ಮಲ್ಪೆ ಮಹಾಲಕ್ಷ್ಮೀ ಬ್ಯಾಂಕ್ ಅವ್ಯವಹಾರ ತನಿಖೆ ವಿಳಂಬ ವಿರೋಧಿಸಿ ಸಂತ್ರಸ್ತರಿಂದ ಧರಣಿ

ಮಲ್ಪೆ, ಜ.5: ಮಲ್ಪೆ ಮಹಾಲಕ್ಷ್ಮಿ ಕೋ-ಅಪರೇಟಿವ್ ಬ್ಯಾಂಕ್‌ನಿಂದ ಕೋವಿಡ್ ಸಮಯದಲ್ಲಿ ಸಾಲದ ಹೆಸರಿನಲ್ಲಿ ಆಗಿರುವ ಅನ್ಯಾಯ ಹಾಗೂ ಬ್ಯಾಂಕ್ ಹಗರಣದ ವಿರುದ್ಧ ಮಹಾಲಕ್ಷ್ಮೀ ಬ್ಯಾಂಕಿನಿಂದ ಅನ್ಯಾಯಕ್ಕೆ ಒಳಗಾದ ಸಂತ್ರಸ್ತರು ಸೋಮವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.
ಮಲ್ಪೆ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್‌ನಿಂದ ಪಡೆಯದೇ ಇದ್ದ ಸಾಲದಿಂದ ಮೋಸ ಮತ್ತು ಅನ್ಯಾಯ ಆಗಿದ್ದು ಈ ಬಗ್ಗೆ ಕಳೆದ ಎರಡು ವರ್ಷಗಳಿಂದ ಹೋರಾಟವನ್ನು ಮಾಡಿಕೊಂಡು ಬಂದರೂ ಇನ್ನೂ ನ್ಯಾಯ ಸಿಕ್ಕಿಲ್ಲ ಎಂದು ಸಂತ್ರಸ್ತರು ಅಳಲು ತೋಡಿಕೊಂಡರು.
ಹೋರಾಟಗಾರ ಕೋಟ ನಾಗೇಂದ್ರ ಪುತ್ರನ್ ಮಾತನಾಡಿ, ಮಲ್ಪೆ ಮಹಾಲಕ್ಷ್ಮಿ ಕೋ ಅಪರೇಟಿವ್ ಬ್ಯಾಂಕ್‌ನಲ್ಲಿ ನಡೆದಿರುವ ಹಗರಣ ಹಾಗೂ ಅನ್ಯಾಯದ ಬಗ್ಗೆ ಸೂಕ್ತವಾದ ತನಿಖೆ ನಡೆಸಲು ಕರ್ನಾಟಕ ಸರಕಾರ 64 ತನಿಖೆಗೆ ಆದೇಶ ನೀಡಿ ಒಂದು ವರ್ಷ ಕಳೆದಿದೆ. ಆದರೆ ಈ ಬಗ್ಗೆ ಸೂಕ್ತ ತನಿಖೆಯನ್ನು ನಡೆಸಿಲ್ಲ. ಅಲ್ಲದೆ ಉಡುಪಿ ಸಹಕಾರಿ ಸಂಘಗಳ ಉಪ ನಿಬಂಧಕಿ ಲಾವಣ್ಯ ತನಿಖೆಯನ್ನು ಕೂಡ ವಿಳಂಬ ಮಾಡಿ ಸಂತ್ರಸ್ತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದರು.
ಇವರು ತನಿಖೆಯ ವಿಚಾರಣೆಯನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ಅಮಾನತು ಆಗಿರುವ ಮಂಜುನಾಥ್ ಸಿಂಗ್ ಜೊತೆ ತನಿಖೆ ಮಾಡಿದ್ದಾರೆ. ಸರಕಾರ 60ದಿನದ ಒಳಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಆದೇಶ ನೀಡಿದ್ದರೂ ಇನ್ನೂ ತನಿಖೆ ಪೂರ್ಣಗೊಳಿಸಿಲ್ಲ. ತನಿಖೆ ವಿಳಂಬ ಮಾಡಿ ಬ್ಯಾಂಕ್‌ನಿಂದ ಪಡೆಯದೇ ಇದ್ದ ಸಾಲಕ್ಕೆ ಕೋರ್ಟ್ ಕಾನೂನಿನ ಕುಣಿಕೆಗೆ ಸಿಲುಕಿಸಿ ಜಾಮೀನು ಪಡೆದು ಕೊಳ್ಳುವ ಸ್ಥಿತಿಗೆ ತಂದು ಮುಟ್ಟಿಸಿ, ಸಂತ್ರಸ್ತರು ಆತಂತ್ರ ಸ್ಥಿತಿಗೆ ತಳ್ಳುವಂತೆ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.
64 ತನಿಖೆಯನ್ನು 60 ದಿನದ ಒಳಗೆ ಮುಗಿಸದೆ 1ವರ್ಷ 1 ತಿಂಗಳ ನಂತರ ಸರಕಾರಕ್ಕೆ ವರದಿ ಕೊಡಲಾಗಿದೆ. ಸಾಲಕ್ಕೆ ಸಹಿಯೇ ಹಾಕದೆ ಇರುವ 30 ಮಂದಿಯ ಸಹಿಯನ್ನು ವಿಧಿ ವಿಜ್ಞಾನ ಪರೀಕ್ಷೆಗೆ ಇನ್ನೂ ಕಳುಹಿಸದೇ ವಿಳಂಬ ಮಾಡಲಾಗುತ್ತಿದೆ ಎಂದು ಅವರು ದೂರಿದರು.
ಸ್ಥಳಕ್ಕೆ ಆಗಮಿಸಿದ ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಅವರಿಗೆ ಸಂತ್ರಸ್ತರು ಮನವಿ ಸಲ್ಲಿಸಿದರು. ಈ ಸಂಬಂಧ ಜ.9ರಂದು ಬೆಂಗಳೂರಿನಲ್ಲಿ ಮುಖ್ಯ ಮಂತ್ರಿಯನ್ನು ಭೇಟಿ ಮಾಡಿ ಈ ವಿಚಾರವನ್ನು ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.
ಉಡುಪಿ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್, ಅಪರ ಜಿಲ್ಲಾಧಿಕಾರಿ ಆಬೀದ್ ಗದ್ಯಾಳ್ ಸ್ಥಳಕ್ಕೆ ಆಗಮಿಸಿ ಸಂತ್ರಸ್ತರಿಂದ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಉಡುಪಿ ಸಹಕಾರಿ ಸಂಘಗಳ ಉಪ ನಿಬಂಧಕಿ ಲಾವಣ್ಯ ಹಾಜರಿದ್ದರು.







