ಉಡುಪಿ | ಪಾಕಿಸ್ತಾನಕ್ಕೆ ನೌಕಾಪಡೆಯ ರಹಸ್ಯ ಮಾಹಿತಿ ರವಾನೆ; ಆರೋಪಿಗಳಾದ ರೋಹಿತ್, ಸಂತ್ರಿ ಬಂಧನ

ರೋಹಿತ್ | ಸಂತ್ರಿ
ಉಡುಪಿ, ನ.21: ಭಾರತದ ನೌಕಾ ಸೇನೆಗೆ ಸಂಬಂಧಪಟ್ಟ ವಿವಿಧ ರಹಸ್ಯ ಮಾಹಿತಿಗಳನ್ನು ವಾಟ್ಸಪ್ ಹಾಗೂ ಫೇಸ್ಬುಕ್ ಮೂಲಕ ಅನಧಿಕೃತವಾಗಿ ಶೇರ್ ಮಾಡಿ, ಅಕ್ರಮ ಲಾಭ ಪಡೆದಿರುವ ಕೊಚ್ಚಿನ್ ಶಿಪ್ ಯಾರ್ಡ್ನ ಇಬ್ಬರು ನೌಕರರನ್ನು ಉಡುಪಿ ಪೊಲೀಸರು ಗುರುವಾರ ಇಲ್ಲಿ ಬಂಧಿಸಿದ್ದಾರೆ.
ಉತ್ತರ ಪ್ರದೇಶ ರಾಜ್ಯದ ಸುಲ್ತಾನಪುರ ಜಿಲ್ಲೆಯ ರೋಹಿತ್ (29) ಮತ್ತು ಸಂತ್ರಿ (37) ಬಂಧಿತರು. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಡಿ.3ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಆರೋಪಿಗಳಿಬ್ಬರನ್ನೂ ನಾಳೆ ಪೊಲೀಸ್ ಕಸ್ಟಡಿಗೆ ಪಡೆಯಲಾಗುವುದು ಎಂದು ನ.21ರಂದು ತಮ್ಮ ಕಚೇರಿಯಲ್ಲಿ ಕರೆದ ತುರ್ತು ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಂತೆ ಈ ಪ್ರಕರಣದಲ್ಲಿ ರೋಹಿತ್ ಪ್ರಧಾನ ಆರೋಪಿಯಾಗಿದ್ದು, ಈತ ಕಳೆದ ಆರು ತಿಂಗಳಿನಿಂದ ಮಲ್ಪೆಯಲ್ಲಿರುವ ಕೊಚ್ಚಿನ್ ಶಿಪ್ ಯಾರ್ಡ್ನಲ್ಲಿ ಇನ್ಸುಲೇಟರ್ ಆಗಿ ಕೆಲಸ ಮಾಡುತ್ತಿದ್ದ. ರೋಹಿತ್, ಈಗಲೂ ಕೊಚ್ಚಿನ್ನಲ್ಲಿರುವ ಕೊಚ್ಚಿನ್ ಶಿಪ್ ಯಾರ್ಡ್ನಲ್ಲಿ ಕೆಲಸ ಮಾಡುತ್ತಿರುವ ಸಂತ್ರಿಯಿಂದ ಭಾರತದ ನೌಕಾ ಸೇನೆಗೆ ಸಂಬಂಧಿಸಿದ ಹಡಗುಗಳ ನಂಬರ್ಗಳ ಗೌಪ್ಯಪಟ್ಟಿ ಹಾಗೂ ಇತರ ಗೌಪ್ಯ ಮಾಹಿತಿಗಳನ್ನು ಸಂಗ್ರಹಿಸಿ ಅದನ್ನು ಗೌಪ್ಯವಾಗಿ ಪಾಕಿಸ್ತಾನ ಸೇರಿದಂತೆ ವಿದೇಶಗಳಿಗೆ ರವಾನಿಸುತ್ತಿರುವುದು ತನಿಖೆಯಿಂದ ಗೊತ್ತಾಗಿದೆ ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದರು.
ಇದಕ್ಕಾಗಿ ರೋಹಿತ್ ಅಪಾರ ಪ್ರಮಾಣದಲ್ಲಿ ಹಣವನ್ನು ಪಡೆಯುತ್ತಿರುವುದು ಗೊತ್ತಾಗಿದೆ ಎಂದು ಅವರು ವಿವರಿಸಿದರು.
