ಮಂಗಳೂರು ವಿವಿ ಅಂತರ ಕಾಲೇಜು ಮಹಿಳಾ ಕಬಡ್ಡಿ ಟೂರ್ನಿ: ಆಳ್ವಾಸ್ ಕಾಲೇಜಿಗೆ ಚಾಂಪಿಯನ್ಸ್ ಟ್ರೋಫಿ

ಉಡುಪಿ, ಎ.10: ಏಕಪಕ್ಷೀಯ ಫೈನಲ್ ಪಂದ್ಯದಲ್ಲಿ ಉಜಿರೆಯ ಎಸ್‌ಡಿಎಂ ಕಾಲೇಜು ತಂಡವನ್ನು 41-15 ಅಂಕಗಳ ಅಂತರದಿಂದ ಸೋಲಿಸಿದ ಬಲಿಷ್ಠ ಆಳ್ವಾಸ್ ಕಾಲೇಜು ಮೂಡುಬಿದಿರೆ ತಂಡ, ನಗರದ ಪೂರ್ಣಪ್ರಜ್ಞ ಕಾಲೇಜು (ಸ್ವಾಯತ್ತ) ಹಾಗೂ ಮಂಗಳೂರು ವಿವಿಗಳ ಜಂಟಿ ಆಶ್ರಯದಲ್ಲಿ ಎರಡು ದಿನಗಳ ಕಾಲ ನಡೆದ ಮಂಗಳೂರು ವಿವಿ ಅಂತರ ಕಾಲೇಜು ಮಹಿಳಾ ಕಬಡ್ಡಿ ಚಾಂಪಿಯನ್‌ಷಿಪ್‌ನ್ನು ಗೆಲ್ಲುವ ಮೂಲಕ ಅ.ವಂ.ಎ.ಪತ್ರೋ ಸ್ಮಾರಕ ಟ್ರೋಫಿಯನ್ನು ಮತ್ತೊಮ್ಮೆ ಕೈಗೆತ್ತಿಕೊಂಡಿತು.
ಪೂರ್ಣಪ್ರಜ್ಞ ಕಾಲೇಜು ಮೈದಾನದಲ್ಲಿ ಅಪರಾಹ್ನ ನಡೆದ ಸಮಾರೋಪ ಸಮಾರಂಭದಲ್ಲಿ ಅದಮಾರು ಮಠಾಧೀಶ ಹಾಗೂ ಯುಎಸ್‌ಎಎಂಇಸಿ ಬೆಂಗಳೂರು ಇದರ ಅಧ್ಯಕ್ಷರಾಗಿರುವ ಶ್ರೀಈಶಪ್ರಿಯ ತೀರ್ಥರು ವಿಜೇತ ತಂಡಗಳಿಗೆ ಟ್ರೋಫಿ ಹಾಗೂ ಬಹುಮಾನಗಳನ್ನು ವಿತರಿಸಿದರು.
ವಿಜಯಿ ಆಳ್ವಾಸ್ ಚಾಂಪಿಯನ್ ಟ್ರೋಫಿ ಪಡೆದರೆ, ಎಸ್‌ಡಿಎಂ ಉಜಿರೆ ರನ್ನರ್‌ಅಪ್ ಟ್ರೋಫಿ ಪಡೆಯಿತು. ಪುತ್ತೂರಿನ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮೂರನೇ ಹಾಗೂ ಮಂಗಳೂರು ವಿವಿ ಕ್ಯಾಂಪಸ್ ಕಾಲೇಜು ಕೊಣಾಜೆ ನಾಲ್ಕನೇ ಸ್ಥಾನಗಳನ್ನು ಪಡೆದವು.
