ಮಲ್ಪೆ | ಕೋಡಿಬೆಂಗ್ರೆ ಬಳಿ ಪ್ರವಾಸಿ ದೋಣಿ ದುರಂತ: ಇಬ್ಬರು ಮೃತ್ಯು, ಓರ್ವಳ ಸ್ಥಿತಿ ಗಂಭೀರ

ಸಿಂಧು, ಶಂಕರಪ್ಪ
ಮಲ್ಪೆ, ಜ.26: ಕೋಡಿಬೆಂಗ್ರೆ ಬೀಚ್ ಸಮೀಪ ಹಂಗಾರಕಟ್ಟೆ ಶಿಪ್ ಬಿಲ್ಡಿಂಗ್ ಪ್ರದೇಶದ ನದಿ-ಸಮುದ್ರ ಸೇರುವ ಅಳಿವೆಬಾಗಿಲಿನಲ್ಲಿ ಸೋಮವಾರ ಮಧ್ಯಾಹ್ನ 12ಗಂಟೆಗೆ ಸಂಭವಿಸಿದ ಪ್ರವಾಸಿ ದೋಣಿ ದುರಂತದಲ್ಲಿ ಇಬ್ಬರು ಮೃತಪಟ್ಟು, ಇಬ್ಬರು ತೀವ್ರವಾಗಿ ಅಸ್ವಸ್ಥಗೊಂಡ ಬಗ್ಗೆ ವರದಿಯಾಗಿದೆ.
ಮೃತರನ್ನು ಚಾಮರಾಜನಗರದ ಜಿಲ್ಲೆಯ ಹರವೆ ಗ್ರಾಮದ ಶಂಕರಪ್ಪ(27) ಹಾಗೂ ಚಾಮರಾಜನಗರದ ಜಿಲ್ಲೆಯ ನರಸೀಪುರ ತಾಲೂಕಿನ ಮೂಗೂರು ನಿವಾಸಿ ಸಿಂಧು(25) ಎಂದು ಗುರುತಿಸಲಾಗಿದೆ. ದೀಶಾ(26) ಎಂಬವರು ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಧರ್ಮರಾಜ(26) ಎಂಬವರ ಸ್ಥಿತಿ ಸದ್ಯ ಸ್ಥಿರವಾಗಿದೆ. ಇವರೆಲ್ಲ ಮೈಸೂರಿನ ಬಿಪಿಓ ಕಾಲ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದರು.
ರಜೆಯ ಹಿನ್ನೆಲೆಯಲ್ಲಿ ಮೈಸೂರಿನಿಂದ ಬಸ್ಸಿನಲ್ಲಿ ಪ್ರವಾಸ ಹೊರಟ ಕಾಲ್ ಸೆಂಟರಿನ ಒಟ್ಟು 28 ಮಂದಿಯ ತಂಡ ರವಿವಾರ ಉಡುಪಿಗೆ ಆಗಮಿಸಿತ್ತು. ಮಲ್ಪೆ ಸಮೀಪದ ಹೋಮ್ ಸ್ಟೇನಲ್ಲಿ ರಾತ್ರಿ ಉಳಿದ ತಂಡ, ಸೋಮವಾರ ಬೆಳಗ್ಗೆ ಕೋಡಿಬೆಂಗ್ರೆ ಡೆಲ್ಟಾ ಬೀಚ್ ಗೆ ಆಗಮಿಸಿತು. ಅಲ್ಲಿ ಎರಡು ದೋಣಿಗಳಲ್ಲಿ ತಲಾ 14ರಂತೆ ಒಟ್ಟು 28 ಮಂದಿ ಬೆಳಗ್ಗೆ 10ಗಂಟೆಗೆ ಸಮುದ್ರ ವಿಹಾರಕ್ಕೆ ಹೊರಟರೆಂದು ತಿಳಿದು ಬಂದಿದೆ.
ಮಧ್ಯಾಹ್ನ 12 ಗಂಟೆಗೆ ಸುಮಾರಿಗೆ ಕೋಡಿಕನ್ಯಾನ ಸಮೀಪ ನದಿ- ಸಮುದ್ರ ಸೇರುವ ಸ್ಥಳದಲ್ಲಿ ಒಂದು ದೋಣಿ ಅಲೆಗಳಿಗೆ ಸಿಲುಕಿ ಪಲ್ಟಿಯಾಯಿತ್ತೆನ್ನಲಾಗಿದೆ. ಇದರಿಂದ ದೋಣಿಯಲ್ಲಿದ್ದ 14 ಮಂದಿ ಸಮುದ್ರದ ನೀರಿಗೆ ಬಿದ್ದರು. ಇವರಲ್ಲಿ ಕೆಲವರು ಮಾತ್ರ ಲೈಫ್ ಜಾಕೆಟ್ ಧರಿಸಿದ್ದರೆನ್ನಲಾಗಿದೆ.