ಕೇಂದ್ರ ಸರ್ಕಾರದ ಸ್ವಾಮ್ಯದ ಬಂದರು, ಹಡಗು ಮತ್ತು ಜಲಸಾರಿಗೆ ಇಲಾಖೆಯ ಅಧೀನದಲ್ಲಿರುವ ಕೇರಳದ ಕೊಚ್ಚಿನ್ನಲ್ಲಿರುವ ಕೊಚ್ಚಿನ್ ಶಿಪ್ ಯಾರ್ಡ್ ಹಾಗೂ ಅದರ ಅಂಗಸಂಸ್ಥೆಯಾಗಿರುವ ಮಲ್ಪೆಯ ಕೊಚ್ಚಿನ್ ಶಿಪ್ ಯಾರ್ಡ್ನಲ್ಲಿ ಇಬ್ಬರು ಆರೋಪಿಗಳು ಕೆಲಸ ಮಾಡುತಿದ್ದು, ಕಳೆದ ಒಂದೂವರೆ ವರ್ಷದಿಂದ ಗೌಪ್ಯ ಮಾಹಿತಿಗಳನ್ನು ಸೋರಿಕೆ ಮಾಡುತ್ತಿರುವ ಸಂಶಯವಿದೆ ಎಂದು ಹರಿರಾಂ ಶಂಕರ್ ನುಡಿದರು.
ಕೊಚ್ಚಿನ್ ಶಿಪ್ಯಾರ್ಡ್ನಿಂದ ಸಬ್ ಕಾಂಟ್ರಾಕ್ಟ್ ಹೊಂದಿರುವ ಮೆ.ಸುಷ್ಮಾ ಮೆರೈನ್ ಪ್ರೈವೆಟ್ ಲಿ. ಸಂಸ್ಥೆಯಲ್ಲಿ ರೋಹಿತ್ ಇನ್ಸುಲೇಟರ್ ಆಗಿ ಕೆಲಸ ಮಾಡಿಕೊಂಡಿದ್ದಾನೆ. ಈತ ಈ ಹಿಂದೆ ಕೇರಳದಲ್ಲಿ (ಕೊಚ್ಚಿನ್ ಶಿಪ್ ಯಾರ್ಡ್ನಲ್ಲಿ) ಕೆಲಸ ಮಾಡುವಾಗ ಭಾರತದ ನೌಕಾ ಸೇನೆಗೆ ಸಂಬಂಧಪಟ್ಟ ಹಡಗುಗಳ ನಂಬರ್ಗಳ ಗೌಪ ಪಟ್ಟಿ ಹಾಗೂ ಇತರ ರಹಸ್ಯ ಮಾಹಿತಿಗಳನ್ನು ವಾಟ್ಸಪ್ ಮೂಲಕ ಅನಧಿಕೃತವಾಗಿ ಶೇರ್ ಮಾಡಿ ಅಕ್ರಮ ಲಾಭ ಪಡೆದಿದ್ದ ಎಂಬುದು ತನಿಖೆಯಿಂದ ಗೊತ್ತಾಗಿದೆ ಎಂದು ಎಸ್ಪಿ ತಿಳಿಸಿದರು.
ಕೇರಳದ ಕೊಚ್ಚಿನ್ ಶಿಪ್ ಯಾರ್ಡ್ನಲ್ಲಿ ಭಾರತದ ನೌಕಾ ಸೇನೆಗೆ ಸಂಬಂಧಪಟ್ಟ ಹಡಗುಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಮಲ್ಪೆಯ ಕೊಚ್ಚಿನ್ ಶಿಪ್ ಯಾರ್ಡ್ನಲ್ಲಿ ಹೆಚ್ಚಾಗಿ ಖಾಸಗಿಯವರಿಗೆ ಹಾಗೂ ವಿದೇಶಗಳ ಕಂಪೆನಿಗಳಿಗೆ ಟಗ್ ಹಾಗೂ ಇನ್ನಿತರ ಹಡಗುಗಳನ್ನು ನಿರ್ಮಿಸಿ ಕೊಡಲಾಗುತ್ತದೆ.
