ಮಂಗಳೂರು ಅಂ.ರಾ.ವಿಮಾನ ನಿಲ್ದಾಣದ ಟ್ಯಾಕ್ಸಿ ಪಾರ್ಕಿಂಗ್; ನೀತಿ ಮರು ಪರಿಶೀಲನೆಗೆ ಸಂಸದ ಕೋಟ ಪ್ರಾಧಿಕಾರಕ್ಕೆ ಪತ್ರ

ಉಡುಪಿ, ಅ.3: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿ ವಾಹನಗಳಿಗೆ ಸಂಬಂಧಿಸಿದ ಪಾಕಿರ್ಂಗ್ ನೀತಿಯ ಮರುಪರಿಶೀಲನೆ ಹಾಗೂ ಟ್ಯಾಕ್ಸಿ ಚಾಲಕರ ನ್ಯಾಯಸಮ್ಮತ ಬೇಡಿಕೆಗಳ ಕುರಿತು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ವಿಮಾನ ನಿಲ್ದಾಣದ ನಿರ್ವಹಣೆಯನ್ನು ನೋಡಿಕೊಳ್ಳುವ ಅದಾನಿ ಪವರ್ ಲಿುಟೆಡ್‌ನ ಕಾರ್ಯ ನಿರ್ವಾಹಕ ನಿರ್ದೇಶಕರಾದ ಕಿಶೋರ್ ಆಳ್ವ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಟ್ಯಾಕ್ಸಿ ಸಂಘಟನೆಗಳು ಖಾಸಗಿ ವಾಹನಗಳಿಗೆ ನೀಡಿರುವಂತೆ ಟ್ಯಾಕ್ಸಿ ಗಳಿಗೂ ಕನಿಷ್ಠ 10 ನಿಮಿಷಗಳ ಉಚಿತ ಪ್ರವೇಶ ಸೌಲಭ್ಯ ಕಲ್ಪಿಸುವುದು, ಟ್ಯಾಕ್ಸಿ ವಾಹನಗಳ ವಿರುದ್ಧ ಜಾರಿಯಲ್ಲಿರುವ ತಾರತಮ್ಯದ ನಿಯಮಗಳನ್ನು ರದ್ದುಪಡಿಸಿ ನ್ಯಾಯಯುತ ಹಾಗೂ ಸಮಾನ ಪಾರ್ಕಿಂಗ್ ನೀತಿಯನ್ನು ಜಾರಿಗೊಳಿಸುವುದು ಹಾಗೂ ಟ್ಯಾಕ್ಸಿ ಸಂಘಟನೆಗಳೊಂದಿಗೆ ಸಮಾಲೋಚನೆ ನಡೆಸಿ ಶಾಶ್ವತ ಮತ್ತು ಪರಸ್ಪರ ಒಪ್ಪಿಗೆಯ ಪರಿಹಾರ ರೂಪಿಸುವಂತೆ ಬೇಡಿಕೆ ಸಲ್ಲಿಸಿವೆ ಎಂದು ಸಂಸದ ಕೋಟದಲ್ಲಿ ಉಲ್ಲೇಖಿಸಿದ್ದಾರೆ.
ಸಾವಿರಾರು ಟ್ಯಾಕ್ಸಿ ಚಾಲಕರ ಜೀವನೋಪಾಯ ಮತ್ತು ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸಂಬಂಧಪಟ್ಟ ಅಧಿಕಾರಿಗಳು ಮಾನವೀಯ ಹಾಗೂ ಸಕಾರಾತ್ಮಕ ದ್ಟೃಷ್ಟಿಕೋನದಿಂದ ವಿಷಯವನ್ನು ಪರಿಗಣಿಸಿ, ಕ್ರಮ ಕೈಗೊಂಡು ಸಮಸ್ಯೆಯನ್ನು ಬಗೆಹರಿಸುವಂತೆ ಸಂಸದರು ಅದಾನಿ ಗ್ರೂಪ್‌ನ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಪತ್ರ ಬರೆದು ಕೋರಿದ್ದಾರೆ.
ಈ ಹಿಂದೆ ಕಳೆದ ಜುಲೈ 14ರಂದುಉಡುಪಿ ಜಿಲ್ಲಾ ಟ್ಯಾಕ್ಸಿಮೆನ್ಸ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಷನ್ ಸಲ್ಲಿಸಿದ್ದ ಮನವಿಯ ಆಧಾರದ ಮೇಲೆ ಈ ವಿಷಯವನ್ನು ವಿಮಾನ ನಿಲ್ದಾಣದ ಆಡಳಿತ ಮಂಡಳಿಯೊಂದಿಗೆ ಸಮಾಲೋಚಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಸದರು ಪತ್ರ ಬರೆದಿದ್ದರು.
ಈ ನಡುವೆ ಉಡುಪಿ ಮತ್ತು ದಕ್ಷಿಣ ಕನ್ನಜ ಜಿಲ್ಲಾ ಟ್ಯಾಕ್ಸಿಮೆನ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಷನ್‌ಗಳು, ಮಂಗಳೂರು ವಿಮಾನ ನಿಲ್ದಾಣದ ಪಾರ್ಕಿಂಗ್ ನೀತಿಯನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿ ನಾಳೆ ಆ.4ರಂದು ಸಾಮೂಹಿಕ ಮುಷ್ಕರ ನಡೆಸಲು ನಿರ್ಧರಿಸಿವೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.