ವೈಯಕಿಕ್ತ ಪ್ರಶಸ್ತಿಗಳು: ಟೂರ್ನಿಯ ಬೆಸ್ಟ್ ರೈಡರ್ ಆಗಿ ಆಳ್ವಾಸ್ ಕಾಲೇಜಿನ ಸುಶ್ಮಿತಾ ಅವರು ಪ್ರಶಸ್ತಿ ಪಡೆದರೆ, ಬೆಸ್ಟ್ ಆಲ್‌ರೌಂಡರ್ ಆಗಿ ಎಸ್‌ಡಿಎಂ ಕಾಲೇಜು ಉಜಿರೆ ತಂಡದ ಅನನ್ಯ ಆಚಾರ್ಯ ಆಯ್ಕೆಯಾದರು. ಟೂರ್ನಿಯ ಬೆಸ್ಟ್ ಢಿಪೆಂಡರ್ ಆಗಿ ಆಳ್ವಾಸ್ ಕಾಲೇಜಿನ ವೀಣಾಶ್ರೀ ಮೂಡಿಬಂದರು.
ಪ್ರಾಥಮಿಕ ಸುತ್ತಿನ ಪಂದ್ಯದಲ್ಲಿ ಬೆಸ್ಟ್ ರೈಡರ್ ಆಗಿ ಆತಿಥೇಯ ಪೂರ್ಣಪ್ರಜ್ಞ ಕಾಲೇಜಿನ ಸನ್ನಿಧಿ, ಬೆಸ್ಟ್ ಆಲ್ ರೌಂಡರ್ ಆಗಿ ಮಂಗಳೂರು ವಿವಿ ತಂಡದ ದಿವ್ಯಾ ಪೂಜಾರಿ ಹಾಗೂ ಬೆಸ್ಟ್ ಢಿಪೆಂಡರ್ ಆಗಿ ಪುತ್ತೂರು ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಖುಷಿ ರೈ ಆಯ್ಕೆಯಾದರು. ಮಂಗಳೂರು ವಿವಿಗೆ ಸೇರಿದ 29 ಕಾಲೇಜುಗಳ ಮಹಿಳಾ ಕಬಡ್ಡಿ ತಂಡಗಳು ಟೂರ್ನಿಯಲ್ಲಿ ಸ್ಪರ್ಧಿಸಿದ್ದವು.
ಆತಿಥೇಯ ತಂಡಕ್ಕೆ ಸೋಲು: ಇಂದು ಬೆಳಗ್ಗೆ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಟೂರ್ನಿಯ ಬಲಿಷ್ಠ ತಂಡವೆನಿಸಿದ್ದ ಆಳ್ವಾಸ್ ಕಾಲೇಜು, ಆತಿಥೇಯ ಪೂರ್ಣಪ್ರಜ್ಞ ಕಾಲೇಜು ಮಹಿಳಾ ತಂಡವನ್ನು 39-25 ಅಂಕಗಳ ಅಂತರದಿಂದ ಪರಾಭವಗೊಳಿಸಿತ್ತು. ಚಾಂಪಿಯನ್ ತಂಡವೆನಿಸಿದ್ದ ಆಳ್ವಾಸ್, ಆತಿಥೇಯರಿಂದ ಪ್ರಬಲ ಹೋರಾಟವನ್ನೇ ಎದುರಿಸಿತ್ತು.
ಉಳಿದಂತೆ ಅಜ್ಜರಕಾಡಿನ ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ತಂಡ, ಪುತ್ತೂರು ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ತಂಡದ ವಿರುದ್ಧ 26-41 ಅಂಕಗಳ ಅಂತರದಿಂದ ಪರಾಭವ ಅನುಭವಿಸಿತ್ತು. ಎಸ್‌ಡಿಎಂ ಉಜಿರೆ ತಂಡ, ಪುತ್ತೂರಿನ ವಿವೇಕಾನಂದ ಕಾಲೇಜು ತಂಡವನ್ನು 43-7 ಸೋಲಿಸಿ ಸೆಮಿಫೈನಲ್‌ಗೇರಿದ್ದರೆ, ಮಂಗಳೂರು ವಿವಿ ಕ್ಯಾಂಪಸ್ ಕೊಣಾಜೆ ತಂಡ ಎದುರಾಳಿಯ ಅನುಪಸ್ಥಿತಿಯಲ್ಲಿ ನೇರವಾಗಿ ಸೆಮಿಪೈನಲ್‌ಗೇರಿತ್ತು.