ಆರು ತಿಂಗಳ ಹಿಂದೆ ಮಲ್ಪೆಗೆ ವರ್ಗಾವಣೆಗೊಂಡು ಬಂದ ನಂತರವೂ ರೋಹಿತ್ ಕೊಚ್ಚಿಯಲ್ಲಿರುವ ಆತನ ಸ್ನೇಹಿತ ಸಂತ್ರಿಯಿಂದ ಮಾಹಿತಿ ಪಡೆದು ವಾಟ್ಸಪ್ ಹಾಗೂ ಫೇಸ್ಬುಕ್ ಮೂಲಕ ಅನಧಿಕೃತ ವ್ಯಕ್ತಿಗಳಿಗೆ ಈ ಮಾಹಿತಿಗಳನ್ನು ರವಾನಿಸುತಿದ್ದ. ಈ ಮೂಲಕ ಭಾರತದ ಸಾರ್ವಭೌಮತೆ, ಏಕತೆ ಹಾಗೂ ಅಖಂಡತೆಗೆ ಅಪಾಯನ್ನುಂಟು ಮಾಡುವ ಮತ್ತು ಆಂತರಿಕ ಭದ್ರತೆಗೆ ಧಕ್ಕೆ ತರುವ ಕೆಲಸ ಮಾಡಿದ್ದಾನೆ ಎಂದು ಎಸ್ಪಿ ವಿವರಿಸಿದರು.
ಈ ಬಗ್ಗೆ ಮಲ್ಪೆ ಕೊಚ್ಚಿನ್ ಶಿಪ್ ಯಾರ್ಡ್ನ ಸಿಇಒ ನೀಡಿದ ದೂರಿನಂತೆ ಕಳೆದ ಸೋಮವಾರ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ (ಅಪರಾಧ ಕ್ರಮಾಂಕ 128/2025 ಕಲಂ:152 ಬಿಎನ್ಎಸ್, ಕಲಂ:3,5 ಅಧಿಕೃತ ರಹಸ್ಯ ಕಾಯ್ದೆ, 1923ರಂತೆ) ದಾಖಲಿಸಿಕೊಳ್ಳಲಾಗಿದೆ ಎಂದರು.
ಈ ಪ್ರಕರಣದ ತನಿಖೆಯನ್ನು ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕಿ ಹರ್ಷ ಪ್ರಿಯಂವದಾ ಅವರ ನೇತೃತ್ವದಲ್ಲಿ ಕೈಗೊಳ್ಳಲಾಗಿದ್ದು, ಮಲ್ಪೆ ಪೊಲೀಸ್ ಠಾಣೆಯ ಉಪನಿರೀಕ್ಷಕ ಅನಿಲ್ ಕುಮಾರ್ ಡಿ., ಎಎಸ್ಐ ಹರೀಶ್ ಹಾಗೂ ಪೊಲೀಸ್ ಕಾನ್ಸ್ಟೇಬಲ್ ರವಿ ಜಾಧವ್ ಅವನರನ್ನೊಳಗೊಂಡ ವಿಶೇಷ ತಂಡವು ಆರೋಪಿಗಳಾದ ಉತ್ತರಪ್ರದೇಶ ನಿವಾಸಿಗಳಾದ ರೋಹಿತ್ (29) ಮತ್ತು ಸಂತ್ರಿ (37)ಅವರನ್ನು ಗುರುವಾರ ಬಂಧಿಸಿದೆ. ಸಂತ್ರಿ ಮಲ್ಪೆಗೆ ಬಂದು ರೋಹಿತ್ನೊಂದಿಗೆ ಮಲ್ಪೆಯ ರೂಮಿನಲ್ಲಿದ್ದು, ಅಲ್ಲಿಂದ ಇಬ್ಬರನ್ನು ಬಂಧಿಸಲಾಗಿದೆ. ಸಂತ್ರಿ ಕೊಚ್ಚಿನ್ಗೆ ತೆರಳುವ ಮೊದಲೇ ಆತನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಹರಿರಾಂ ಶಂಕರ್ ತಿಳಿಸಿದರು.
ಈ ಪ್ರಕರಣವು ರಾಷ್ಟ್ರ ಭದ್ರತೆ ದೃಷ್ಟಿಯಿಂದ ಅತ್ಯಂತ ಗಂಭೀರವಾಗಿದ್ದು, ಮುಂದಿನ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಲಾಗಿದೆ. ಇವರೊಂದಿಗೆ ಬೇರೆ ಯಾರಾದರೂ ಸೇರಿದ್ದಾರೆಯೇ ಎಂಬ ಕುರಿತೂ ತನಿಖೆ ನಡೆಸಲಾಗುವುದು ಎಂದು ಅವರು ಹೇಳಿದರು.