ಕೂಡಲೇ ಮಾಹಿತಿ ತಿಳಿದ ಸಮೀಪದ ಬೋಟಿನಲ್ಲಿದ್ದ ನಾಗರಾಜ್, ವಿಶ್ವನಾಥ್ ಶ್ರೀಯಾನ್, ದಿನೇಶ್ ಕರ್ಕೇರ ಸ್ಥಳಕ್ಕೆ ಆಗಮಿಸಿ ನೀರಿಗೆ ಬಿದ್ದ ಪ್ರವಾಸಿಗರನ್ನು ಕೂಡಲೇ ರಕ್ಷಿಸಿ, ದಡಕ್ಕೆ ಮುಟ್ಟಿಸಿದರು. ಇದರಲ್ಲಿ ತೀವ್ರವಾಗಿ ಅಸ್ವಸ್ಥಗೊಂಡ ನಾಲ್ವರನ್ನು ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಯಿತು. ಅವರಲ್ಲಿ ಇಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ತನಿಖೆಗೆ ಉಸ್ತುವಾರಿ ಸಚಿವರ ಸೂಚನೆ
ಮಲ್ಪೆ ಕೋಡಿಬೆಂಗ್ರೆಯಲ್ಲಿ ದೋಣಿ ಮುಳುಗಿ ಸಂಭವಿಸಿದ ದುರಂತದಲ್ಲಿ ಇಬ್ಬರು ಪ್ರವಾಸಿಗರು ಮೃತಪಟ್ಟಿರುವ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತೀವ್ರ ಸಂತಾಪ ಸೂಚಿಸಿದ್ದಾರೆ.
ಘಟನೆಯಲ್ಲಿ ಗಾಯೊಂಡಿರುವವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿರುವ ಸಚಿವರು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಒದಗಿಸುವಂತೆ ಮತ್ತು ಘಟನೆಯ ಕುರಿತು ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
‘ಕೋಡಿಬೆಂಗ್ರೆ ಪ್ರವಾಸಿ ದೋಣಿ ದುರಂತದಿಂದ ಪ್ರವಾಸಿಗರ ಸಾವಿಗೆ ಪ್ರವಾಸೋದ್ಯಮ ಇಲಾಖೆಯ ನಿರ್ಲಕ್ಷ್ಯವೇ ಕಾರಣ. ಪ್ರವಾಸಿ ಬೋಟ್ ಗಳು ನಿಯಮಾವಳಿಗಳನ್ನು ಮೀರಿ, ಸೂಕ್ತ ಪರವಾನಿಗೆ ಇಲ್ಲದೆ ಕಾರ್ಯಾ ಚರಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬಂದಿದ್ದರೂ ಪ್ರವಾಸೋದ್ಯಮ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸುರಕ್ಷತಾ ಕ್ರಮ ಕೈಗೊಳ್ಳಬೇಕು’
-ಯಶ್ಪಾಲ್ ಸುವರ್ಣ, ಶಾಸಕರು ಉಡುಪಿ
‘ಪ್ರವಾಸಿಗರು ಲೈಫ್ಜಾಕೆಟ್ ಧರಿಸಿರುವುದರಿಂದ ಅವರನ್ನು ರಕ್ಷಿಸಲು ಸುಲಭ ಸಾಧ್ಯವಾಯಿತು. ಇಲ್ಲದಿದ್ದರೆ ಇವರೆಲ್ಲ ಆ ಆಳ ಪ್ರದೇಶದಲ್ಲಿ ಮುಳುಗಿ ಹೋಗುತ್ತಿದ್ದರು. ಇದರಿಂದ ಬಹಳ ದೊಡ್ಡ ದುರಂತ ಸಂಭವಿಸುತ್ತಿತ್ತು’
-ನಾಗರಾಜ್, ರಕ್ಷಣೆ ಮಾಡಿದ ಮೀನುಗಾರ
‘ಪ್ರವಾಸಿ ದೋಣಿ ದುರಂತಕ್ಕೆ ಯಾವುದೇ ರೀತಿಯಲ್ಲೂ ಸುರಕ್ಷತೆ ಕ್ರಮ ವಹಿಸದೆ ನಿರ್ಲಕ್ಷ್ಯ ಮಾಡಿರುವ ಸಂಬಂಧ ಮಾಲಕ ಮತ್ತು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗುವುದು. ಈ ದೋಣಿಗಳಿಗೆ ಅನುಮತಿ ಇದೆಯೇ ಇಲ್ಲವೇ ಎಂಬುದರ ಬಗ್ಗೆ ತನಿಖೆ ನಡೆಸಲಾಗುವುದು. ಪ್ರವಾಸಿ ಬೋಟುಗಳು ಮೀನುಗಾರಿಕೆ, ಪ್ರವಾಸೋದ್ಯಮ ಇಲಾಖೆಯಿಂದ ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಬೇಕು’
-ಹರಿರಾಂ ಶಂಕರ್, ಎಸ್ಪಿ ಉಡುಪಿ