ನಂತರ ನಡೆದ ಮೊದಲ ಸೆಮಿಫೈನಲ್ಸ್ ಪಂದ್ಯದಲ್ಲಿ ಎಸ್‌ಡಿಎಂ ಕಾಲೇಜು ಉಜಿರೆ ಮಹಿಳಾ ತಂಡ, ಮಂಗಳೂರು ವಿವಿ ಕೊಣಾಜೆ ತಂಡವನ್ನು 53- 20 ಅಂಕಗಳ ಅಂತರದಿಂದ ಮಣಿಸಿ ಫೈನಲಿಗೇರಿದರೆ, ಎರಡನೇ ಸೆಮಿ ಫೈನಲ್‌ನಲ್ಲಿ ಆಳ್ವಾಸ್ ಕಾಲೇಜು ಮೂಡಬಿದ್ರೆ ತಂಡವು ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಪುತ್ತೂರು ತಂಡವನ್ನು 49-2 ಅಂಕಗಳಿಂದ ಪರಾಭವಗೊಳಿಸಿ ಫೈನಲ್‌ಗೆ ತೇರ್ಗಡೆಗೊಂಡಿತ್ತು.
ಸಮಾರೋಪ: ಮಂಗಳೂರು ವಿವಿ ಹಾಗೂ ಉಡುಪಿಯ ಪೂರ್ಣಪ್ರಜ್ಞ ಕಾಲೇಜು(ಸ್ವಾಯತ್ತಗಳ) ಜಂಟಿ ಆಶ್ರಯದಲ್ಲಿ ಎರಡು ದಿನಗಳ ಕಾಲ ನಡೆದ ಟೂರ್ನಿಯ ಸಮಾರೋಪ ಸಮಾರಂಭ ಅದಮಾರು ಮಠಾಧೀಶರಾದ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಕ್ರೀಡಾ ವೀಕ್ಷಕರಾಗಿ ಆಗಮಿಸಿದ್ದ ಮಂಗಳೂರು ವಿವಿಯ ಡಾ.ರಮೇಶ್ ಹೆಚ್. ಎನ್., ಜಿಲ್ಲಾ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ರಾಷ್ಟ್ರ ಮಟ್ಟದ ವಾಲಿಬಾಲ್ ಆಟಗಾರ ಹಾಗೂಕಾಲೇಜಿನ ಹಳೆ ವಿದ್ಯಾರ್ಥಿ ಅರುಣ್ ಕುಮಾರ್, ಭಾರತೀಯ ಮಹಿಳಾ ಕಬಡ್ಡಿ ವಿಶ್ವಕಪ್‌ನಲ್ಲಿ ಚಿನ್ನದ ಪದಕ ಗೆದ್ದ ತಂಡದ ಸದಸ್ಯೆ ಧನಲಕ್ಷ್ಮಿ, ಉಡುಪಿ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ದಿನೇಶ್ ಪುತ್ರನ್, ಕಾಲೇಜಿನ ಆಡಳಿತ ಮಂಡಳಿ ಕಾರ್ಯದರ್ಶಿ ಡಾ.ಜಿ.ಎಸ್. ಚಂದ್ರಶೇಖರ್, ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ.ಎಂ.ಆರ್. ಹೆಗ್ಡೆ, ಕಾಲೇಜಿನ ಪ್ರಾಂಶುಪಾಲ ಡಾ. ರಾಮು ಎಲ್. ವೇದಿಕೆಯಲ್ಲಿದ್ದರು.
ಕಾಲೇಜಿನ ವಿದ್ಯಾರ್ಥಿನಿ ಸಿಂಧು ಹೆಗಡೆ ಪ್ರಾರ್ಥಿಸಿ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಮಂಜುನಾಥ ಕರಬ ಸ್ವಾಗತಿಸಿ ದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸುಕುಮಾರ್ ವಂದಿಸಿದರು. ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ.ಶಿವಕುಮಾರ್ ಅಳಗೋಡು ಕಾರ್ಯಕ್ರಮ ನಿರೂಪಿಸಿದರು.






