ಖಾಸಗಿ ಬಸ್‌ಗಳಿಗೆ ಬಾಗಿಲು ಅಳವಡಿಕೆ ಕಡ್ಡಾಯ ಆದೇಶ: ನಿಯಮ ಮೀರಿದ ಬಸ್ಸುಗಳಿಗೆ ಕುಂದಾಪುರದಲ್ಲಿ ದಂಡ ಪ್ರಯೋಗ

ಕುಂದಾಪುರ, ಜು.25: ಪ್ರಯಾಣಿಕರ ಜೀವಭದ್ರತೆಯ ಹಿತದೃಷ್ಟಿಯಿಂದ ಖಾಸಗಿ ಬಸ್ಸುಗಳಲ್ಲಿ ಬಾಗಿಲುಗಳ ಸರಿಪಡಿ ಸುವಿಕೆ, ಇಲ್ಲವಾದಲ್ಲಿ ಬಾಗಿಲು ಅಳವಡಿಸುವ ಬಗ್ಗೆ ಜೂ.1ಕ್ಕೆ ಅಂತಿಮ ಗಡುವು ನೀಡಿದ್ದರೂ ಕೂಡ ಬಹಳಷ್ಟು ಬಸ್ಸು ಗಳಲ್ಲಿ ಇದನ್ನು ಪಾಲಿಸದಿರುವುದು ವರದಿಯಾಗಿದೆ. ಈಗಲೂ ಕೂಡ ಬಹಳಷ್ಟು ಬಸ್ಸುಗಳಲ್ಲಿ ಪ್ರಯಾಣಿಕರು ಫೂಟ್ ಬೋರ್ಡ್‌ನಲ್ಲಿ ನೇತಾಡಿ ಕೊಂಡು ಹೋಗುವ ಬಗ್ಗೆ ದೂರುಗಳು ದಾಖಲಾಗುತ್ತಿವೆ.
ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಸಹಿತ ಪ್ರಮುಖ ರಸ್ತೆಗಳಲ್ಲಿ ನಿರ್ದಿಷ್ಟ ಸಮಯಗಳಲ್ಲಿ (ಶಾಲಾ-ಕಾಲೇಜು ಹಾಗೂ ಕಚೇರಿ ವೇಳೆ) ಕೆಲವು ಬಸ್ಸು ಗಳಲ್ಲಿ ವಿದ್ಯಾರ್ಥಿಗಳು, ಪ್ರಯಾಣಿಕರು ಬಸ್ಸು ಹತ್ತುವ (ಪೂಟ್ ಬೋರ್ಡ್) ಸ್ಥಳದಲ್ಲಿ ನಿಲ್ಲುವ ಬಗ್ಗೆ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ತಕ್ಷಣ ಕ್ರಮಕೈಗೊಂಡಿರುವ ಕುಂದಾಪುರ ಟ್ರಾಫಿಕ್ ಪೊಲೀಸರು ಕ್ಷಿಪ್ರವಾಗಿ ಬಸ್ಸುಗಳನ್ನು ಪತ್ತೆ ಮಾಡಿ ದಂಡ ವಿಧಿಸಿದ್ದಾರೆ.
ಶಾಲಾ ಮಕ್ಕಳು, ಪ್ರಯಾಣಿಕರ ಸುರಕ್ಷೆತೆಗಾಗಿ ನಿಯಮವಿದೆ. ನಿಯಮಾನಸಾರ ನಿಗದಿತ ವಾಹನಗಳಲ್ಲಿರುವ ಆಸನ (ಸೀಟು) ಗಳಲ್ಲಿಯೇ ಪ್ರಯಾಣಿಕರನ್ನು ಕೂರಿಸಬೇಕು. ಆರ್‌ಟಿಒ ನಿಯಮದಂತೆ ಹೆಚ್ಚುವರಿ ಪ್ರಯಾಣಿಕರನ್ನು ಹತ್ತಿಸಬಾರದು. ಬಸ್ಸುಗಳಲ್ಲಿ ಮಡಿಸುವ ಮಾದರಿಯ ಬಾಗಿಲುಗಳನ್ನು ನವೀಕರಿಸಲು ಸೂಚಿಸಲಾಗಿತ್ತು.
