಕುಮಾರ್, ಗಂಗಪ್ಪ ಎಸ್., ಸಿಬ್ಬಂದಿ ಆದರ್ಶ, ನಾಗೇಶ, ಉದಯ, ಆನಂದ ಗಾಣಿಗ, ನಾಗರಾಜ, ಕುಬೇರ, ಅಭಿಷೇಕ್, ಪ್ರವೀಣ ಆರ್. ತಂಡ ವಿಶ್ರಾಮ್ ಹೋಂ ಸ್ಟೇಗೆ ದಾಳಿ ನಡೆಸಿದರು.
ಈ ವೇಳೆ ಒಂದು ಕೋಣೆಯಲ್ಲಿ ನಾಜಿಲ್, ಅಝರುದ್ದೀನ್, ಅಫ್ನಾನ್ ಹಾಗೂ ವಿಘ್ನೇಶ್ ಎಂಬವರು ಮಾದಕ ವಸ್ತು ಸೇವನೆ ಮಾಡಿರುವುದು ಕಂಡುಬಂತು. ಕೋಣೆಯಲ್ಲಿ ಪರಿಶೀಲಿಸಿದ ಪೊಲೀಸರು, 3,000ರೂ. ಮೌಲ್ಯದ 33.81 ಗ್ರಾಂ ಗಾಂಜಾ, 20,000ರೂ. ಮೌಲ್ಯದ 9.73 ಗ್ರಾಂ ಎಂಡಿಎಂಎ, 5 ಮೊಬೈಲ್ ಫೋನ್‌ಗಳು ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಂಡರು.
ಅನಧಿಕೃತವಾಗಿ ಹೋಂ ಸ್ಟೇ ನಡೆಸದಂತೆ ಠಾಣಾಧಿಕಾರಿ ಹಾಗೂ ಪ್ರವಾಸೋದ್ಯಮ ಇಲಾಖೆಯವರು ನೋಟೀಸ್ ನೀಡಿದ್ದರೂ ಅಕ್ರಮವಾಗಿ ಹೋಂ ಸ್ಟೇ ನಡೆಸುತ್ತಿರುವ ಹಾಗೂ ಮಾದಕ ವಸ್ತುಗಳ ಸೇವನೆಗೆ ಸಹಾಯ ಮಾಡಿದ ಆರೋಪದಲ್ಲಿ ವಿಶ್ರಾಮ್ ಹೋಂ ಸ್ಟೇ ಮಾಲಕ ಧನ್ವನ್ ರಿಕಿತ್ ಮತ್ತು ಸಿಬ್ಬಂದಿ ಬಸವರಾಜ್ ಅವರನ್ನು ಬಂಧಿಸಲಾ ಯಿತು. ಈ ಪ್ರಕರಣ ದಲ್ಲಿ ಭಾಗಿಯಾದ ಗೀತಾಂಜಲಿ ಜೇನ ಎಂಬಾಕೆಯನ್ನು ಕೂಡ ಪೊಲೀಸರು ವಶಕ್ಕೆ ಪಡೆದುಕೊಂಡಡರು. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