ಆದೇಶಕ್ಕಿಲ್ಲ ಕಿಮ್ಮತ್ತು..!: ಬಸ್ಸಿನಲ್ಲಿ ಪ್ರಯಾಣಿಸುವರ ಸುರಕ್ಷತೆಯ ನಿಟ್ಟಿನಲ್ಲಿ ಫುಟ್‌ಬೋರ್ಡ್‌ನಲ್ಲಿ (ಬಸ್ ಹತ್ತುವ ಜಾಗ) ನೇತಾಡುವುದು, ಅಲ್ಲಿಯೇ ನಿಲ್ಲುವ ಮೂಲಕ ತಮ್ಮ ಜೀವ, ಇತರರ ಜೀವಕ್ಕೆ ಹಾನಿಯಾಗುವ ಬಗ್ಗೆ ವರದಿ ಯಾದಂತೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಜಂಟಿಯಾಗಿ ಸಭೆ ಕರೆದು ಬಸ್ಸುಗಳಿಗೆ ಬಾಗಿಲು ಅಳವಡಿಸಲು ಮತ್ತು ದುಸ್ಥಿತಿಯಲ್ಲಿರುವ ಬಾಗಿಲು ಸುವ್ಯವಸ್ಥೆಗೊಳಿಸಲು ಆದೇಶ ಮಾಡಿತ್ತು.
ಜೂ.1 ಕಳೆದು ಜುಲೈ ಮಾಸಾಂತ್ಯವಾದರೂ ಒಂದಷ್ಟು ಬಸ್ಸುಗಳು ಬಾಗಿಲು ಅಳವಡಿಸದೆ ನಿಯಮಗಳನ್ನು ಗಾಳಿಗೆ ತೂರಿವೆ. ಆದರೆ ಕೆಲವೇ ಗ್ಯಾರೇಜ್‌ಗಳಲ್ಲಿ ಈ ಸುಧಾರಿತ ಬಾಗಿಲು ಅಳವಡಿಕೆ ವ್ಯವಸ್ಥೆಯಿದ್ದು ಜಿಲ್ಲಾಡಳಿತವು ಖಾಸಗಿ ಬಸ್ ಸಂಬಂದಪಟ್ಟವರಿಗೆ ಈ ನಿರ್ದೇಶನವನ್ನು ಪಾಲಿಸಲು ಹೆಚ್ಚುವರಿ ಸಮಯವನ್ನು ನೀಡಿ ಜೂನ್ 1ರ ಗಡುವಿನೊಳಗೆ ಮಡಿಸುವ ಮಾದರಿಯ ಬಾಗಿಲನ್ನು ಅಳವಡಿಸಲು ಕಡ್ಡಾಯ ಆದೇಶ ಮಾಡಿತ್ತು. ನಿಯಮ ಮೀರಿದ ಯಾವುದೇ ಬಸ್ ಎಫ್ಸಿಯನ್ನು ರದ್ದುಗೊಳಿ ಸಲಾಗುವುದು ಎಂಬ ಎಚ್ಚರಿಕೆಯನ್ನು ನೀಡಲಾಗಿತ್ತು.
ಆದರೆ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಸಂಚರಿಸುವ ಎಲ್ಲಾ ಬಸ್‌ಗಳಿಗೆ ಬಾಗಿಲು ಅಳವಡಿಕೆಗೆ ಕಡ್ಡಾಯಗೊಳಿಸಿದ್ದ ನಿಗದಿತ ಗಡುವು ಮುಗಿದರೂ ಕೆಲವು ವಾಹನಗಳಲ್ಲಿ ನಿಯಮ ಪಾಲನೆ ಸರಿಯಾಗಿ ಆಗುತ್ತಿಲ್ಲ ಎಂಬುದು ಕಂಡು ಬರುತ್ತಿದೆ. ಕುಂದಾಪುರದಲ್ಲಿ ಸಂಚಾರ ಪೊಲೀಸರು ಇಂಥ ಬಸ್‌ಗಳನ್ನು ಗುರುತಿಸಿ ದಂಡ ವಿಧಿಸುತಿದ್ದಾರೆ.
‘ಜಿಲ್ಲಾಡಳಿತ, ಇಲಾಖೆಗಳ ಆದೇಶ ಪಾಲಿಸದೆ ಸಂಚಾರ ನಿಯಮ ಉಲ್ಲಂಘನೆ ಮಾಡುವ ವಾಹನಗಳ ಪತ್ತೆಗೆ ಮುಂದಿನ ದಿನಗಳಲ್ಲಿಯೂ ವಿಶೇಷ ಕಾರ್ಯಾಚರಣೆ ನಡೆಸಿ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದುʼ.
-ಅನೂಪ್ ನಾಯಕ್, ಕುಂದಾಪುರ ಸಂಚಾರ ಠಾಣೆ ಪಿಎಸ್‌ಐ






